ಕಾಳಗಿ: ನೈತಿಕತೆ ಎಂಬುದನ್ನೇ ಅರಿಯದ ಕಲಬುರಗಿ ಸಂಸದ ಡಾ| ಉಮೇಶ ಜಾಧವ ಹಣ ಮತ್ತು ಅಧಿಕಾರಕ್ಕಾಗಿ ತಮ್ಮನ್ನೇ ಮಾರಿಕೊಂಡು ರಾಜಕೀಯ ಜನ್ಮ ನೀಡಿದ ಕಾಂಗ್ರೆಸ್ ಪಕ್ಷ ಹಾಗೂ ನಾಯಕರ ವಿರುದ್ಧವೇ ತಿರುಗಿಬೀಳುವ ಕೀಳುಮಟ್ಟಕ್ಕೆ ಇಳಿದಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಸುಭಾಷ ರಾಠೊಡ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಸೇರಿ ಬಡಾ ತಾಂಡಾ, ಸಾಲಹಳ್ಳಿ, ಕೊಡದೂರ, ಹಲಚೇರಾ, ಕಾಳಗಿಯಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮದ ಬಳಿಕ ಕಾಳಗಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ದೇಶವೇ ಮೆಚ್ಚುವ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಸಾಧನೆ ಕುರಿತು ಮೌಲ್ಯ ಮಾಪನ ಮಾಡುವ ಯೋಗ್ಯತೆ ಉಮೇಶ ಜಾಧವ ಅವಗಿಲ್ಲ. ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ 371ನೇ (ಜೆ)ಕಲಂ ಜಾರಿಗೊಳಿಸಿದ್ದರಿಂದ ಹಿಡಿದು ಕಲಬುರಗಿ ರೈಲ್ವೆ ವಿಭಾಗ, ಜವಳಿ ಪಾರ್ಕ್, ಇಎಸ್‌ಐ ಆಸ್ಪತ್ರೆ, ಔಟರ್ ರಿಂಗ್ ರೋಡ್ ಮಂಜೂರಾತಿ, ಕೇಂದ್ರೀಯ ವಿಶ್ವವಿದ್ಯಾಲಯ ಸೇರಿದಂತೆ ಅಸಂಖ್ಯ ಯೋಜನೆಗಳನ್ನು ಈ ಭಾಗಕ್ಕೆ ತಂದಿದ್ದಾರೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ ಮಾತನಾಡಿ, ಕಲಬುರಗಿ ಸಂಸದ ಡಾ| ಉಮೇಶ ಜಾಧವ ಅವರು ಡಾ| ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದ್ದೆ ಸಾಧನೆ ಎಂಬಂತೆ ಬೀಗುತ್ತ ಸಂಪೂರ್ಣ ನಿಷ್ಕ್ರೀಯರಾಗಿ ಸಮಯ ಕಳೆಯುತ್ತಿದ್ದಾರೆ ಎಂದರು.
ಗ್ರಾ.ಪಂ ಮಾಜಿ ಅಧ್ಯಕ್ಷ ಶಿವಶರಣಪ್ಪ ಕಮಲಾಪುರ, ಕಾಳಗಿ ಬ್ಲಾಕ್ ಕಾಂಗ್ರೆಸ್ ವಕ್ತಾರ ರಾಘವೇಂದ್ರ ಗುತ್ತೇದಾರ, ಪ್ರಮುಖರಾದ ಮಹಾಂತೇಶ ಪಾಟೀಲ, ದೇವಲಾ ನಾಯಕ್, ವಿಶ್ವನಾಥ ವನಮಾಲಿ, ರವಿದಾಸ ಪತಂಗೆ, ಪ್ರಕಾಶ ಸೇಗಾಂವಕರ್, ಗುಡೂಸಾಬ್ ಕಮಲಾಪುರ, ಗುರುರಾಜ ಸುಂಠಾಣ, ನೀಲಕಂಠ ಮಡಿವಾಳ, ಸವಿಜಯ ಕುಮಾರ ಪಾಟೀಲ, ಪರ ಮೇಶ್ವರ ಮಡಿವಾಳ, ಶಿವಾನಂದ ಮಜ್ಜಗಿ, ಜಿಯಾವುದ್ದಿನ್ ಸೌದಾಗರ, ಅಸ್ಲಂಬೇಗ ಬಿಜಾಪುರ ಮತ್ತಿತರರು ಇದ್ದರು.