Advertisement

ಕರೀಂಲಾಲ ತೆಲಗಿ ಸ್ಥಿತಿ ಚಿಂತಾಜನಕ

07:46 AM Oct 24, 2017 | Team Udayavani |

ಬೆಂಗಳೂರು: ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಬಹುಕೋಟಿ ರೂ.ನಕಲಿ ಛಾಪಾ ಕಾಗದ ಹಗರಣದ ಪ್ರಮುಖ ಅಪರಾಧಿ ಕರೀಂಲಾಲ ತೆಲಗಿ ಸ್ಥಿತಿ ಚಿಂತಾಜನಕವಾಗಿದ್ದು, ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಹು ಅಂಗಾಗ ವೈಫ‌ಲ್ಯದಿಂದ ಬಳಲುತ್ತಿದ್ದ ತೆಲಗಿ ಮೆದುಳು ಜ್ವರ ಹಿನ್ನೆಲೆಯಲ್ಲಿ ಹತ್ತು ದಿನಗಳ ಹಿಂದೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ. ಆತನನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ತೆಲಗಿಯನ್ನು ಹತ್ತು ದಿನಗಳ ಹಿಂದೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. 2 ದಿನಗಳ ಹಿಂದೆ ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ಮಗಳು
ಹಾಗೂ ಅಳಿಯ ಸೇರಿ ಕುಟುಂಬ ಸದಸ್ಯರು ಆಸ್ಪತ್ರೆಯಲ್ಲೇ ಉಳಿದಿದ್ದಾರೆ.

Advertisement

ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಹಾಗೂ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದ ನಕಲಿ ಛಾಪಾ ಕಾಗದ
ಪ್ರಕರಣಕ್ಕೆ ಸಂಬಂಧಿಸಿದಂತೆ ಕರೀಂಲಾಲ ತೆಲಗಿಯನ್ನು ಬಂಧಿಸಲಾಗಿತ್ತು. 12 ರಾಜ್ಯಗಳಲ್ಲಿ ಹತ್ತು ವರ್ಷ 72 ಕೇಂದ್ರಗಳ ಮೂಲಕ ಸಾವಿರಾರು ಕೋಟಿ ರೂ. ವಹಿವಾಟು ನಡೆಸಿದ್ದ ಆತನ ವಿರುದ್ಧದ ಆರೋಪ ಸಾಬೀತಾಗಿ ಶಿಕ್ಷೆ ವಿಧಿಸಿತ್ತು. 55 ವರ್ಷದ ಕರೀಂಲಾಲ ತೆಲಗಿ ಹಗರಣಕ್ಕೆ ಸಂಬಂಧಿಸಿದಂತೆ ಆಗಸ್ಟ್‌ 2001ರಲ್ಲಿ ಅಜೆರ್‌ ನಲ್ಲಿ ಬಂಧಿತನಾಗಿದ್ದ. ಬೆಳಗಾವಿ ಮೂಲದ ತೆಲಗಿ ಸೌದಿ ಅರಬ್‌ಗ ತೆರಳಿ ಟ್ರಾವೆಲ್‌ ಏಜೆಂಟಾಗಿ ಕೆಲಸ ಮಾಡಿ ನಂತರ ಮುಂಬೈಗೆ ಬಂದು ಭೂಗತ ಲೋಕದ ಸಂಪರ್ಕ ಗಳಿಸಿ ನಂತರ ನಾಸಿಕ್‌ನ ಸರ್ಕಾರಿ ಮುದ್ರಣಾಲಯದ ಕೆಲವು ಸಿಬ್ಬಂದಿ ಜತೆ ನಂಟು ಬೆಳೆಸಿ ನಕಲಿ ಛಾಪಾ ಕಾಗದ ಮುದ್ರಣ ದಂಧೆಯಲ್ಲಿ ತೊಡಗಿದ್ದ.

ರಾಜಕೀಯ ನಾಯಕರ ಬೆಂಬಲದಿಂದಲೇ ನಕಲಿ ಛಾಪಾ ಕಾಗದ ಮುದ್ರಣಕ್ಕೆ ಬೇಕಾದ ಕಾಗದ ಆಮದು ಮಾಡಿಕೊಳ್ಳುತ್ತಿದ್ದ. ನಾಸಿಕ್‌ ಮುದ್ರಣಾಲಯದಲ್ಲಿ ಸರ್ಕಾರಿ ಛಾಪಾ ಕಾಗದದ ಸೀರಿಯಲ್‌ ನಂಬರ್‌ಗಳ ಮಾಹಿತಿ ಪಡೆದು ಅದೇ ಸೀರಿಯಲ್‌ ನಂಬರ್‌ಗಳ ಛಾಪಾ ಕಾಗದ ಮುದ್ರಿಸಿ ಮುಂಬೈ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದ. ಅದೇ ರೀತಿ ದೇಶಾದ್ಯಂತ ಜಾಲ ಹೊಂದಿದ್ದ. 300ಕ್ಕೂ ಹೆಚ್ಚು ಜನರನ್ನು ಇದಕ್ಕಾಗಿಯೇ ನೇಮಿಸಿಕೊಂಡಿದ್ದ. ಬ್ಯಾಂಕ್‌, ವಿಮೆ ಕಂಪನಿ, ಷೇರು ವಹಿವಾಟು ಮಾಡುವವರಿಗೆ ಅಗತ್ಯವಾದ ಛಾಪಾ ಕಾಗದ ಪೂರೈಕೆ ಮಾಡುತ್ತಿದ್ದ. 1990ರಲ್ಲೇ ಈತನ ವಿರುದ್ಧ ಪ್ರಕರಣಗಳು ದಾಖಲಾಗಿದ್ದರೂ ಅಂತಿಮವಾಗಿ 2001ರಲ್ಲಿ ಬಂಧಿಸಲಾಗಿತ್ತು. ಬೆಂಗಳೂರಿನ ಕಲಾಸಿಪಾಳ್ಯಂ, ಕೆ.ಆರ್‌.ಮಾರುಕಟ್ಟೆ, ಹಲಸೂರು ಗೇಟ್‌, ಉಪ್ಪಾರಪೇಟೆ ಪೊಲೀಸ್‌ ಠಾಣೆಗಳಲ್ಲೂ ಪ್ರಕರಣಗಳು ದಾಖಲಾಗಿದ್ದವು.

ಇಕ್ಕಟ್ಟಿಗೆ ಸಿಲುಕಿದ್ದ ಸರ್ಕಾರ: ಹಗರಣ ಬೆಳಕಿಗೆ ಬಂದು ಕರೀಂಲಾಲ ತೆಲಗಿ ಬಂಧನವಾದಾಗ ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತವಿದ್ದು ಎಸ್‌.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದರು. ಆಗ ಸಚಿವ ಸಂಪುಟದ ಸಹೋದ್ಯೋಗಿ ರೋಷನ್‌ಬೇಗ್‌ ಅವರ ಸಹೋದರ ತೆಲಗಿ ಜತೆ ನಂಟು ಹೊಂದಿದ್ದ ಎಂಬ ಆರೋಪವೂ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು. ಸರ್ಕಾರವೂ ಇಕ್ಕಟ್ಟಿಗೆ ಸಿಲುಕಿತ್ತು.

Advertisement

Udayavani is now on Telegram. Click here to join our channel and stay updated with the latest news.

Next