Advertisement

ಸ‌ರ್ಕಾರಿ ಯೋಜನೆಗಳು ವಿಚೇತನರಿಗೆ ತಲುಪಲಿ

10:19 AM Feb 02, 2019 | |

ಕಾರವಾರ: ಅಂಗವಿಕಲರಿಗೆ ಸ್ವಾಭಿಮಾನದಿಂದ ಬದುಕಲು ಅವರಿಗೆ ಇರುವ ಸರ್ಕಾರಿ ಇಲಾಖೆಗಳು ಸೌಲಭ್ಯಗಳನ್ನು ವಿವಿಧ ಇಲಾಖೆಗಳ ಅಧಿಕಾರಿಗಳು ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತರಬೇಕು ಎಂದು ರಾಜ್ಯ ಅಂಗವಿಕಲ ವ್ಯಕ್ತಿಗಳ ಅಧಿನಿಯಮ ಆಯುಕ್ತ ವಿ.ಎಸ್‌. ಬಸವರಾಜು ಸೂಚಿಸಿದ್ದಾರೆ.

Advertisement

ಡಿಸಿ ಕಚೇರಿಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಉತ್ತರ ಕನ್ನಡ ಜಿಲ್ಲೆಯಲ್ಲಿ 21 ಸಾವಿರ ವಿಕಲಚೇತನರು ಗುರುತಿಸಿಕೊಂಡಿದ್ದಾರೆ. ಕೇವಲ ಶೇ.10 ರಷ್ಟು ಅಂಗವಿಕಲರಿಗೆ ಬಸ್‌ಪಾಸ್‌ ಸೌಲಭ್ಯ ನೀಡಲಾಗಿದೆ. ಆಯಾ ತಾಲೂಕಿನ ಬಸ್‌ ಡಿಪೋಗಳಲ್ಲಿ ಅಂಗವಿಕಲರಿಗೆ ಬಸ್‌ಪಾಸ್‌ ನೀಡುವ ವ್ಯವಸ್ಥೆ ಜಾರಿಗೆ ತನ್ನಿ. ಜಾತ್ರೆ ಸಂದರ್ಭದಲ್ಲಿ ಅಂಗವಿಕಲರಿಗೆ ಬಸ್‌ಗಳಲ್ಲಿ ಓಡಾಡಲು ಅವಕಾಶ ಕಲ್ಪಿಸಿ ಎಂದು ಸೂಚಿಸಿದರು.

ಶಿಕ್ಷಣ ಇಲಾಖೆಯವರು ಅಂಗವಿಕಲ ಮಕ್ಕಳನ್ನು ಹೈಸ್ಕೂಲ್‌ ನಂತರ ಕಾಲೇಜಿಗೆ ಕರೆತರಲು ಯತ್ನಿಸಿ. ಅಂಗವಿಕಲ ಮಕ್ಕಳಿಗೆ ಇರುವ ಸ್ಕಲಾರ್‌ಶಿಪ್‌ ತಕ್ಷಣ ತಲುಪಿಸಿ ಎಂದು ಆದೇಶಿಸಿದರು. ಪಿಯು ಉಪ ನಿರ್ದೇಶಕರು ಅಂಗವಿಕಲ ಮಕ್ಕಳ ಬಗ್ಗೆ ಕರುಣೆ ಇಟ್ಟುಕೊಳ್ಳಿ, ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಇರಲಿ ಎಂದು ಎಚ್ಚರಿಸಿದರು. ಹಾಸ್ಟೆಲ್‌ಗ‌ಳಿಗೆ ಹೆಚ್ಚು ಅಂಗವಿಕಲ ಮಕ್ಕಳು ದಾಖಲಾಗುವಂತೆ ನೋಡಿಕೊಳ್ಳಿ ಮತ್ತು ವಿಶೇಷ ಶೌಚಾಲಯದ ವ್ಯವಸ್ಥೆ ತಕ್ಷಣ ಕಲ್ಪಿಸಿ ಎಂದು ಸಾಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.

ಅಂಗವಿಕಲರಿಗಾಗಿ ಜಿಲ್ಲಾ ಮಟ್ಟದಲ್ಲಿ ಎರಡು ಪ್ರಮುಖ ಕಾರ್ಯಕ್ರಮಗಳಾದ ವಿಕಲಾಂಗ ಮಕ್ಕಳ ತಾಯಂದಿರಿಗೆ ತರಬೇತಿ ನೀಡುವ ಕಾರ್ಯವಾಗಬೇಕು. ಹಾಗೂ ಜಿಲ್ಲಾ ವಿಕಲಾಂಗ ಮಕ್ಕಳ ಆರಂಭದಲ್ಲಿ ಗುರುತಿಸುವಿಕೆ ಕೇಂದ್ರಕ್ಕೆ ಸಿದ್ಧತೆ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರಗಳು ಜಿಲ್ಲಾಸ್ಪತ್ರೆಯಲ್ಲಿ ಆರಂಭ ಆಗಬೇಕಿದೆ. ಈ ಸಂಬಂಧ ಈಗಾಗಲೇ ಅನುದಾನವೂ ಬಿಡುಗಡೆಯಾಗಿದ್ದು ಶೀಘ್ರವೇ ಅನುಷ್ಠಾನಕ್ಕೆ ಬರಲಿದೆ. ಇದರಿಂದ ಅಂಗವಿಕಲ ಮಕ್ಕಳ ಹಾಗೂ ಪೋಷಕರಿಗೆ ಹಲವು ಅನುಕೂಲಗಳು ಆಗಲಿವೆ ಎಂದರು.

Advertisement

ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದಾಗ ವೃದ್ಧ ಹಾಗೂ ಮಾನಸಿಕ ಅಸ್ವಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಒಳರೋಗಿಗಳಾಗಿ ದಾಖಲಾಗಿರುವುದು ಕಂಡು ಬಂದಿದೆ. ಇತ್ತೀಚಿನ ದಿನಗಳಲ್ಲಿ ವೃದ್ಧರ ವಸತಿ ಕೇಂದ್ರದ ಅವಶ್ಯಕತೆಯಿದ್ದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದರು.

ಮಾನಸಿಕ ಅಸ್ವಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಕಂಡು ಬಂದಿದ್ದು ಇವರ ಪುನರ್ವಸತಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಶಿಕ್ಷಣ, ಅಂಗವಿಕಲರ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ವಿಶೇಷ ಯೋಜನೆಯೊಂದನ್ನು ರೂಪಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

ಇತರ ಎಲ್ಲ ಇಲಾಖೆಗಳೂ ನಿರ್ದಿಷ್ಟ ಅನುದಾನದಲ್ಲಿ ಅಂಗವಿಕಲರಿಗೆ ಗೌರವದ ಬದುಕು ನೀಡುವ ಯೋಜನೆಗಳನ್ನು ಮಾನವೀಯ ನೆಲೆಗಟ್ಟಿನಲ್ಲಿ ಅನುಷ್ಠಾನಗೊಳಿಸುವಂತೆ ಅವರು ಸೂಚಿಸಿದರು.

ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌, ಜಿಪಂ ಸಿಇಒ ಎಂ.ರೋಷನ್‌, ಹೆಚ್ಚುವರಿ ಜಿಲ್ಲಾ ಪೊಲೀಸ್‌ ಅಧೀಕ್ಷಕ ಗೋಪಾಲ್‌ ಬ್ಯಾಕೋಡ್‌, ಆಯೋಗದ ಸದಸ್ಯರಾದ ಪದ್ಮನಾಭ, ರೂಪಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next