Advertisement

ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವು : ವೈದ್ಯನ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ

05:30 PM Sep 05, 2020 | sudhir |

ಕಾರವಾರ: ಕಿಮ್ಸ್ ಅಧಿಕ್ಷಕ, ಹೆರಿಗೆ ವೈದ್ಯ ಶಿವಾನಂದ ಕುಡ್ತಲಕರ್ ವಿರುದ್ಧ ಕಾರವಾರ ನಗರದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಯಿತು. ಸೆ.3 ರಂದು ವೈದ್ಯರ ನಿರ್ಲಕ್ಷ್ಯ ದಿಂದ ಸಾವನ್ನಪ್ಪಿದ ಗೀತಾ ಎಸ್.ಬಾನವಳಿ(28) ಅವರ ಕುಟುಂಬದವರು ವೈದ್ಯ ಶಿವಾನಂದ ಕುಡ್ತಲಕರ್ ವಿರುದ್ಧ ನಗರಠಾಣೆಯಲ್ಲಿ ದೂರು ದಾಖಲಿಸಿದ್ದರೂ ವೈದ್ಯರ ವಿರುದ್ಧ ಪೊಲೀಸರು ಯಾವುದೇ ಕ್ರಮವನ್ನು ಕೈಗೊಳ್ಳದ ನಿಟ್ಟಿನಲ್ಲಿ ರೊಚ್ಚಿಗೆದ್ದ ಮೀನುಗಾರರ ಮುಖಂಡರು, ಇತರ ಸಮುದಾಯದ ಮುಖಂಡರು ಶನಿವಾರ ಬೃಹತ್ ಪ್ರತಿಭಟನೆಗೆ ಇಳಿದರು.

Advertisement

ಮೀನು ಮಾರಾಟ ಬಂದ್ ಮಾಡಿದರಲ್ಲದೆ ಯಮಕಿಂಕರ‌ ವೈದ್ಯನನ್ನು ಅಮಾನತು ಮಾಡಿ, ‌ಬಂಧಿಸಿ ಎಂದು ಜಿಲ್ಲಾಡಳಿತದ ಮೂಲಕ‌ ಸರಕಾರಕ್ಕೆ ಎಚ್ಚರಿಕೆ ನೀಡಿದರು. ವೈದ್ಯ ಶಿವಾನಂದ ವಿರುದ್ಧ ಸಾಕಷ್ಟು ದೂರುಗಳು ಈ ಹಿಂದೆ ಬಂದಿದ್ದು. ಶಿವಾನಂದ ಹಣ ಪಡೆದು ಹೆರಿಗೆ ಮಾಡ್ತಾರೆ. ಅನಗತ್ಯ ಸಿಜರಿನ್ ಮಾಡುತ್ತಾರೆ. ಆಸ್ಪತ್ರೆಯಲ್ಲಿ ದಬ್ಬಾಳಿಕೆ ವಾತಾವರಣ ಇದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಅ.31ಕ್ಕೆ ಹೆರಿಗೆಯಾಗಿದ್ದ ಗೀತಾ ಬಾನವಳಿ ಆರೋಗ್ಯವಾಗಿದ್ದರು. ಅವರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಸೆ.3ರಂದು ಕರೆದೊಯ್ದು ನಿರ್ಲಕ್ಷ್ಯ ಮಾಡಲಾಗಿದೆ.‌ ಶಸ್ತ್ರಚಿಕಿತ್ಸೆಗೆ ಮುನ್ನ ನಡೆದು ಹೋದ ಮಹಿಳೆ ಶವವಾಗಿ ಹೊರ ಬಂದಿದ್ದಳು. ಇದಕ್ಕೆ ವೈದ್ಯಕೀಯ ನಿರ್ಲಕ್ಷ್ಯ ಕಾರಣ ಎಂದು ಕುಟುಂಬದವರ ಆರೋಪ ಮಾಡಿದ್ದಾರೆ.‌ ವೈದ್ಯನನ್ನು ಬಂಧಿಸಿ, ಕೂಡಲೇ ಅಮಾನತು ಮಾಡಿ. ‌ಕಾರವಾರದಲ್ಲಿ‌ 15 ವರ್ಷದಿಂದ‌ ಈ ವೈದ್ಯ ಇದ್ದು, ‌ಮಹಿಳೆಯರ ಪಾಲಿಗೆ ಕಂಠಕ ಆಗಿದ್ದಾನೆ. ಹಾಗಾಗಿ ಆತನನ್ನು ಬೇರೆಡೆಗೆ ವರ್ಗ ಮಾಡಿ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

ಜಿಲ್ಲಾಡಳಿತಕ್ಕೆ ಮನವಿ ನೀಡಿ , ಪೀಡಕ ವೈದ್ಯನ ಬಂಧನಕ್ಕೆ ಗಡುವು ನೀಡಿದ್ದಾರೆ. ವಾರದಲ್ಲಿ ಬಂಧನವಾಗದಿದ್ದರೆ ಬೃಹತ್ ಪ್ರತಿಭಟನೆಯನ್ನು ನಡೆಸುವ ಎಚ್ಚರಿಕೆ ನೀಡಿದ್ದಾರೆ. ಮೀನುಗಾರರ ಮುಖಂಡ ರಾಜು ತಾಂಡೇಲ, ರಾಘು ನಾಯ್ಕ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next