Advertisement

ಪತ್ನಿಯ ಮೇಲೆ ಗುಂಡಿನ ದಾಳಿ ನಡೆಸಿ ಅಪರಿಚಿತರು ದಾಳಿ ನಡೆಸಿದರೆಂದು ಕಥೆ ಕಟ್ಟಿದ ಪತಿ

01:56 PM Dec 08, 2020 | sudhir |

ಕಾರವಾರ: ಕದ್ರಾ ಪೊಲೀಸ್‌ ಠಾಣೆ ವ್ಯಾಪ್ತಿಯ ಗೋಯರ್‌ ಗ್ರಾಮದಲ್ಲಿ ಮಹಿಳೆಗೆ ಗುಂಡು ತಗುಲಿದ ಪ್ರಕರಣವನ್ನು ಕದ್ರಾ ಪೊಲೀಸರು ಭೇದಿಸಿದ್ದು, ಈ ಪ್ರಕರಣದಲ್ಲಿ ಮಹಿಳೆಯ ಪತಿಯೇ ಆರೋಪಿ ಎಂದು ತನಿಖೆಯಿಂದ ಬಯಲಾಗಿದೆ ಎಂದು ಎಸ್ಪಿ ಶಿವಪ್ರಕಾಶ್‌ ಡಿ. ತಿಳಿಸಿದರು.

Advertisement

ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಹಿಳೆಯ ಮೇಲೆ ಆಕೆಯ ಪತಿಯೇ ನಾಡ ಬಂದೂಕಿನಿಂದ
ಗುಂಡು ಹಾರಿಸಿದ್ದ. ಅದೃಷ್ಟವಶಾತ್‌ ಆಕೆ ಬಚಾವಾದಳು. ಆದರೆ ಗಂಡ-ಹೆಂಡತಿ ಸೇರಿ ಪೊಲೀಸರಿಗೆ ಆರಂಭದಲ್ಲಿ ತಪ್ಪು ಮಾಹಿತಿ ನೀಡಿದ್ದರು. ನಂತರ ಗಾಯಗೊಂಡ ಮಹಿಳೆ ಸರಿಯಾದ ವಿವರ ನೀಡಿದ್ದು, ಪ್ರಕರಣ ದಾಖಲಿಸಿ ಆಕೆಯ ಪತಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ ಎಂದರು.

ಕಳೆದ ಶುಕ್ರವಾರ ಕದ್ರಾ ಪೊಲೀಸ್‌ ಠಾಣೆಗೆ ಬಂದಿದ್ದ ರಮೇಶ ನಾರಾಯಣ ದೇಸಾಯಿ ಎಂಬಾತ ಅಂದು ಬೆಳಗ್ಗೆ 7.30ರ ಸುಮಾರಿಗೆ ತಾನು ತನ್ನ ಹೆಂಡತಿ ರಸಿಕಾಳ ಜೊತೆ ಗೋಯರ್‌ ಗ್ರಾಮದ ಅರಣ್ಯ ಪ್ರದೇಶದಲ್ಲಿ ಒಣ ಕಟ್ಟಿಗೆ ಸಂಗ್ರಹಿಸುತ್ತಿದ್ದಾಗ ಯಾರೋ ಆಕೆಯನ್ನು ಕೊಲ್ಲುವ ಉದ್ದೇಶದಿಂದ ಆಕೆಯ ಮೇಲೆ ಗುಂಡು ಹಾರಿಸಿ ಗಾಯಗೊಳಿಸಿದ್ದಾರೆ. ಈ ಗುಂಡುಗಳು ತನ್ನ ಹೆಂಡತಿಯ ಎಡಭುಜ ಹಾಗೂ ಕಿಬ್ಬೊಟ್ಟೆಗೆ ತಗುಲಿ ಆಕೆಗೆ ಗಾಯವಾಗಿದೆ ಎಂದು ದೂರು ನೀಡಿದ್ದ. ಈ ದೂರನ್ನು ಐಪಿಸಿ 370ನೇ ಕಲಂ ಹಾಗೂ ಭಾರತೀಯ ಶಸ್ತ್ರಾಸ್ತ್ರ ಕಾಯಿದೆಯ ಅಡಿಯಲ್ಲಿ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿದ್ದರು.

ಇದನ್ನೂ ಓದಿ:ಗ್ರಾಪಂ ಚುನಾವಣೆ ಸ್ಪರ್ಧಿಸಲು ಅಗತ್ಯ ದಾಖಲೆಗಾಗಿ ತಾಲೂಕು ಕಚೇರಿಗೆ ಮುಗಿಬಿದ್ದ ಸ್ಪರ್ಧಿಗಳು

ಗಾಯಗೊಂಡ ರಸಿಕಾರನ್ನು ನಗರದ ಮೆಡಿಕಲ್‌ ಕಾಲೇಜಿನ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ತನಿಖೆಗೆ ಇಳಿದ ಪೊಲೀಸರು
ಮೊದಲು ಗ್ರಾಮಸ್ಥರನ್ನು ಈ ಬಗ್ಗೆ ವಿಚಾರಿಸಿದರು. ಪ್ರಾಥಮಿಕ ತನಿಖೆಯಲ್ಲಿ ಊರಿನ ಜನ ರಸಿಕಾಳ ಗಂಡ ರಮೇಶನ ಮೇಲೆ ಸಂಶಯ ವ್ಯಕ್ತಪಡಿಸಿದ್ದಾರೆ. ಆಗ ಪೊಲೀಸರು ರಸಿಕಾಳನ್ನು ತೀವ್ರವಾಗಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆಯ ವೇಳೆ ಆಕೆಯ ಪತಿ ರಮೇಶನೇ ತನ್ನ ಮನೆಯಲ್ಲಿನ ನಾಡ ಬಂದೂಕಿನಿಂದ ಕೃತ್ಯ ಎಸಗಿದ್ದಾನೆ ಎಂಬ ವಿಷಯ ಬೆಳಕಿಗೆ ಬಂದಿದೆ.

Advertisement

ಗ್ರಾಮಸ್ಥರ ಪ್ರಕಾರ ಈ ರಮೇಶನ ತಲೆಯಲ್ಲಿ ಅದೇನೋ ಸಂಶಯದ ಹುಳ ಹೊಕ್ಕಿತ್ತಂತೆ. ಆಕೆಯ ಶೀಲವನ್ನು ಸಂಶಯಿಸಿ ಸದಾ ಆಕೆಯ ಜೊತೆ ಕಿತ್ತಾಡುತ್ತಿದ್ದ. ದಿನವು ಒಂದಿಲ್ಲೊಂದು ಗಲಾಟೆ ನಡೆಸಿ ಆಕೆಯನ್ನು ಚುಚ್ಚುತ್ತಿದ್ದ. ಗುರುವಾರ ರಾತ್ರಿ ಸುಮಾರು
10.30ರ ಹೊತ್ತಿಗೆ ಜಗಳ ಆರಂಭವಾಗಿದೆ. ಮಾತಿಗೆ ಮಾತು ಬೆಳೆದು ಅಲ್ಲಿಯೇ ಇದ್ದ ನಾಡ ಬಂದೂಕಿನಿಂದ ಆಕೆಯ ಮೇಲೆ
ಗುಂಡು ಹಾರಿಸಿದ್ದಾನೆ. ಆಕೆಯ ಅದೃಷ್ಟ ಚೆನ್ನಾಗಿತ್ತು. ಆತ ಹಾರಿಸಿದ ಗುಂಡು ಭುಜಕ್ಕೆ ತಗುಲಿದೆ. ತನ್ನ ತಪ್ಪಿನ ಅರಿವಾಗಿ
ಆಕೆಯನ್ನು ಆಸ್ಪತ್ರೆಗೆ ಸಾಗಿಸಿ ಮರುದಿನ ಪೊಲೀಸ್‌ ಠಾಣೆಯಲ್ಲಿ ತನ್ನ ಹೆಂಡತಿಯ ಜೊತೆ ತಾನು ಕಾಡಿಗೆ ಹೋದಾಗ ಯಾರೋ
ಗುಂಡು ಹಾರಿಸಿದ್ದಾರೆ ಎಂದು ದೂರು ನೀಡಿದ್ದಾನೆ. ಪೊಲೀಸರೇ ನಂಬುವಂತೆ ಕತೆ ಕಟ್ಟಿದ್ದ. ಸತ್ಯ ಹೇಳಿದರೆ ಗಂಡ ತನಗೆ ಮುಂದೆ
ಅಪಾಯನ್ನುಂಟು ಮಾಡಬಹುದು ಎಂಬ ಕಾರಣಕ್ಕೆ ರಸಿಕಾ ಸಹ ಗಂಡನ ಕಥೆಯನ್ನೇ ಪುನರುತ್ಛರಿಸಿದ್ದಳು. ನಂತರ ಚಿಕಿತ್ಸೆಯ ವೇಳೆ ಪೊಲೀಸರಿಗೆ ಸತ್ಯವನ್ನು ಹೇಳಿದ ಕಾರಣ ಈತ ಕೃತ್ಯಕ್ಕೆ ಬಳಸಿದ ನಾಡ ಬಂದೂಕು, ಇತರ ಪರಿಕರಗಳನ್ನು ಪೊಲೀಸರು
ವಶಪಡಿಸಿಕೊಂಡಿದ್ದಾರೆ. ರಮೇಶನನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಎಸ್ಪಿ ಹೇಳಿದರು.

ಇದನ್ನೂ ಓದಿ:ಭಾರತೀಯ ಮೂಲದ ಅನಿಲ್ ಸೋನಿ ವಿಶ್ವ ಆರೋಗ್ಯ ಸಂಸ್ಥೆ ಪ್ರತಿಷ್ಠಾನದ ಸಿಇಒ

ಕಾರವಾರದ ಪೊಲೀಸ್‌ ಉಪಾಧೀಕ್ಷಕ ಅರವಿಂದ ಕಲಗುಜ್ಜಿ, ಸಿಪಿಐ ಸಂತೋಷ ಶೆಟ್ಟಿ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ
ಮಲ್ಲಾಪುರ ಪೊಲೀಸ್‌ ಠಾಣೆ ಪಿಎಸ್‌ಐ, ಕದ್ರಾ ಠಾಣೆಯ ಪಿಎಸ್‌ಐ ರಾಜಶೇಖರ ಸಾಗನೂರ ಇವರು ತನಿಖೆ ನಡೆಸಿದ್ದರು. ಈ
ಪ್ರಕರಣದ ಆರೋಪಿಯನ್ನು ಪತ್ತೆ ಮಾಡುವಲ್ಲಿ ಶ್ರಮಿಸಿದ ಮಲ್ಲಾಪುರ ಠಾಣೆ ಪ್ರಭಾರ ಕದ್ರಾ ಪಿಎಸ್‌ಐ ರಾಜಶೇಖರ ಸಾಗನೂರ ಮತ್ತು ಚಿತ್ತಾಕುಲ ಅಪರಾಧ ವಿಭಾಗದ ಪಿಎಸ್‌ಐ ಎಂ.ಜಿ. ಕುಂಬಾರ ಹಾಗೂ ಮಲ್ಲಾಪುರ ಠಾಣೆಯ ಎಎಸ್‌ಐ ವೆಂಕಟೇಶ ಹರಿಕಂತ್ರ, ಎಚ್‌.ಸಿ. ಗಳಾದ ವೆಂಕಟೇಶ, ಸುಬ್ರಮಣ್ಯ, ಪಿಸಿ ನಿಂಗಪ್ಪ , ಶೃತಿ ಪೂಜಾರಿ ಹಾಗೂ ಕದ್ರಾ ಠಾಣೆಯ ಎ.ಎಸ್‌.ಐ. ಕೃಷ್ಣಾನಂದ ಬಿ. ನಾಯ್ಕ, ಎಚ್‌.ಸಿ. ಗಳಾದ ಗೋಪಾಲ್‌ ಎಂ. ಚವ್ಹಾಣ, ಕೃಷ್ಣಾನಂದ ಮತ್ತು ಪಿ.ಸಿ. ಗಳಾದ ದಾಮೋದರ ನಾಯ್ಕ, ಮಂಜುನಾಥ ಬಾಲಿ, ನಾಗರಾಜ ತಿಮ್ಮಾಪುರ, ದಿವಾನ ಅಲಿ ಸಾಣಿ, ನಾಗವೇಣಿ, ಶಾರದಾ ಇತರ ಸಿಬ್ಬಂದಿಗಳು
ಭಾಗವಹಿಸಿದ್ದು, ಈ ಪ್ರಕರಣವನ್ನು ಅತ್ಯಂತ ಕ್ಷಿಪ್ರಗತಿಯಲ್ಲಿ ತನಿಖೆ ನಡೆಸಿ ಆರೋಪಿತನನ್ನು ಪತ್ತೆಹಚ್ಚಿದ್ದನ್ನು ಎಸ್‌.ಪಿ. ಶಿವಪ್ರಸಾದ ಅವರು ಶ್ಲಾಘಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next