Advertisement

ಸಚ್ಚಾರಿತ್ರ್ಯ ಘೋಷಣೆ ಪ್ರಕಟಣೆ ಕಡ್ದಾಯ

11:29 AM Mar 13, 2019 | |

ಕಾರವಾರ: ಸುಪ್ರೀಂ ಆದೇಶದಂತೆ ಪ್ರಸಕ್ತ ಲೋಕಸಭೆ ಚುನಾವಣೆ ಅಭ್ಯರ್ಥಿ ತನ್ನ ಸಚ್ಚಾರಿತ್ರ್ಯದ ಬಗ್ಗೆ ಸ್ವಯಂ ಘೋಷಣೆ ಮಾಡಿ ಮತದಾನಕ್ಕೆ 48 ಗಂಟೆಗಳ ಮುನ್ನ ಮೂರು ಬಾರಿ ತನ್ನ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚು ಪ್ರಚಾರವುಳ್ಳ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟಣೆ ನೀಡುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಹರೀಶ್‌ಕುಮಾರ್‌ ಹೇಳಿದ್ದಾರೆ.

Advertisement

ಡಿಸಿ ಕಚೇರಿಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಕೇಬಲ್‌ ಆಪರೇಟರ್‌ಗಳು ಹಾಗೂ ಮುದ್ರಕರೊಂದಿಗೆ ಸಭೆ ನಡೆಸಿದ ಅವರು, ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿ ಮತದಾನಕ್ಕೆ 48 ಗಂಟೆಗಳ ಮುನ್ನ ಮೂರು ಬಾರಿ ತಮ್ಮ ಸಚ್ಚಾರಿತ್ರ್ಯದ ಬಗ್ಗೆ ಪ್ರಮಾಣೀಕರಿಸಿ ಹೆಚ್ಚು ಪ್ರಚಾರವುಳ್ಳ ಮುದ್ರಣ ಮತ್ತು ಎಲೆಕ್ಟ್ರಾನಿಕ್‌ ಮಾಧ್ಯಮಗಳಲ್ಲಿ ಸ್ವಯಂ ಘೋಷಣೆ ಮಾಡುವುದು ಕಡ್ಡಾಯವಾಗಿದೆ. ತಪ್ಪಿದ್ದಲ್ಲಿ ನ್ಯಾಯಾಂಗ ನಿಂದನೆಯಾಗಲಿದ್ದು ಮುಂದೆ ನಿಯಮಾನುಸಾರ ಅಭ್ಯರ್ಥಿತನಕ್ಕೆ ಕುತ್ತು ಬರಲಿದೆ ಎಂದು ರಾಜಕೀಯ ಪಕ್ಷಗಳಿಗೆ ಅವರು ತಿಳಿಸಿದರು.

ಉಳಿದಂತೆ ಕಳೆದ ಲೋಕಸಭೆ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆಗಳಲ್ಲಿ ಇರುವ ನಿಯಮಗಳು ಹಾಗೂ ವ್ಯವಸ್ಥೆ ಇರಲಿದೆ. ರಾಜಕೀಯ ಪಕ್ಷಗಳಿಗೆ ಪ್ರಚಾರಕ್ಕಾಗಲಿ ಅಥವಾ ಇತರೆ ಯಾವುದೇ ವಿಷಯಗಳಿಗೆ ಮುಕ್ತ ಅವಕಾಶವಿದೆ. ಆದರೆ ಎಲ್ಲವೂ ಚುನಾವಣಾ ಆಯೋಗದ ಮಾದರಿ ನೀತಿ ಸಂಹಿತೆ ವ್ಯಾಪ್ತಿಯೊಳಗಿರಬೇಕು. ಹೊರತಾಗಿ ಚುನಾವಣಾ ಆಯೋಗ ಯಾರಿಗೂ ತೊಂದರೆ ಆಗದಂತೆ ನಿಯಮಾನುಸಾರ ಚುನಾವಣಾ ಕೆಲಸಗಳನ್ನು ನಿರ್ವಹಿಸಲಿದೆ ಎಂದು ಹೇಳಿದರು. ಚುನಾವಣಾ ಕರ್ತವ್ಯದಲ್ಲಿ ನಿರತ ಎಲ್ಲ ಅಧಿಕಾರಿಗಳ ತಂಡಗಳು ನಿಯಮಗಳ ಪಾಲನೆಯಲ್ಲಿರುತ್ತಾರೆ. ಅವರಿಗೆ ರಾಜಕೀಯ ಪಕ್ಷಗಳು ಸಹಕಾರ ನೀಡಬೇಕು. ಎಲ್ಲರೂ ಸೇರಿ ಚುನಾವಣಾ ವ್ಯವಸ್ಥೆಯನ್ನು ಗೆಲ್ಲಿಸಬೇಕಿದೆ. ಈ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯಿಂದ ದೇಶಕ್ಕೆ ಉತ್ತಮ ಸಂದೇಶ ಕಳಿಸಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.

ಮದುವೆ ಅಥವಾ ಯಾವುದೇ ಸಮಾರಂಭಗಳ ಬಗ್ಗೆ ಮೊದಲೇ ಮಾಹಿತಿ ನೀಡಿದರೆ ಒಳ್ಳೆಯದು. ಅದರಿಂದ ಮುಂದೆ ಹುಟ್ಟಿಕೊಳ್ಳಬಹುದಾದ ಅನುಮಾನಗಳಿಗೆ ಆಸ್ಪದವಾಗುವುದಿಲ್ಲ. ಯಾವುದೇ ದೂರುಗಳಿದ್ದರೂ ಸಿ-ವಿಜಿಲ್‌ ಅಥವಾ ಕಂಟ್ರೋಲ್‌ ರೂಮ್‌ 1950 ನಂಬರಿನಲ್ಲಿ ದಾಖಲಿಸಬಹುದು. ಈ ಬಾರಿ ಚುನಾವಣೆಯಲ್ಲಿ ಪ್ಲಾಸ್ಟಿಕ್‌ ನಿಷೇಧಿಸಲಾಗಿದ್ದು ಯಾವುದೇ ಪ್ರಚಾರ ಸಾಮಗ್ರಿಗಳನ್ನು ಬಟ್ಟೆ ಅಥವಾ ಕಾಗದದಲ್ಲಿ ಮಾತ್ರ ಇರಬೇಕಿದೆ ಎಂದು ಅವರು ತಿಳಿಸಿದರು.

ಮುದ್ರಕರು ಪ್ರಕಾಶಕರ ಅನುಮತಿ ಇಲ್ಲದೆ ಯಾವುದೇ ಚುನಾವಣಾ ಸಾಮಗ್ರಿಯನ್ನು ಮುದ್ರಿಸುವಂತಿಲ್ಲ. ಯಾವ ರಾಜಕೀಯ ಪಕ್ಷದ ಮತ್ತು ಎಷ್ಟು ಸಂಖ್ಯೆ ಪ್ರತಿಗಳು ಹಾಗೂ ಮುದ್ರಕರ ವಿಳಾಸ ಕಡ್ಡಾಯವಾಗಿ ಪ್ರತಿಗಳಲ್ಲಿ ಮುದ್ರಿತವಗಿರಬೇಕು. ಈ ಸಂಬಂಧದ ವೆಚ್ಚವನ್ನು ಸಂಬಂಧಿ ಸಿದ ಖರ್ಚು ವೆಚ್ಚದ ಸಮಿತಿಗೆ ನೀಡಬೇಕು ಎಂದರು.

Advertisement

ಕೇಬಲ್‌ ಆಪರೇಟರ್‌ಗಳು ಕೂಡಾ ಮಾದರಿ ನೀತಿ ಸಂಹಿತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಯಾವುದೇ ರಾಜಕೀಯ ಪಕ್ಷಗಳ ಪ್ರಚಾರದ ಜಾಹೀರಾತು ಪ್ರಸಾರಕ್ಕೆ 3 ದಿನ ಮುನ್ನ ಅನುಮತಿಗೆ ನಮೂನೆಯಲ್ಲಿ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಬೇಕು. 24 ಗಂಟೆಯೊಳಗೆ ಸಂಬಂಧಿಸಿದ ಸಮಿತಿ ಅನುಮತಿ ಪತ್ರ ನೀಡಲಿದೆ. ಅಲ್ಲದೆ, ಯಾವುದೇ ಪಕ್ಷ ಅಥವಾ ಅಭ್ಯರ್ಥಿಯವನ್ನು ಓಲೈಸಿ ಪ್ರಸಾರ ಮಾಡುವುದನ್ನು ಪಾವತಿ ಸುದ್ದಿ ಎಂದು ಪರಿಗಣಿಸಿ ನಿಯಮಾನುಸಾರ ಕ್ರಮಕ್ಕೆ ಅವಕಾಶವಿದ್ದು ಯಾವುದೇ ಅಂತಹ ಸಂದರ್ಭವನ್ನು ತಂದುಕೊಳ್ಳಬಾರದು ಎಂದು ಜಿಲ್ಲಾಧಿಕಾರಿ ಮನವರಿಕೆ ಮಾಡಿಕೊಟ್ಟರು. ಸಭೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು, ಮುದ್ರಕರು, ಕೇಬಲ್‌ ಆಪರೇಟರ್‌ ಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next