ಮಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಸಿನೆಮಾ ಮಾಡಿಕೊಂಡಿದ್ದವರು ಈಗ ರಾಜಕೀಯದಲ್ಲಿದ್ದಾರೆ. ಒಂದೊಮ್ಮೆ ಜನರ ಇಷ್ಟದ ಕಲಾವಿದರಾಗಿದ್ದ ಕೆಲವರು ಈಗ ರಾಜಕೀಯದಲ್ಲಿ ಖದರ್ ತೋರಿಸಿದ್ದಾರೆ. ಅಂಬರೀಷ್, ಉಮಾಶ್ರೀ, ಜಗ್ಗೇಶ್ ಸಹಿತ ಹಲವರ ಹೆಸರಿದೆ. ವಿಶೇಷವೆಂದರೆ ರಾಜಕಾರಣಿಯಾಗಿದ್ದುಕೊಂಡು ತುಳು -ಕನ್ನಡ ಸಿನೆಮಾದಲ್ಲಿ ಬಣ್ಣ ಹಚ್ಚಿದವರು ಕರಾವಳಿ ಭಾಗದಲ್ಲಿ ಹಲವರಿದ್ದಾರೆ!
1983ರಲ್ಲಿ ಸುರತ್ಕಲ್ ಕ್ಷೇತ್ರದ ಶಾಸಕರಾಗಿದ್ದ ಲೋಕಯ್ಯ ಶೆಟ್ಟಿ ಅವರು 1971ರ ‘ಎನ್ನ ತಂಗಡಿ’ ಹಾಗೂ 1973ರಲ್ಲಿ ಬಿಡುಗಡೆಯಾದ ವಿಶುಕುಮಾರ್ ಅವರ ‘ಕೋಟಿ ಚೆನ್ನಯ’ದಲ್ಲಿ ಬಣ್ಣಹಚ್ಚಿದರು. ತುಳುವಿನ ಮೂರನೇ ಚಿತ್ರ ಆರೂರು ಪಟ್ಟಾಭಿ ನಿರ್ದೇಶನದ 1972ರಲ್ಲಿ ತೆರೆಕಂಡ ‘ಪಗೆತ ಪುಗೆ’ ಚಿತ್ರದಲ್ಲಿ ಅಂದಿನ ಶಾಸಕ ಅಮರನಾಥ ಶೆಟ್ಟಿ ಅಭಿನಯಿಸಿದ್ದರು. ದೈವಾರಾಧನೆಯ ಪರಂಪರೆಯನ್ನು ಬಿಂಬಿಸಿದ 2011ರಲ್ಲಿ ತೆರೆಕಂಡ ಕುಂಬ್ರ ರಘುನಾಥ ರೈ ಅವರ ‘ಕಂಚಿಲ್ದ ಬಾಲೆ’ ಸಿನೆಮಾದಲ್ಲಿ ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಪ್ರಧಾನ ಭೂಮಿಕೆಯಲ್ಲಿದ್ದರು. ರಾಜಶೇಖರ್ ಕೋಟ್ಯಾನ್ ಅವರ ತುಳುವಿನ 50ನೇ ಸಿನೆಮಾ ‘ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ’ ಚಿತ್ರದಲ್ಲಿ ಮೂಡಬಿದಿರೆ ಶಾಸಕ ಅಭಯಚಂದ್ರ ಜೈನ್ ಬಣ್ಣಹಚ್ಚಿದ್ದರು. ಇದೇ ಚಿತ್ರ ಹಾಗೂ ಇತ್ತೀಚೆಗೆ ಬಂದ ‘ಚಾಲಿಪೋಲಿಲು’, ‘ಎಕ್ಕಸಕ’ ಸಹಿತ ಇನ್ನೂ ಕೆಲವು ಸಿನೆಮಾಗಳಲ್ಲಿ ಮೂಡಬಿದಿರೆ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಅಭಿನಯಿಸಿದ್ದಾರೆ. ಜಗದೀಶ್ ಅಧಿಕಾರಿ ಕೂಡ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ವಿಶೇಷವೆಂದರೆ, ಬೆಳ್ತಂಗಡಿ ಶಾಸಕ ವಸಂತ ಬಂಗೇರ 1978ರಲ್ಲಿ ‘ಸಂಗಮ ಸಾಕ್ಷಿ’ ತುಳು ಸಿನೆಮಾದ ನಿರ್ಮಾಪಕರಾಗಿದ್ದರು. 2006ರಲ್ಲಿ ತೆರೆಗೆ ಬಂದ ಸಾಧನಾ ಎನ್. ಶೆಟ್ಟಿ ನಿರ್ಮಾಪಕರಾಗಿರುವ ‘ಕಡಲ ಮಗೆ’ ಚಿತ್ರವನ್ನು ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ ಅವರು ನಿರ್ಮಿಸಿದ್ದರು. 24 ಗಂಟೆಗಳಲ್ಲಿ ಚಿತ್ರೀಕರಣವಾದ 1994ರ ಡಾ| ರಿಚರ್ಡ್ ಕ್ಯಾಸ್ಟಲಿನೋ ಅವರ ‘ಸಪ್ಟೆಂಬರ್ 8’ ಚಿತ್ರದಲ್ಲಿ ಡಾ| ಶಿವರಾಮ ಕಾರಂತರು (ಕಾರವಾರ ಸಂಸದ ಸ್ಥಾನಕ್ಕೆ ಸ್ಪರ್ಧಿಸಿದವರು) ಅಭಿನಯಿಸಿದ್ದಾರೆ. ಸಚಿವೆ ಉಮಾಶ್ರೀ ಕೂಡ ಇದೇ ಚಿತ್ರದಲ್ಲಿ ಬಣ್ಣಹಚ್ಚಿದ್ದರು.
ತುಳುವಷ್ಟೇ ಅಲ್ಲ; ಕನ್ನಡ ಸಿನೆಮಾದಲ್ಲೂ ಕಡಲ ನಗರಿಯ ಜನಪ್ರತಿನಿಧಿಗಳು ಬಣ್ಣಹಚ್ಚಿದ್ದಾರೆ. ಗೌರವ ಪಾತ್ರದಲ್ಲಿ ರಂಜಿಸಿದ್ದಾರೆ. ವಿಷ್ಣುವರ್ಧನ್, ಭಾರತೀ ಮುಖ್ಯ ತಾರಾಗಣದ 1972ರಲ್ಲಿ ತೆರೆಕಂಡ ‘ಮಕ್ಕಳ ಭಾಗ್ಯ’ ಸಿನೆಮಾದಲ್ಲಿ ಈಗಿನ ಸಚಿವ ಬಿ. ರಮಾನಾಥ ರೈ ಪಾತ್ರ ಮಾಡಿದ್ದರು. ಸಂಸದ ಎಂ. ವೀರಪ್ಪ ಮೊಲಿ ಅವರ ಕಥೆ ‘ಸಾಗರದೀಪ’ ಸಿನೆಮಾ ಕೂಡ ಆಗಿದೆ. ಈ ಮಧ್ಯೆ ಡಿ.ವಿ. ಸದಾನಂದ ಗೌಡ ಮುಖ್ಯಮಂತ್ರಿಯಾಗಿದ್ದಾಗ ಸುದೇಶ್ ಭಂಡಾರಿ ಕಿನ್ನಿಮಜಲುಬೀಡು ನಿರ್ಮಾಣ, ಸಾಯಿ ಕುಡ್ಲ ನಿರ್ದೇಶನದ ‘ಚೆಲ್ಲಾಪಿಲ್ಲಿ’ ಚಿತ್ರದಲ್ಲಿ ‘ಮುಖ್ಯಮಂತ್ರಿ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 1973ರಲ್ಲಿ ತೆರೆಕಂಡ ‘ಕಾಸ್‌ದಾಯೆ ಕಂಡನಿ’, ‘ಯಾನ್ ಸನ್ಯಾಸಿ ಆಪೆ’ ಹಾಗೂ 1974ರಲ್ಲಿ ತೆರೆಗೆ ಬಂದ ಸಂಜೀವ ದಂಡಕೇರಿ ಅವರ ‘ಬಯ್ಯಮಲ್ಲಿಗೆ’ ಚಿತ್ರದಲ್ಲಿ ಕರಾವಳಿಯವರೇ ಆದ ಜಯಮಾಲಾ ಅಭಿನಯಿಸಿ ಈಗ ರಾಜಕೀಯ ಕ್ಷೇತ್ರದಲ್ಲಿದ್ದಾರೆ. ಬಿಜೆಪಿಯಲ್ಲಿರುವ ತಾರಾ ಅವರು 1994ರಲ್ಲಿ ತೆರೆಕಂಡ ‘ಬದ್‌ಕ್‌ದ ಬೆಲೆ’ ಚಿತ್ರದಲ್ಲಿ ಮಿಂಚಿದ್ದರು. ಇಷ್ಟೇ ಅಲ್ಲ; ಇನ್ನೂ ಕೆಲವರು ಇದ್ದಾರೆ !
— ದಿನೇಶ್ ಇರಾ