ಉಡುಪಿ: ಬಿಜೆಪಿ ಕೇಂದ್ರದಲ್ಲಿ ಸರಕಾರ ರಚಿಸುವ ಕಾರ್ಯ ಆರಂಭಿಸಿದ್ದು, ರಾಜ್ಯದಿಂದ ನಾಲ್ವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಇದರಲ್ಲಿ ಎರಡು ಸಹಾಯಕ ದರ್ಜೆ ಮತ್ತು ಎರಡು ಸಂಪುಟ ದರ್ಜೆ ಸ್ಥಾನ ದೊರಕಬಹುದು ಎನ್ನಲಾಗುತ್ತಿದೆ.
ಶೋಭಾ ಕರಂದ್ಲಾಜೆ ಹೆಸರು ಸಚಿವ ಹುದ್ದೆಗೆ ಕೇಳಿಬರುತ್ತಿದೆ. ದ. ಭಾರತದಿಂದ ಆಯ್ಕೆಯಾದ ಮಹಿಳಾ ಸದಸ್ಯೆ ಇವರೊಬ್ಬರೇ. ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರೂ ಲೋಕ ಸಭೆಗೆ ಆಯ್ಕೆಯಾದ ಮಹಿಳಾ ಸದಸ್ಯರಿಲ್ಲ. ಮಂಡ್ಯದಲ್ಲಿ ಸುಮಲತಾಗೆ ಬಿಜೆಪಿ ಬೆಂಬಲ ಕೊಟ್ಟಿತ್ತೇ ವಿನಾ ಅಧಿಕೃತ ಅಭ್ಯರ್ಥಿ ಅಲ್ಲ. ಹೀಗಾಗಿ ಶೋಭಾಗೆ ಪದವಿ ಸಿಗುವ ಸಾಧ್ಯತೆಗಳಿವೆ. ಎಲ್ಲ ಸಂಸದರನ್ನು ಶನಿವಾರ ದಿಲ್ಲಿಗೆ ಬರಲು ತಿಳಿಸಿದ್ದು, ಶೋಭಾ ಕೂಡ ತೆರಳಲಿದ್ದಾರೆ. ಹೀಗಾಗಿ ಅವರ ವಿಜಯೋತ್ಸವ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ.
ಸದಾನಂದ ಗೌಡ (ಬೆಂಗಳೂರು ಉತ್ತರ), ಸುರೇಶ ಅಂಗಡಿ (ಬೆಳಗಾವಿ), ರಮೇಶ ಜಿಗಜಿಣಗಿ (ವಿಜಯಪುರ), ಪ್ರಹ್ಲಾದ ಜೋಷಿ (ಧಾರವಾಡ), ಬಿ.ವೈ. ರಾಘವೇಂದ್ರ (ಶಿವಮೊಗ್ಗ), ಡಾ| ಉಮೇಶ ಜಾಧವ (ಕಲಬುರಗಿ) ಹೆಸರುಗಳೂ ಕೇಳಿಬರುತ್ತಿವೆ. ಡಿವಿ ಅಥವಾ ಶೋಭಾರನ್ನು ಒಕ್ಕಲಿಗರ ಕೋಟದಲ್ಲಿ, ಅಂಗಡಿ ಅಥವಾ ರಾಘವೇಂದ್ರ ಅವರನ್ನು ಲಿಂಗಾಯತರ ಕೋಟದಲ್ಲಿ, ಜಿಗಜಿಣಗಿ ಅಥವಾ ಡಾ| ಉಮೇಶ ಜಾಧವ ಅವರನ್ನು ಪರಿಶಿಷ್ಟರ ಕೋಟಾದಡಿ ಸೇರಿಸಿಕೊಳ್ಳಬಹುದು. ಅನಂತ ಕುಮಾರ ಹೆಗಡೆ ರಾಜ್ಯದಲ್ಲಿಯೇ ಅತ್ಯಧಿಕ ಮತಗಳ ಅಂತರದಿಂದ ಗೆದ್ದಿರುವುದರಿಂದ, ಹಿಂದಿನ ಬಾರಿ ಸಚಿವ ರಾಗಿದ್ದ ಕಾರಣ ಇವರೂ ಮಂತ್ರಿಯಾಗಬಹುದು.
ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಯಾಗಿ ಯಡಿಯೂರಪ್ಪ ಸಿಎಂ ಆದರೆ ರಾಘವೇಂದ್ರರಿಗೆ ಕೇಂದ್ರ ಸಚಿವಗಿರಿ ಸಿಗದಿರುವ ಸಾಧ್ಯತೆಯೂ ಇದೆ. ಇವರಲ್ಲಿ ಅಥವಾ ದ.ಕ. ಸಂಸದ ನಳಿನ್ ಸಹಿತ ಬೇರೆ ಯಾರಿಗಾದರೂ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ಸಿಗಲೂಬಹುದು.