Advertisement

ಕರಾವಳಿಯ “ತೀರದ’ರುಚಿ: ಗಿರ್‌ನಾರ್‌ ಗಮ್ಮತ್ತು!

11:48 AM Nov 18, 2017 | |

ನಮ್ಮ ಬೆಂಗಳೂರಿನ ವೈಶಿಷ್ಟéವೆಂದರೆ ಇಲ್ಲಿ ಎಲ್ಲಾ ಜಿಲ್ಲೆಗಳ, ರಾಜ್ಯಗಳ ಅಷ್ಟೇ ಯಾಕೆ, ವಿದೇಶಿ ಆಹಾರವೂ ಸಿಗುತ್ತೆ. ಉತ್ತರ ಕರ್ನಾಟಕದ ಖಾನಾವಳಿಗಳು, ಪಂಜಾಬಿ ಧಾಬಾಗಳು, ಥಾಯಿ ರೆಸ್ಟುರಾಗಳು, ಮಿಲಿಟರಿ ಹೋಟೆಲ್‌ಗ‌ಳು ಇರುವ ಹಾಗೆಯೇ ಕರಾವಳಿ ಸೊಗಡಿನ, ರುಚಿಯ ಹೋಟೆಲ್ಲುಗಳೂ ಬೇಕಾದಷ್ಟಿವೆ. ಅವುಗಳ ಸಾಲಿಗೆ ಹೊಸ ಸೇರ್ಪಡೆ “ಗಿರ್‌ನಾರ್‌’ ಹೋಟೆಲ್‌. ಕರಾವಳಿ ಅಡುಗೆ ಮನೆಯ ರುಚಿ ಸವಿಯಲು “ಗಿರ್‌ನಾರ್‌’ ಪ್ರಶಸ್ತವಾದ ಸ್ಥಳ.

Advertisement

ಎಲ್‌ ಬರುತ್ತೆ ಗೊತ್ತಾ?
ಬಸವನಗುಡಿಯ ಆವಲಹಳ್ಳಿ 50 ಅಡಿ ರಸ್ತೆಯಿಂದ, ಪೈ ಇಂಟರ್‌ನ್ಯಾಷನಲ್‌ ಎಲೆಕ್ಟ್ರಾನಿಕ್ಸ್‌ ಮಳಿಗೆ ಇರುವಲ್ಲಿಂದ ಗಿರಿನಗರಕ್ಕೆ ಹೋಗುವ ದಾರಿಯಲ್ಲಿ ಮುಂದಕ್ಕೆ ಬಂದರೆ ಗಿರಿನಗರ ಸರ್ಕಲ್‌ ಸಿಗುತ್ತೆ. ಸರ್ಕಲ್‌ ದಾಟಿ ಸೀದಾ ಮುಂದೆ ಹೋದರೆ ಬಲಗಡೆ ಗಿರ್‌ನಾರ್‌ ಹೋಟೆಲ್‌ ಕಾಣಿಸುತ್ತೆ. ವಾರಾಂತ್ಯದಂದು ಯಾವ ಸಮಯದಲ್ಲಿ ಭೇಟಿ ಕೊಟ್ಟರೂ ಜನರು ಕಿಕ್ಕಿರಿದು ತುಂಬಿರುತ್ತಾರೆ. ಆದರೆ, ಇಲ್ಲಿನ ಎಕ್ಸ್‌ಪ್ರೆಸ್‌ ಸರ್ವೀಸ್‌ನಿಂದಾಗಿ ಅಷ್ಟೇ ಬೇಗ ಜನಸಂದಣಿ ಕರಗಿಯೂ ಹೋಗುತ್ತಾರೆ. ತುಳುವಿನಲ್ಲಿ ಮಾತಾಡಿಕೊಂಡೇ ಹುರುಪಿನಿಂದ ಕೆಲಸ ಮಾಡುವ ನೌಕರರು, ಸುತ್ತಮುತ್ತಲಿಂದ ಕಿವಿಗೆ ಬೀಳುವ ಮಂಗಳೂರು ಪ್ರಾಂತ್ಯದ ಕನ್ನಡ, ಇವೆಲ್ಲದರಿಂದಾಗಿ ಕರಾವಳಿಗರಿಗಂತೂ ಇಲ್ಲಿಗೆ ಬಂದುಬಿಟ್ಟರೆ ಮನೆಗೆ ಬಂದ ಅನುಭವವಾಗುತ್ತದೆ. 

ಇದು ತಿಂಡಿ ಹೋಟೆಲ್‌
ಬೆಂಗಳೂರಿನ ಮೂಲೆ ಮೂಲೆಯಲ್ಲಿ ನೆಲೆಸಿರುವ ಕರಾವಳಿ ಭಾಗದ ಮಂದಿ ವಾರಾಂತ್ಯದಲ್ಲಿ ಬೆಳ್ಳಂಬೆಳಗ್ಗೆ ತಿಂಡಿ ತಿನ್ನಲು ಇಲ್ಲಿಗೆ ಬಂದುಬಿಡುತ್ತಾರೆ. ಇಲ್ಲಿಗೆ ಬರುವ ಗ್ರಾಹಕರಲ್ಲಿ ಬರೀ ಕರಾವಳಿಯವರಷ್ಟೇ ಅಲ್ಲ, ಮಲೆನಾಡಿನವರಿದ್ದಾರೆ, ಬಯಲುಸೀಮೆಯವರಿದ್ದಾರೆ. ಈಗೀಗ ಹೊರರಾಜ್ಯದವರೂ ಗಿರ್‌ನಾರ್‌ಗೆ ಬರಲಾರಂಭಿಸಿದ್ದಾರೆ. ಅಂದಹಾಗೆ, ಗಿರ್‌ನಾರ್‌ ಬರೀ ತಿಂಡಿ ಹೋಟೆಲ್‌ ಮಾತ್ರ. ಇಲ್ಲಿ ಊಟ ದೊರೆಯುವುದಿಲ್ಲ! ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಮಾತ್ರ ತೆರೆದಿರುತ್ತದೆ. ಮತ್ತೆ ತೆರೆಯುವುದು ಸಂಜೆ ನಾಲ್ಕಕ್ಕೆ. 4 ರಿಂದ ರಾತ್ರಿ 8ರ ವರೆಗೂ ತೆರೆದಿರುತ್ತೆ.

ಇವೆಲ್ಲಾ ಸಿಗುತ್ತೆ?
ಬಹಳಷ್ಟು ಕಡೆಗಳಲ್ಲಿ ಮಂಗ್ಳೂರು ಬನ್ಸ್‌ ತಿಂದಿದ್ದರೂ ಇಲ್ಲಿ ಸಿಗೋ ಮಂಗ್ಳೂರು ಬನ್ಸ್‌ ರುಚಿ ನೋಡಲೇಬೇಕು. ಕರಾವಳಿಗರಿಗೆ ಮೊಸರು ಅವಲಕ್ಕಿಯೆಂದರೆ ಸಾಕು ಬಾಯಲ್ಲಿ ನೀರೂರುತ್ತದೆ. ಖಾರದ ಅವಲಕ್ಕಿಗೆ ಸ್ವಲ್ಪವೇ ಸಕ್ಕರೆ ಸೇರಿಸಿರುತ್ತಾರೆ, ಹೀಗಾಗಿ ಅತ್ತ ಖಾರವೂ ಅಲ್ಲದ ಇತ್ತ ಸಿಹಿಯೂ ಅಲ್ಲದ ರುಚಿ ಬಂದಿರುತ್ತದೆ. ಇನ್ನು ಅದರ ಜೊತೆ ಮೊಸರು ಸೇರಿದರಂತೂ, ಕೇಳುವುದೇ ಬೇಡ ಬಾಯಿ ಚಪ್ಪರಿಸಿಕೊಂಡು ಮುಗಿಸಿಬಿಡುತ್ತಾರೆ. ಕೆಲವರು ಮೊಸರಿಲ್ಲದೆ ಹಾಗೇ ತಿನ್ನಲೂ ಇಷ್ಟಪಡುತ್ತಾರೆ. ಅವರವರ ಇಷ್ಟಾನುಸಾರ. ಒತ್ತು ಶ್ಯಾವಿಗೆ ಮತ್ತು ಕಾಯಿಹಾಲು ಇಲ್ಲಿಗೆ ಬರುವ ಅನೇಕ ಗ್ರಾಹಕರಿಗೆ ಅಚ್ಚುಮೆಚ್ಚು. ಕೈಗೆ ಅಂಟದ ಶಾವಿಗೆ ಮೇಲೆ ಕಾಯಿ ಹಾಲು ಬೀಳುತ್ತಿದ್ದಂತೆಯೆ ಬಿಡಿ ಬಿಡಿಯಾಗಿಬಿಡುತ್ತದೆ. ತಿನ್ನುವಾಗ ಸಲೀಸಾಗಿ ಕೈಗೆ ಬಂದುಬಿಡುತ್ತದೆ. ಬಗೆ ಬಗೆಯ ದೋಸೆ, ಇಡ್ಲಿ- ವಡಾ, ಸಿಹಿತಿಂಡಿ ಸೇರಿದಂತೆ ಇನ್ನೂ ಅನೇಕ ಖಾದ್ಯಗಳು ಇಲ್ಲಿ ಸಿಗುತ್ತವೆ.

ಓಪನ್‌ ಕಿಚನ್‌ ವೈಶಿಷ್ಟ್ಯತೆ
ಬಹುತೇಕ ಹೋಟೆಲ್ಲುಗಳಲ್ಲಿ ಅಡುಗೆ ಮನೆ ಗ್ರಾಹಕರಿಗೆ ಕಾಣುವಂತಿರುವುದಿಲ್ಲ. ಅಲ್ಲದೇ, ಕೆಲ ಕಡೆಗಳಲ್ಲಿ ಪ್ರವೇಶವೂ ಇರಲಾರದು. ಆದರೆ, ಇಲ್ಲಿ ಹಾಗಿಲ್ಲ. ಓಪನ್‌ ಕಿಚನ್‌ ಮಾದರಿಯ ತೆರೆದ ಅಡುಗೆ ಮನೆಯನ್ನು ಗಿರಾಕಿಗಳು ನೋಡಬಹುದು! ಹೆಚ್ಚಿನ ಖಾದ್ಯಗಳು ಗಿರಾಕಿಗಳ ಕಣ್ಣಮುಂದೆಯೇ ತಯಾರಾಗುತ್ತವೆ. ಅಡುಗೆ ಮನೆಗೂ ಪುಟ್ಟ ಹಾಲ್‌ಗ‌ೂ ನಡುವೆ ಒಂದು ಸ್ಟೀಲ್‌ ಗೋಡೆಯಿದೆ. ಸೆಲ್ಫ್ ಸರ್ವೀಸ್‌ ಪದ್ಧತಿ ಇರುವುದರಿಂದಾಗಿ ಗಿರಾಕಿಗಳು ನೇರವಾಗಿ ಅಡುಗೆ ಮನೆಗೇ ಆರ್ಡರ್‌ ಕೊಟ್ಟು ಕಾಯುತ್ತಾರೆ.

Advertisement

ನೀರ್‌ದೋಸೆ ಫೇಮಸ್ಸು
ಗಿರ್‌ನಾರ್‌ ಹೋಟೆಲ್‌ನಲ್ಲಿ ಜನರು, ಎಷ್ಟು ಹೊತ್ತಾದರೂ ಸರಿಯೇ, ಸಮಾಧಾನದಿಂದ ಸರದಿಯಲ್ಲಿ ಕಾದು ಪಡೆಯುವ ಖಾದ್ಯಗಳಲ್ಲಿ ಪ್ರಥಮ ಸ್ಥಾನ ನೀರ್‌ದೋಸೆಗೆ ಸಲ್ಲುತ್ತದೆ. ಎಷ್ಟೋ ಬಾರಿ ಹಿಟ್ಟು ಖಾಲಿಯಾದಾಗಲೂ ಅದು ಬರುವ ತನಕ ಕಾದು ತಿಂದುಕೊಂಡು ಹೋಗಿದ್ದೂ ಇದೆ. ಅಷ್ಟರಮಟ್ಟಿಗೆ, ಇಲ್ಲಿನ ನೀರ್‌ದೋಸೆ ಫೇಮಸ್ಸು. ಹಾಲಿನಷ್ಟು ಬೆಳ್ಳಗೆ, ಹತ್ತಿಯಷ್ಟು ಮೆತ್ತಗೆ ಇರುವ ನೀರ್‌ದೋಸೆ ಬಾಯಲ್ಲಿಡುತ್ತಿದ್ದಂತೆಯೇ ಬೆಣ್ಣೆಯಂತೆ ಜಾರಿ ಹೊಟ್ಟೆ ಸೇರದಿದ್ದರೆ ಕೇಳಿ! ನೀರ್‌ದೋಸೆ ಜೊತೆಗೆ ಕೊಡುವ ಸಿಹಿ ಕಾಯಿಚಟ್ನಿ ಮತ್ತು ಹೆಸರುಕಾಳಿನ ಗಸಿ, ತುಂಬಾ ಬೇಗನೆ ಖಾಲಿಯಾಗಿ ಮತ್ತೆ ಹಾಕಿಸಿಕೊಳ್ಳಲು ಅಡುಗೆ ಮನೆ ಮುಂದೆ ನಿಲ್ಲುವಂತೆ ಮಾಡಿಬಿಡುತ್ತೆ. ನೀರ್‌ದೋಸೆ ಮತ್ತು ಹೆಸರುಕಾಳಿನ ಗಸಿ ಕಾಂಬಿನೇಷನ್‌ ಸೂಪರ್‌!

ಅರೇಕಾ ಟೀ ಕುಡಿದಿದ್ದೀರಾ?
ಗಿರ್‌ನಾರ್‌ ಹೋಟೆಲ್‌ನಲ್ಲಿ ತಿಂಡಿ ತಿಂದ ಮಾತ್ರಕ್ಕೆ ಬ್ರೇಕ್‌ಫಾಸ್ಟ್‌ ಪೂರ್ತಿಯಾಗುವುದಿಲ್ಲ. ಇಲ್ಲಿನ ಕೌಂಟರ್‌ ಬಳಿ ಇರೋ ಟೀ- ಕಾಫಿ ಸ್ಟಾಲ್‌ನಲ್ಲಿ ಸಿಗೋ ಅರೇಕಾ ಟೀ ಕುಡಿಯದೆ ಇದ್ದರೆ ಬ್ರೇಕ್‌ಪಾಸ್ಟ್‌ ಅಪೂರ್ಣ. ಅರೇಕಾ ಟೀ ಅಂದರೆ ಅಡಕೆ ಸ್ವಾದವಿರುವ ಟೀ. ಇದು ಆರೋಗ್ಯಕ್ಕೂ ಒಳ್ಳೆಯದು. ಬೆಲೆಯೂ ಹೆಚ್ಚಿಲ್ಲ 5 ರೂ. ಮಾತ್ರ. ಮೊದಲ ಬಾರಿಗೆ ಸ್ವಲ್ಪ ಒಗರು ಎನಿಸುವುದು ನಿಜ. ಆದರೆ, ಆಮೇಲಾಮೇಲೆ ಇಷ್ಟವಾಗದಿದ್ದರೆ ಕೇಳಿ. ದುಬಾರಿ ಹೋಟೆಲ್ಲುಗಳಲ್ಲಿ ವಿದೇಶಿ ಸ್ವಾದದ ಟೀ ಎಂದು ನಾನಾ ಫ್ಲೇವರ್‌ಗಳ ನಾನಾ ರುಚಿಯ ಟೀ ಸಿಗುತ್ತವೆ. “ಅರೇಕಾ ಟೀ’ ನಮ್ಮದೇ ನೆಲದ ಉತ್ಪನ್ನ. ಅದನ್ನು ಪ್ರೋತ್ಸಾಹಿಸುವ ಕೆಲಸವನ್ನು ಗಿರ್‌ನಾರ್‌ನವರು ಮಾಡುತ್ತಿದ್ದಾರೆ. ಇಲ್ಲಿ ಅರೇಕಾ ಟೀ ಪೊಟ್ಟಣ ಮಾರಾಟಕ್ಕೂ ಸಿಗುತ್ತದೆ. ಅಂದ ಹಾಗೆ ಫ್ಲೇವರ್‌ಗಳಿಂದ ಮುಕ್ತವಾದ ಗಿರ್‌ನಾರ್‌ನ ನಾರ್ಮಲ್‌ ಟೀ ಕಾಫಿಯೂ ತುಂಬಾ ರುಚಿಕರ.

ಬೆಂಗಳೂರಿಗೆ ಬಂದ ಶುರುವಿನಲ್ಲಿ ವೀಕೆಂಡ್‌ ಬರುತ್ತಿದ್ದಂತೆ ನೀರ್‌ದೋಸೆಗಾಗಿ ತುಂಬಾ ಹೋಟೆಲ್ಲುಗಳನ್ನು ಸುತ್ತುತ್ತಿದ್ದೆ. ಕರಾವಳಿ ಶೈಲಿಯ ಅನೇಕ ಹೋಟೆಲ್ಲುಗಳಲ್ಲಿ ನೀರ್‌ದೋಸೆ ರುಚಿಯನ್ನೂ ನೋಡಿದ್ದೇನೆ. ಆದರೆ, ಎಲ್ಲೂ ನಮ್ಮೂರಿನ ನೀರ್‌ದೋಸೆಯ ರುಚಿ ಸಿಕ್ಕಿರಲಿಲ್ಲ. ಗಿರ್‌ನಾರ್‌ನ ನೀರ್‌ದೋಸೆ ಒಂದನ್ನೇ ನಾನು ತುಂಬಾ ಇಷ್ಟಪಟ್ಟಿದ್ದು. ನೀರ್‌ದೋಸೆ ಒಂದೇ ಅಲ್ಲ. ಇಲ್ಲಿ ಸಿಗೋ ಎಲ್ಲಾ ಖಾದ್ಯಗಳಲ್ಲಿಯೂ ಕರಾವಳಿಯ ಫ್ಲೇವರ್‌ ಇದೆ.
– ಪ್ರದೀಪ್‌ ಶಿರಿಯ, ಸಾಫ್ಟ್ವೇರ್‌ ಎಂಜಿನಿಯರ್‌

ಹವನ 

Advertisement

Udayavani is now on Telegram. Click here to join our channel and stay updated with the latest news.

Next