Advertisement
ಇಲ್ಲಿಗೆ ಪ್ರತೀ ನಿತ್ಯ ಕನಿಷ್ಠ 70-80 ಹೊರ ರೋಗಿಗಳು ಬರುತ್ತಿರುತ್ತಾರೆ. ಪ್ರಸ್ತುತ ಶಿರ್ವದಿಂದ ಎರವಲು ಸೇವೆ ರೂಪದಲ್ಲಿ ಡಾ| ಶೀತಲ್ ವಿ. ಶೆಟ್ಟಿ ಗುತ್ತಿಗೆ ಆಧಾರಿತವಾಗಿ ಸೇವೆ ನೀಡುತ್ತಿದ್ದಾರೆ. ಪೆರ್ಣಂಕಿಲ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ರವೀಂದ್ರ ಬೋರ್ಕರ್ ಆಡಳಿತ ವೈದ್ಯಾಧಿಕಾರಿಯಾಗಿ ನಿಯೋಜಿತರಾಗಿದ್ದು ಅಗತ್ಯವಿದ್ದಾಗ ಆಡಳಿತಾತ್ಮಕ ಕೆಲಸಗಳಿಗಾಗಿ ಬಂದು ಹೋಗುತ್ತಾರೆ. ಹೆದ್ದಾರಿ ಬದಿಯ ಸರಕಾರಿ ಆಸ್ಪತ್ರೆಯಲ್ಲಿ ತುರ್ತಾಗಿ ಪೂರ್ಣಕಾಲಿಕ ವೈದ್ಯರ ನೇಮಕವಾಗಬೇಕೆನ್ನುವುದು ಜನರ ಆಗ್ರಹವಾಗಿದೆ.
ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುವ ಒಬ್ಬ ಮಹಿಳಾ ವೈದ್ಯರಿದ್ದಾರೆ. ಒಬ್ಬರು ಲ್ಯಾಬ್ ಟೆಕ್ನೀಶಿಯನ್, ಒಬ್ಬರು ಸ್ಟಾಫ್ ನರ್ಸ್, ಒಬ್ಬರು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ, ಒಬ್ಬರು ಹಿರಿಯ ಆರೋಗ್ಯ ಸುರಕ್ಷಾಧಿಕಾರಿ, ಒಬ್ಬರು ಪ್ರಥಮ ದರ್ಜೆ ಸಹಾಯಕ ಮತ್ತು 4 ಮಂದಿ ಕಿರಿಯ ಮಹಿಳಾ ಆರೋಗ್ಯ ಸುರಕ್ಷಾಧಿಕಾರಿ ಹುದ್ದೆ ಭರ್ತಿಯಾಗಿದೆ. ಗುತ್ತಿಗೆ ಆಧಾರಿತವಾಗಿ ಸ್ಟಾಫ್ ನರ್ಸ್, ಗ್ರೂಫ್ ಡಿ ನೌಕರ, ಚಾಲಕ, ಎಸ್‌ಟಿಎಲ್‌ಎಸ್ (ಟಿಬಿ ಸೂಪರ್ ವೈಸರ್) ಇದ್ದಾರೆ. ಖಾಯಂ ಹುದ್ದೆಗಳ ಪೈಕಿ ವೈದ್ಯ -1, ಫಾರ್ಮಾಸಿಸ್ಟ್ -1, ಪ್ರಥಮ ದರ್ಜೆ ಸಹಾಯಕ-1, ಕಿರಿಯ ಮಹಿಳಾ ಆರೋಗ್ಯ ಸುರಕ್ಷಾಧಿಕಾರಿ-5, ಕಿರಿಯ ಪುರುಷ ಆರೋಗ್ಯ ಸುರಕ್ಷಾಧಿಕಾರಿ-5 ಹುದ್ದೆಗಳು ಖಾಲಿ ಯಿವೆ. ಆ್ಯಂಬುಲೆನ್ಸ್ ಇದೆ, ಚಾಲಕ ಹುದ್ದೆ ಮಂಜೂ ರಾಗಿಲ್ಲ. ಪ್ರಸ್ತುತ ಕೋಟದಲ್ಲಿ ಆ್ಯಂಬುಲೆನ್ಸ್ ಚಾಲಕ ಹುದ್ದೆ ಪಡೆದಿರುವ ನಾಗರಾಜ್ ಕಾಪುವಿನಲ್ಲಿ ಚಾಲಕನಾಗಿ ಗುತ್ತಿಗೆ ಆಧಾರದಲ್ಲಿ ಎರವಲು ಸೇವೆ ನೀಡುತ್ತಿದ್ದಾರೆ. 9 ಗ್ರಾಮದ 34,673 ಜನರ ಸೇವೆಗೆ ಮೀಸಲು
ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರವು ಕಾಪು ಪುರಸಭೆ ವ್ಯಾಪ್ತಿಯ ಕಾಪು, ಉಳಿಯಾರಗೋಳಿ ಮತ್ತು ಮಲ್ಲಾರು ಗ್ರಾ.ಪಂ., ಇನ್ನಂಜೆ, ಮಜೂರು ಗ್ರಾ.ಪಂ. ವ್ಯಾಪ್ತಿಯ 34,673 ಮಂದಿಗೆ ಸೇವೆ ನೀಡುತ್ತಿದೆ. ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಕಾಪು ಕೇಂದ್ರ ಸ್ಥಾನವೂ ಸೇರಿದಂತೆ ಕಾಪು ಪಡು, ಮೂಳೂರು, ಮಲ್ಲಾರು, ಇನ್ನಂಜೆ, ಪಾಂಗಾಳ, ಮಜೂರು, ಪಾದೂರು, ಹೇರೂರು ಗ್ರಾಮಗಳಲ್ಲಿ ಉಪಕೇಂದ್ರಗಳಿವೆ. ಕೇಂದ್ರ ಸ್ಥಾನ ಹೊರತುಪಡಿಸಿ 8 ಉಪ ಆರೋಗ್ಯ ಕೇಂದ್ರಗಳಲ್ಲಿ 8 ಮಂದಿ ಗುತ್ತಿಗೆ ಆಧಾರಿತ ಸಮುದಾಯ ಆರೋಗ್ಯ ಅಧಿಕಾರಿಗಳು ಸೇವೆ ಸಲ್ಲಿಸುತ್ತಿದ್ದಾರೆ.
Related Articles
ಕಾಪು ತಾಲೂಕಿಗೆ 100 ಬೆಡ್‌ನ ತಾಲೂಕು ಆಸ್ಪತ್ರೆ ಅತೀ ಅಗತ್ಯವಾಗಿ ಮಂಜೂರಾಗಬೇಕಿದ್ದು ಅಷ್ಟರವರೆಗೆ ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾಲೂಕು ಆಸ್ಪತ್ರೆಯಲ್ಲಿ ಇರಬೇಕಾದ ಕನಿಷ್ಠ ಸೌಲಭ್ಯಗಳಾದರೂ ಅತ್ಯಗತ್ಯವಾಗಿ ಜೋಡಣೆಯಾಗಬೇಕಿವೆ. ರಾಷ್ಟ್ರೀಯ ಹೆದ್ದಾರಿ 66ರ ಸನಿಹದಲ್ಲೇ ಇರುವುದರಿಂದ ಇಲ್ಲಿ ಮೂಲ ಸೌಕರ್ಯಗಳ ಜೋಡಣೆ, ಒಳ ರೋಗಿ ಮತ್ತು ಹೊರ ರೋಗಿ ವಿಭಾಗ, ಒಳ ರೋಗಿ ವಿಭಾಗಕ್ಕೆ ಆರು ಬೆಡ್, ಎಕ್ಸ್‌ರೇ ಮಿಷನ್, ಸ್ಕ್ಯಾನಿಂಗ್ , ಶೀಥಲೀಕೃತ ಶವಾಗಾರ, ಶವ ಮರಣೋತ್ತರ ಪರೀಕ್ಷಾ ಕೊಠಡಿ, ಹೃದ್ರೋಗಿಗಳ ಅನುಕೂಲಕ್ಕೆ ಎಂ.ಆರ್.ಐ ಸ್ಕ್ಯಾನಿಂಗ್ ಸೆಂಟರ್, ಡಯಾಲಿಸಿಸ್ ಕೇಂದ್ರವೂ ಆರಂಭಗೊಳ್ಳಬೇಕಿದೆ.
Advertisement
ತಾಲೂಕು ಆಸ್ಪತ್ರೆಗೆ ಹೆಚ್ಚಿದ ಬೇಡಿಕೆಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಗಲು ಹೊತ್ತಿನ ಸೇವೆ ಮಾತ್ರ ಲಭ್ಯವಿದೆ. ಇಲ್ಲಿ ಪ್ರಥಮ ಚಿಕಿತ್ಸೆಗೆ ಮಾತ್ರ ಸೀಮಿತವಾಗಿರುವುದರಿಂದ ಕಾಪುವಿನ ಜನತೆ ತುರ್ತು ವೈದ್ಯಕೀಯ ಸೇವೆಗೆ ಉಡುಪಿ ಅಥವಾ ಮಂಗಳೂರನ್ನು ಆಶ್ರಯಿಸುವುದು ಅನಿವಾರ್ಯವಾಗಿದೆ. ಆದರೆ ಅಲ್ಲಿಗೆ ತಲುಪುವಷ್ಟರಲ್ಲಿ ರೋಗಿಗಳು ಮೃತಪಟ್ಟದ್ದೂ ಇದೆ. ರಾ. ಹೆ. 66ರ ಪಕ್ಕದಲ್ಲೇ ಇದ್ದರೂ ತುರ್ತು ಚಿಕಿತ್ಸಾ ಘಟಕ ಇಲ್ಲದೇ ಇರುವುದರಿಂದ ಅಪಘಾತದ ಗಾಯಾಳುಗಳು ಚಿಕಿತ್ಸೆಗಾಗಿ ಎಲ್ಲೆಲ್ಲಿಗೋ ಓಡಾಡಬೇಕಿದೆ.ಸರಕಾರ, ಆರೋಗ್ಯ ಇಲಾಖೆ, ಮತ್ತು ಜಿಲ್ಲಾಡಳಿತ ಇಲ್ಲಿನ ವೈದ್ಯರು ಮತ್ತು ಸಿಬಂದಿ ಕೊರತೆಯನ್ನು ಸರಿಪಡಿಸಿ, ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗುವ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಾರೆ. ಸರಕಾರಕ್ಕೆ ಪ್ರಸ್ತಾವನೆ
ಖಾಯಂ ವೈದ್ಯರ ನೇಮಕಾತಿ ಸರಕಾರದಿಂದ ನಡೆಯಬೇಕಿದೆ. ವೈದ್ಯರ ಕೊರತೆ ನೀಗಿಸಲು ಶಿರ್ವದಲ್ಲಿ ಗುತ್ತಿಗೆ ಆಧಾರಿತವಾಗಿ ಸೇವೆ ಸಲ್ಲಿಸುತ್ತಿದ್ದ ವೈದ್ಯರನ್ನು ಸೇವೆಗೆ ನಿಯೋಜಿಸಲಾಗಿದೆ. ಖಾಯಂ ಸಿಬಂದಿ ನೇಮಕ ಸರಕಾರಿ ಮಟ್ಟದ ಪ್ರಕ್ರಿಯೆಯಾಗಿದ್ದು ಕಾಪು ವಿಧಾನಸಭಾ ಕ್ಷೇತ್ರದ ಆರೋಗ್ಯ ಕೇಂದ್ರಗಳು, ಉಪ ಆರೋಗ್ಯ ಕೇಂದ್ರಗಳ ಸ್ಥಿತಿಗತಿ, ಸಿಬಂದಿ ಕೊರತೆ ಬಗ್ಗೆ ಶಾಸಕರ ಜತೆಗೆ ಚರ್ಚಿಸಲಾಗಿದೆ. ಸಿಬಂದಿ ಕೊರತೆ ನೀಗಿಸಲು ಶಾಸಕರ ಮೂಲಕ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.-ಡಾ| ನಾಗಭೂಷಣ್ ಉಡುಪ, ಜಿಲ್ಲಾ ಆರೋಗ್ಯ ಅಧಿಕಾರಿ ಕುಂದು ಕೊರತೆ ಪರಿಶೀಲನೆ
ಖಾಯಂ ವೈದ್ಯರ ನೇಮಕಾತಿಯ ಬಗ್ಗೆ ಸರಕಾರಕ್ಕೆ ಈ ಬಗ್ಗೆ ಒತ್ತಡ ಹೇರಲಾಗುವುದು. ಕಾಪು ವಿಧಾನಸಭಾ ಕ್ಷೇತ್ರದ ಎಲ್ಲ ಆರೋಗ್ಯ ಕೇಂದ್ರಗಳು, ಉಪ ಆರೋಗ್ಯ ಕೇಂದ್ರಗಳ ಸ್ಥಿತಿಗತಿ, ವೈದ್ಯರು, ಸಿಬಂದಿ ಲಭ್ಯತೆ ಮತ್ತು ಕೊರತೆಗಳ ಬಗ್ಗೆ ಮಾಹಿತಿ ಪಡೆಯುವುದಕ್ಕಾಗಿ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿ, ಮಾಹಿತಿ ಪಡೆಯಲಾಗಿದೆ. ಮಳೆಗಾಲ ಆರಂಭಕ್ಕೆ ಮೊದಲೇ ಆರೋಗ್ಯ ಇಲಾಖೆಗೆ ಸಂಬಂಧಿಸಿ ಇರುವ ಕುಂದು ಕೊರತೆಗಳನ್ನು ಪರಿಶೀಲಿಸಿ, ಸಮಸ್ಯೆ ಬಗೆಹರಿಸಲಾಗುವುದು.
-ಗುರ್ಮೆ ಸುರೇಶ್ ಶೆಟ್ಟಿ
ಶಾಸಕರು, ಕಾಪು -ರಾಕೇಶ್ ಕುಂಜೂರು