ಕಾಪು: ಲಾಲ್ ಬಹದ್ದೂರ್ ಶಾಸ್ತ್ರಿ ನ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ ಕಾಪು, ಕಾಪು ಪಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ದಿ| ಆರ್.ಡಿ. ಮೆಂಡನ್ ಸ್ಮರಣಾರ್ಥ ಜನ್ಮಶತಮಾನೋತ್ಸವ ಆಚರಣ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಡಿ. 16, 17 ಮತ್ತು 18ರಂದು ನಡೆಯಲಿರುವ “ಕಡಲ ಐಸಿರ – ಬೀಚ್ ಫೆಸ್ಟ್ 2022′ ಕಾರ್ಯಕ್ರಮಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ.
ಡಿ. 16ರಂದು ಸಂಜೆ ಕಾಪು ಪಡು ಸ.ಹಿ.ಪ್ರಾ. ಶಾಲೆಯ ವಠಾರದಲ್ಲಿ ಆಚರಣೆ ಸಮಿತಿಯ ಗೌರವಾಧ್ಯಕ್ಷ ಲಾಲಾಜಿ ಆರ್. ಮೆಂಡನ್ ಅಧ್ಯಕ್ಷತೆ ಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ದೊರಕಲಿದೆ. ದಿ| ಡಾ| ವಿ.ಎಸ್. ಆಚಾರ್ಯ ಕಾಲನಿ ಉದ್ಘಾಟನೆ ಗೊಳ್ಳಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಸಚಿವರಾದ ಎಸ್. ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್ ಸಹಿತ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ. ಮಕ್ಕಳಿಂದ ನೃತ್ಯ ಮತ್ತು ತುಳು ನಾಟಕಗಳು ಪ್ರದರ್ಶನಗೊಳ್ಳಲಿವೆ.
ಡಿ. 17ರಂದು ಮಧ್ಯಾಹ್ನ 2ಕ್ಕೆ ಕಾಪು ಬೀಚ್‌ನಲ್ಲಿ ವಿವಿಧ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಲಾಲಾಜಿ ಮೆಂಡನ್, ಸಚಿವ ಡಾ| ಅಶ್ವತ್ಥನಾರಾಯಣ ಸಿ.ಎನ್. ಸಹಿತ ಗಣ್ಯರು ಚಾಲನೆ ನೀಡಲಿದ್ದಾರೆ. ವಿವಿಧ ಸ್ಪರ್ಧೆಗಳು, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಇರಲಿದೆ.
ಡಿ. 18ರಂದು ಬೆಳಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ರಾಜ್ಯ ಗೃಹ ಸಚಿವ ಆರಂಗ ಜ್ಞಾನೇಂದ್ರ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಲಿದ್ದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಶಾಸಕ ರಘುಪತಿ ಭಟ್, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ವಿನಯಕುಮಾರ್ ಸೊರಕೆ ಸಹಿತ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ. ಬೀಚ್ ವಾಲಿಬಾಲ್ ಸ್ಪರ್ಧೆ, ಕೊಳಲು ಮತ್ತು ತಬಲ ತಂಡ ಸ್ಪರ್ಧೆ, ಶ್ವಾನ ಸ್ಪರ್ಧೆ, ಈಜು ಸ್ಪರ್ಧೆ, ಮರಳಿನಲ್ಲಿ ಕಲಾಕೃತಿ, ಹುಟ್ಟು ದೋಣಿ ಸ್ಪರ್ಧೆ, ಗಾಳಿಪಟ ಸ್ಪರ್ಧೆ ಸಹಿತ ವಿವಿಧ ಸ್ಪರ್ಧೆಗಳು ನಡೆಯಲಿವೆ. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಚೆಂಡೆ ಸ್ಪರ್ಧೆ, ಸಂಗೀತ ರಸಮಂಜರಿ ಮತ್ತು ಲೇಸರ್ ಶೋ ನಡೆಯಲಿದೆ.