ದಾವಣಗೆರೆ: ವಿಧಾನ ಪರಿಷತ್ ಸದಸ್ಯ ಕೆ.ಗೋವಿಂದರಾಜ್‌ರ ಡೈರಿಯಲ್ಲಿ ರಾಜ್ಯ ಸರ್ಕಾರದ ಸಚಿವರು ಪಕ್ಷದ ವರಿಷ್ಠರಿಗೆ ನೀಡಿದ್ದಾರೆನ್ನಲಾದ ಕಪ್ಪದ ಮಾಹಿತಿ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಕೆಪಿಸಿಸಿ ಖಜಾಂಚಿ ಶಾಮನೂರು ಶಿವಶಂಕರಪ್ಪ ಮನೆಗೆ ಮುತ್ತಿಗೆ ಸಿದ್ಧತೆಯಲ್ಲಿದ್ದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದರು.
ಜಯದೇವ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ನ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಮೆರವಣಿಗೆ ಮೂಲಕ ಜಿಲ್ಲಾ ಸಚಿವ ಮಲ್ಲಿಕಾರ್ಜುನ್, ಕೆಪಿಸಿಸಿ ಖಜಾಂಚಿ ಶಿವಶಂಕರಪ್ಪನವರ ನಿವಾಸ ಮುತ್ತಿಗೆಗೆ ಸಿದ್ಧತೆಯಲ್ಲಿದ್ದಾಗ ಪೊಲೀಸರು 30ಕ್ಕೂ ಹೆಚ್ಚು ಜನರನ್ನು ವಶಕ್ಕೆ ತೆಗೆದುಕೊಂಡರು.
ಇದಕ್ಕೂ ಮುನ್ನ ಕಾರ್ಯಕತರರನ್ನು ಉದ್ದೇಶಿಸಿ, ಮಾತನಾಡಿದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಕಾಂಗ್ರೆಸ್ ಹೈ ಕಮಾಂಡ್ ಹಾಗೂ ವರಿಷ್ಠರಿಗೆ ರಾಜ್ಯ ಸರ್ಕಾರದ ಸಚಿವರು ಕೋಟ್ಯಂತರ ರೂ. ಕಪ್ಪ ಕಾಣಿಕೆ ನೀಡಿರುವುದು ಈಗಾಗಲೇ ಜಗಜ್ಜಾಹೀರಾಗಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್‌ನ ಕೆಲವು ನಾಯಕರು ನಮ್ಮ ಪಕ್ಷದ ನಾಯಕರ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಡಿಯೂರಪ್ಪನವರ ನೈತಿಕತೆ ಕುರಿತು ಮಾತನಾಡುತ್ತಾರೆ. ಆದರೆ, ಯಡಿಯೂರಪ್ಪ ನಿರ್ದೋಷಿ ಎಂಬುದು ಈಗಾಗಲೇ ನ್ಯಾಯಾಲಯದಿಂದಲೇ ತೀರ್ಮಾನ ಆಗಿದೆ ಎಂದರು. ವಿಧಾನ ಪರಿಷತ್ ಸದಸ್ಯ ಗೋವಿಂದರಾಜ್ ಅವರ ಮನೆಯಲ್ಲಿ ಸಿಕ್ಕಿರುವ ಡೈರಿ ಮಾಹಿತಿಯಂತೆ ಸಾವಿರಾರು ಕೋಟಿ ರೂ. ಗಳನ್ನು ಕಾಂಗ್ರೆಸ್‌ನ ಅಧಿನಾಯಕಿ ಸೋನಿಯಾ ಗಾಂಧಿ, ಮುಖಂಡರಾದ ದಿಗ್ವಿಜಯ್ ಸಿಂಗ್, ರಾಹುಲ್ ಗಾಂಧಿ ಸೇರಿದಂತೆ ಇತರೆ ಗಣ್ಯರಿಗೆ ನೀಡಲಾಗಿದೆ.
ಮುಖ್ಯಮಂತ್ರಿಗಳು ಇದೆಲ್ಲಾ ಸುಳ್ಳು ಅನ್ನುತ್ತಿದ್ದಾರೆ. ಹಾಗಿದ್ದರೆ ಈ ಡೈರಿ ಯಾವುದು? ಇದರಲ್ಲಿ ಬರೆದ ಈ ಮಾಹಿತಿ ಯಾವುದಕ್ಕೆ ಸಂಬಂಧಪಟ್ಟದ್ದು ಎಂಬ ಮಾಹಿತಿಯನ್ನಾದರೂ ಸಿಎಂ ನೀಡಬೇಕಿತ್ತು ಎಂದು ಅವರು ಆಗ್ರಹಿಸಿದರು. ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರದ ಅನೇಕ ಸಚಿವರು ಹಗರಣದಲ್ಲಿ ಭಾಗಿಯಾಗಿದ್ದನ್ನು ಮಾಧ್ಯಮಗಳು ಬಯಲಿಗೆಳೆದಿವೆ.
ಇತೀಚಿಗೆ ನಡೆದ ಐಟಿ ದಾಳಿಯ ವೇಳೆ ಕಾಂಗ್ರೆಸ್‌ನ ದೊಡ್ಡ ದೊಡ್ಡ ಕುಳಗಳು ಕೋಟ್ಯಂತರ ರೂ. ಅಕ್ರಮ ಆಸ್ತಿ ಮಾಡಿರುವುದು ಬಯಲಿಗೆ ಬಂದಿದೆ. ಇಂತಹ ಸರ್ಕಾರದಿಂದ ರಾಜ್ಯದ ಉದ್ಧಾರ ಅಸಾಧ್ಯ. ಸಿಎಂ ಪ್ರಾಮಾಣಿಕವಾಗಿದ್ದರೆ ತಮ್ಮ ಹುದ್ದೆಗೆ ರಾಜಿನಾಮೆ ನೀಡಿ, ಡೈರಿಯ ತನಿಖೆಗೆ ಸೂಕ್ತ ಕ್ರಮ ವಹಿಸಲಿ ಎಂದು ಅವರು ಆಗ್ರಹಿಸಿದರು. ಮಾಜಿ ಶಾಸಕ ಬಿ.ಪಿ. ಹರೀಶ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪಿ.ಸಿ. ಶ್ರೀನಿವಾಸ್, ಅಕ್ಕಿ ಪ್ರಭು, ವಾಗೀಶ್, ಎಚ್.ಎನ್. ಶಿವಕುಮಾರ್, ಎಚ್.ಸಿ. ಜಯಮ್ಮ ಈ ಸಂದರ್ಭದಲ್ಲಿದ್ದರು.