ಎಚ್.ಡಿ.ಕೋಟೆ : ತಾಲೂಕಿನಲ್ಲಿ 4 ಜಲಾಶಯಗಳಿವೆಯಾದರೂ ಪಟ್ಟಣದ ಮನೆಗಳಿಗೆ ಕುಡಿಯಲು ವಿಷಕಾರಿ ನೀರು ಸರಬರಾಜಾಗುತ್ತಿರುವುದು ವಿಷಾದದ ಸಂಗತಿ. ಅತೀ ಶೀಘ್ರದಲ್ಲಿ ಪಟ್ಟಣದ ಎಲ್ಲಾ ಮನೆಗಳಿಗೆ ವಾರದಲ್ಲಿ 2 ದಿನ ಕಪಿಲಾ ನದಿ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳುವುದಾಗಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಐಡಿಯಾ ವೆಂಕಟೇಶ್ ಭರವಸೆ ನೀಡಿದರು.
ಪುರಸಭೆ ದಿ.ಚಿಕ್ಕಮಾದು ಸಭಾ ಭವನದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಪಟ್ಟಣದ ವರ್ತಕರ ಸಭೆಯಲ್ಲಿ ವರ್ತರ ಸಂಘದವರು ತಾಲೂಕಿನಲ್ಲಿ ಕಬಿನಿ, ತಾರಕ, ನುಗು, ಹೆಬ್ಬಳ್ಳ ಈ 4 ಜಲಾಶಯಗಳಿವೆಯಾದರೂ ಪಟ್ಟಣದ ಜನತೆಗೆ ಕುಡಿಯುವ ನೀರಿಗಾಗಿ ಕಬಿನಿ ನೀರಿನ ಸಂಪರ್ಕ ಕಲ್ಪಿಸದೇ ಇರುವುದು ವಿಪರ್ಯಾಸ. ಕಬಿನಿ ನೀರಿನ ಜೊತೆಗೆ ಬೋರ್‌ವೆಲ್ ನೀರು ಲಿಂಕ್ ಮಾಡಿ ಕಳುಹಿಸುತ್ತಿ ರುವುದ ರಿಂದ ವಿಷಕಾರಿ ನೀರಿನ ಸೇವನೆ ಯಿಂದ ಸಾರ್ವ ಜನಿಕರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಲಿದೆ ಅನ್ನುವ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದವರು.
ಈ ಸಂದರ್ಭದಲ್ಲಿ ಪಟ್ಟಣದ ಸರ್ಕಾರಿ ಬಸ್‌ನಿಲ್ದಾಣದಿಂದ ತಾಲೂಕು ಆಡಳಿತ ಸೌಧದ ತನಕ ರಸ್ತೆ ಇಕ್ಕೆಲೆಗಳನ್ನು ಸಮತಟ್ಟು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಪುರಸಭೆಗೆ ಸೇರಿದ ಸರ್ವಜನಾಂಗದ ಸ್ಮಶಾನದ ಜಾಗ ಅಭಿವೃದ್ಧಿ ಪಡಿಸಬೇಕು. ಪಟ್ಟಣದ ಜನತೆಗೆ ಕುಡಿಯಲು ಶುದ್ಧ ನೀರು ಸರಬರಾಜು ಮಾಡಬೇಕು. ಪುರಸಭೆಯಲ್ಲಿ ಸಾರ್ವಜನಿಕ ಕೆಲಸಗಳ ವಿಳಂಬಕ್ಕೆ ತೆರೆ ಹಾಕಬೇಕು. ತಾಲೂಕು ಕೇಂದ್ರ ಸ್ಥಾನದಲ್ಲಿ ವಿವಿಧ ಸಮುದಾಯಗಳ ಬಹಿಷ್ಕಾರದ ಬರೆಯಿಂದ ಬಹಿಷ್ಕಾರಕ್ಕೆ ಸಿಲುಕಿದ ಬಡ ಮಂದಿ ಸಾವಿನ ಸಂದರ್ಭದಲ್ಲಿ ಶವ ಸಂಸ್ಕಾರಕ್ಕೆ ಬಹಿಷ್ಕಾರ ವಿಧಿಸಿದ ಸಮು ದಾಯ ಮುಂದಾಗದೇ ಇರುವುದರಿಂದ ಶವ ಸಂಸ್ಕಾರಕ್ಕೆ ಪ್ರಯಾಸ ಪಡಬೇಕಾದ ಅನಿವಾರ್ಯತೆ ಇದೆ. ಬಹಿಷ್ಕಾರಕ್ಕೆ ಒಳಗಾಗಿ ಶವಸಂಸ್ಕಾರಕ್ಕೆ ತೊಂದರೆ ಅನುಭವಿಸುವವರಿಗೆ ಪುರಸಭೆಯಿಂದ ಶವಸಂಸ್ಕಾರಕ್ಕೆ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ಹಿತಾದೃಷ್ಟಿಯಿಂದ ಪಟ್ಟಣದ ಸ್ಮಶಾನದಲ್ಲಿ ನೂತನವಾಗಿ ವಿದ್ಯುತ್ ಚಿತಾಗಾರವೊಂದನ್ನು ಆರಂಭಿಸಲು ಪುರಸಭೆ ಮುಂದಾಗಬೇಕು. ಪಟ್ಟಣದ ಬಹುತೇಕ ಬಡವಣೆಗಳಲ್ಲಿ ಕುಡಿಯುವ ನೀರಿನ ಸೋರಿಕೆಯಾಗುತ್ತಿದ್ದು, ಸೋರಿಕೆ ನೀರಿನಿಂದ ಜನಸಾಮಾನ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದನ್ನು ಮನಗಂಡು ನೀರಿನ ಸೋರಿಕೆ ತಡೆಗೆ ಮುಂದಾಗಬೇಕು ಅನ್ನುವ ವಿಚಾರಗಳು ಸಭೆಯಲ್ಲಿ ಮುಖ್ಯವಾಗಿ ಚರ್ಚೆಗೆ ಬಂದವು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಪಿ.ಸುರೇಶ್, ಸದಸ್ಯರಾದ ನಾಗರಾಜು, ಶಾಂತಮ್ಮ, ಹರೀಶ, ವರ್ತಕರ ಸಂಘದ ಅಧ್ಯಕ್ಷ ವಿನಯ್, ರವಿಕುಮಾರ್, ಮಾಜಿ ಅಧ್ಯಕ್ಷ ಪುಟ್ಟೇಗೌಡ, ಸಮ್ರತ್ ಲಾಲ್ ಕೊಠಾರಿ, ನಾರಾಯಣ್‌ಲಾಲ್ ಜೈನ್, ಹೊಂಡ ನಯಾಜ್, ಹಬೀಬ್ ಇತರರು ಇದ್ದರು.
ಪುರಸಭೆ ಆದಾಯಕ್ಕೆ ಸಹರಿಸಿ: ವೆಂಕಟೇಶ್ : ನಾನೊಬ್ಬ ಸಿವಿಲ್ ಗುತ್ತಿಗೆದಾರರನಾಗಿದ್ದರೂ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷನಾದ ಮೇಲೆ ಪಟ್ಟಣದ ಜನತೆಗೆ ಸುಧಾರಣೆ ದೃಷ್ಟಿಯಿಂದ ನನ್ನ ವೃತ್ತಿ ಬದಿಗೊತ್ತಿ ಇಡೀ ದಿನ ಪುರಸಭೆಯ ಸಾರ್ವಜನಿಕ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಪುರಸಭೆಯಲ್ಲಿ ಅಭಿವೃದ್ಧಿ ಕಾರ್ಯಗಳು ಸಾಕಷ್ಟಿವೆ ಆದರೆ ಅನುದಾನದ ಕೊರತೆಯಿಂದ ಪಟ್ಟಣದ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ. ಅನುದಾನ ಕ್ರೂಢೀಕರಿಸಿಕೊಂಡು ಹಂತ ಹಂತವಾಗಿ ಪಟ್ಟಣದ ಅಭಿವೃದ್ಧಿ ಪಡಿಸುವ ಇಂಗಿತ ವ್ಯಕ್ತಪಡಿಸಿದ ಅವರು, ವರ್ತಕರು ಕಳೆದ ಸಾಲಿನ ಪುರಸಭೆ ಪರವಾನಗಿ ಬಾಕಿ ಮತ್ತು ಪ್ರಸಕ್ತ ಸಾಲಿನ ಮಾರ್ಚ್ ತಿಂಗಳ ಪರವಾನಗಿ ನವೀಕರಿಸುವ ಮೂಲಕ ಪುರಸಭೆ ಆದಾಯಕ್ಕೆ ಸಹಕಾರಿಯಾಗುವಂತೆ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಐಡಿಯಾ ವೆಂಕಟೇಶ್ ಮನವಿ ಮಾಡಿದರು.