ಹೊಸದಿಲ್ಲಿ: ಇಂದು ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕಾರಣಿ ಸಭೆ ಹಲವು ರಾಜಕೀಯ ಚಟುವಟಿಕೆಗಳಿಗೆ ಕಾರಣವಾಗಿದೆ. ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಗೆ ಕೆಲಸ ಮಾಡಿದ ನಾವು ಬಿಜೆಪಿ ಜೊತೆ ಸೇರಿ ತಂತ್ರ ಮಾಡಿಲ್ಲ. ಆದರೂ ನಮ್ಮ ಮೇಲೆ ಆರೋಪ ಮಾಡಲಾಗುತ್ತಿದೆ ಎಂದು ಕಪಿಲ್ ಸಿಬಲ್ ಅಸಮಧಾನದಿಂದ ಟ್ವೀಟ್ ಮಾಡಿದ್ದರು. ಆದರೆ ಇದೀಗ ತಮ್ಮ ಟ್ವೀಟ್ ಅನ್ನು ಹಿಂಪಡೆದಿರುವ ಅವರು ತಪ್ಪು ಮಾಹಿತಿಯಿಂದ ನಾನು ಟ್ವೀಟ್ ಮಾಡಿದ್ದೆ ಎಂದಿದ್ದಾರೆ.
ನಾಯಕತ್ವ ಬದಲಾವಣೆಗಾಗಿ ಸೋನಿಯಾ ಗಾಂಧಿಯವರಿಗೆ 23 ಮಂದಿ ಹಿರಿಯ ಕೈ ನಾಯಕರು ಪತ್ರ ಬರೆದಿದ್ದು, ಇಂದಿನ ಕಾರ್ಯಕಾರಣಿ ಸಭೆಯಲ್ಲಿ ಆ ಹಿರಿಯ ನಾಯಕರ ವಿರುದ್ಧ ರಾಹುಲ್ ಗಾಂಧಿ ಅಸಮಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಪಕ್ಷದ ಹಿರಿಯ ನಾಯಕರು ಪತ್ರ ಬರೆದಿದ್ಯಾಕೆ? ಬರೆದಿದ್ದರೂ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು ಯಾಕೆ? ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಂದು ನಾಯಕತ್ವ ಬದಲಾವಣೆಗಾಗಿ ಕಾಂಗ್ರೆಸ್ ನಾಯಕರು ಪತ್ರ ಬರೆದಿದ್ದಾರೆ ಎಂದು ರಾಹುಲ್ ಗಾಂಧಿ ಸಭೆಯಲ್ಲಿ ಆರೋಪಿಸಿದ್ದಾರೆ ಎಂದು ವರದಿಯಾಗಿತ್ತು.
ಇದನ್ನೂ ಓದಿ: ಕಾಂಗ್ರೆಸ್ ಸಭೆಯಲ್ಲಿ ಭಿನ್ನಾಭಿಪ್ರಾಯ ಸ್ಪೋಟ: ರಾಹುಲ್ ಬೆನ್ನಿಗೆ ನಿಂತ ರಮ್ಯಾ ಹೇಳಿದ್ದೇನು?
ಇದರಿಂದ ಕೆರಳಿದ್ದ ಹಿರಿಯ ನಾಯಕ ಕಪಿಲ್ ಸಿಬಲ್, ಕಳೆದ 30 ವರ್ಷದಲ್ಲಿ ನಾನು ಒಂದೇ ಒಂದು ದಿನವೂ ಬಿಜೆಪಿ ಪರವಾಗಿ ಯಾವುದೇ ವಿಚಾರದಲ್ಲೂ ಹೇಳಿಕೆ ನೀಡಿಲ್ಲ. ಆದರೂ ಈ ರೀತಿಯ ಆರೋಪ ಕೇಳಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು. ರಾಹುಲ್ ಗಾಂಧಿ ನಾವು ಬಿಜೆಪಿಯೊಂದಿಗೆ ಕೈಜೋಡಿಸಿ, ಪಕ್ಷದ ವಿರುದ್ಧ ತಂತ್ರ ರೂಪಿಸಿದ್ದೇವೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ಪರವಾಗಿ ರಾಜಸ್ಥಾನ ಹೈಕೋರ್ಟ್ನಲ್ಲಿ ವಾದ ಮಂಡಿಸಿ ಜಯ ಗಳಿಸಿದ್ದೇನೆ. ಮಣಿಪುರದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಲು ಕಾಂಗ್ರೆಸ್ ಪರವಾಗಿ ವಾದ ಮಂಡಿಸಿದ್ದೆ. ಕಳೆದ 30 ವರ್ಷದ ರಾಜಕೀಯದಲ್ಲಿ ಎಂದಿಗೂ ಬಿಜೆಪಿ ಪರವಾಗಿ ಹೇಳಿಕೆ ನೀಡಿಲ್ಲ. ಆದರೂ ನಾವು ಬಿಜೆಪಿ ಜೊತೆ ಕೈಜೋಡಿಸಿದ್ದೇವೆ! ಎಂದು ಕಪಿಲ್ ಸಿಬಲ್ ಟ್ವೀಟ್ ಮಾಡಿದ್ದರು.
ಈ ಟ್ವೀಟ್ ವೈರಲ್ ಆಗುತ್ತಿದ್ದಂತೆ, ಕಾಂಗ್ರೆಸ್ ವಕ್ತಾರ ರಣ್ ದೀಪ್ ಸಿಂಗ್ ಸುರ್ಜೆವಾಲಾ ಟ್ವೀಟ್ ಮಾಡಿ, ಸಭೆಯಲ್ಲಿ ರಾಹುಲ್ ಗಾಂಧಿಯವರು ಇಂತಹ ಯಾವುದೇ ಮಾತುಗಳನ್ನಾಡಿಲ್ಲ. ಸುಳ್ಳು ಸುದ್ದಿಗಳನ್ನು ನಂಬೇಡಿ ಎಂದು ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: 1998-99ರಲ್ಲಿಯೂ ಕಾಂಗ್ರೆಸ್ ಇದೇ ಸ್ಥಿತಿ ಅನುಭವಿಸಿತ್ತು…ಅಂದು ಘಟಾನುಘಟಿ ನಾಯಕರ ರಾಜೀನಾಮೆ!
ಸುರ್ಜೇವಾಲ ಟ್ವೀಟ್ ನಂತರ ಮತ್ತೊಂದು ಟ್ವೀಟ್ ಮಾಡಿರುವ ಕಪಿಲ್ ಸಿಬಲ್, ಸಭೆಯಲ್ಲಿ ಇಂತಹ ಮಾತುಗಳನ್ನು ಆಡಿಲ್ಲ ಎಂದು ಸ್ವತಃ ರಾಹುಲ್ ಗಾಂಧಿಯವರೇ ನನಗೆ ಹೇಳಿದ್ದಾರೆ. ಹಾಗಾಗಿ ನನ್ನ ಟ್ವೀಟ್ ಅನ್ನು ಹಿಂಪಡೆಯುತ್ತೇನೆ ಎಂದು ಸಮಜಾಯಿಷಿ ನೀಡಿ ಟ್ವೀಟ್ ಮಾಡಿದ್ದಾರೆ.
ಒಟ್ಟಿನಲ್ಲಿ ನಾಯಕತ್ವದ ಕುರಿತಾಗಿ ಚರ್ಚೆ ನಡೆಯಬೇಕಾಗಿದ್ದ ಕಾಂಗ್ರೆಸ್ ಕಾರ್ಯಕಾರಣಿ ಸಭೆ, ಹೊಸ ರಾಜಕೀಯ ಚಟುವಟಿಕೆಗಳಿಗೆ ವೇದಿಕೆಯಾಗಿದೆ.