ನವದೆಹಲಿ: ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ವರಿಷ್ಠ ಅರವಿಂದ ಕೇಜ್ರಿವಾಲ್ ಅವರು ಹವಾಲಾ ಹಗರಣದಲ್ಲಿ ಶಾಮೀಲಾಗಿದ್ದಾರೆ. ಹಾಗಾಗಿಯೇ ಅವರು ನೋಟು ಅಪನಗದೀಕರಣವನ್ನು ವಿರೋಧಿಸಿದ್ದು ಎಂದು ಆಮ್ ಆದ್ಮಿ ಪಕ್ಷದಿಂದ ವಜಾಗೊಂಡಿರುವ ಸಚಿವ ಕಪಿಲ್ ಮಿಶ್ರಾ ಅವರು ಶುಕ್ರವಾರ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ಕೇಜ್ರಿವಾಲ್ ಅವರು ಯಾಕೆ ನೋಟು ನಿಷೇಧವನ್ನು ತೀವ್ರವಾಗಿ ವಿರೋಧಿಸಿದರು? ಈ ಬಗ್ಗೆ ದೇಶಾದ್ಯಂತ ಹೋರಾಟ ನಡೆಸಲು ಮುಂದಾಗಿದ್ದೇಕೆ? ಯಾಕೆಂದರೆ ಈ (ಕೇಜ್ರಿವಾಲ್) ವ್ಯಕ್ತಿ ಬಳಿ ಕಪ್ಪು ಹಣವನ್ನು ಹೊಂದಿರುವುದಕ್ಕೆ. ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದರೆ ತನ್ನ ಬಂಡವಾಳ ಬಯಲಾಗುತ್ತದೆ ಎಂಬ ಭಯದಿಂದ ನೋಟು ನಿಷೇಧದ ಬಗ್ಗೆ ಧ್ವನಿ ಎತ್ತಿರುವುದಾಗಿ ಮಿಶ್ರಾ ಗಂಭೀರವಾಗಿ ಆರೋಪಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಮ್ ಆದ್ಮಿ ಪಕ್ಷ ಹವಾಲಾ ಜಾಲದ ಮೂಲಕವೇ ಹಣವನ್ನು ಪಡೆದಿರುವುದಾಗಿ ದೂರಿದರು. ಅಷ್ಟೇ ಅಲ್ಲ ಆಮ್ ಆದ್ಮಿ ಪಕ್ಷ ನಕಲಿ ಕಂಪನಿಗಳಿಂದ ದೇಣಿಗೆ ಸ್ವೀಕರಿಸಿರುವ ಬಗ್ಗೆ ಪವರ್ ಪಾಯಿಂಟ್ ಮೂಲಕ ದಾಖಲೆಯನ್ನು ಬಹಿರಂಗಪಡಿಸಿದರು.
ದೆಹಲಿ ಮೂಲದ ಉದ್ಯಮಿ ಮುಕೇಶ್ ಕುಮಾರ್ ಎಂಬವರು 2014ರಲ್ಲಿ ಆಮ್ ಆದ್ಮಿ ಪಕ್ಷಕ್ಕೆ 2 ಕೋಟಿ ರೂಪಾಯಿ ದೇಣಿಗೆ ನೀಡಿರುವುದಾಗಿ ಆರೋಪಿಸಿದರು. ಇವರೆಲ್ಲ ಕಪ್ಪು ಹಣದ ಕುಳಗಳು ಎಂದು ಹೇಳಿದರು. 2013ರಲ್ಲಿ ಆಮ್ ಆದ್ಮಿ ಪಕ್ಷ ದೆಹಲಿ ಗದ್ದುಗೆ ಏರುವ 10 ದಿನ ಮೊದಲು ವ್ಯಾಟ್ ಪಾವತಿಸಿಲ್ಲ ಎಂದು ಮುಕೇಶ್ ಕುಮಾರ್ ಕಂಪನಿಗೆ ದೆಹಲಿ ಸರ್ಕಾರ ನೋಟಿಸ್ ಜಾರಿ ಮಾಡಿತ್ತು. ಬಳಿಕ ಈ ವ್ಯಕ್ತಿ ಆಪ್ ಪಕ್ಷಕ್ಕೆ 2 ಕೋಟಿ ದೇಣಿಗೆ ನೀಡಿರುವುದಾಗಿ ಮಿಶ್ರಾ ತಿಳಿಸಿದ್ದಾರೆ.
2013ರಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರದ ಗದ್ದುಗೆ ಏರಿದ ಬಳಿಕ ವ್ಯಾಟ್ ಪಾವತಿಸದ ಮುಕೇಶ್ ವಿರುದ್ಧ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಹಾಗೂ ಡಿಸಿಎಂ ಮನೀಶ‍್ ಸಿಸೋಡಿಯಾ ಅವರು ಯಾಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿದ್ದಾರೆ.