Advertisement

ಕಾಂತರಾಜು ಆಯೋಗದ ವರದಿ, ಒಳ ಮೀಸಲು ಜಾರಿಗೊಳಿಸಿ: ನಾರಾಯಣ ಸ್ವಾಮಿ

11:07 PM Jul 29, 2023 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬದ್ಧತೆ ಇದ್ದರೆ ಪರಿಶಿಷ್ಟರಿಗೆ ಒಳ ಮೀಸಲಾತಿ ಕೊಟ್ಟು ಕಾಂತರಾಜು ಆಯೋಗದ ವರದಿ ಅನುಷ್ಠಾನಕ್ಕೆ ತರುವಂತೆ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಸವಾಲು ಹಾಕಿದರು.

Advertisement

ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ, ಈ ಹಿಂದೆ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಸದಾಶಿವ ಆಯೋಗ ಸಹಿತ ವಿವಿಧ ಆಯೋಗ ಹಾಗೂ ಸಮಿತಿಗಳ ವರದಿ ಆಧರಿಸಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಹೆಚ್ಚಳದ ಜತೆಗೆ ಒಳ ಮೀಸಲಾತಿಗೂ ಶಿಫಾರಸು ಮಾಡುವ ಮೂಲಕ ಬದ್ಧತೆ ತೋರಿತ್ತು. ಅದೇ ಬದ್ಧತೆ ಈಗಿನ ರಾಜ್ಯ ಸರಕಾರಕ್ಕಿದ್ದರೆ ಒಳ ಮೀಸಲಾತಿ ಕೊಡಬೇಕು ಹಾಗೂ ಕಾಂತರಾಜು ಆಯೋಗದ ವರದಿಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಸಂವಿಧಾನದ ಶೆಡ್ನೂಲ್‌ 9ಕ್ಕೆ ಸೇರುವ ಮೊದಲೇ ತಮಿಳುನಾಡು ಮತ್ತು ಆಂಧ್ರಪ್ರದೇಶ ಸರಕಾರಗಳು ಒಳಮೀಸಲಾತಿ ಜಾರಿಗೊಳಿಸಿವೆ. ಇದೇ ದಾರಿ ಹಿಡಿದ ಅನೇಕ ರಾಜ್ಯಗಳ ಮೀಸಲಾತಿ ವಿಚಾರಗಳು ಸುಪ್ರೀಂ ಕೋರ್ಟ್‌ವರೆಗೂ ಹೋಗಿವೆ. ಕರ್ನಾಟಕದಲ್ಲಿ ನಮ್ಮ ಸರಕಾರ ಇದ್ದಾಗ ಇದಕ್ಕೆ ಅವಕಾಶ ಮಾಡಿಕೊಡದೆ ಕಾನೂನಾತ್ಮಕ ಪ್ರಕ್ರಿಯೆಗಳನ್ನು ನಡೆಸಲಾಗಿತ್ತು.

ಎಸ್‌ಸಿಗಳಿಗೆ ಒಳ ಮೀಸಲಾತಿ ಕೊಡುವುದಕ್ಕೆ ಸಂಬಂಧಿಸಿ ಸಂವಿಧಾನದ ಪರಿಚ್ಛೇದ 341ಕ್ಕೆ ತಿದ್ದುಪಡಿ ತರಬೇಕಾಗುತ್ತದೆ. ಇದಕ್ಕೆ ಕರ್ನಾಟಕ ಸಹಿತ ಹಲವು ರಾಜ್ಯಗಳು ಒಪ್ಪಿಗೆ ಸೂಚಿಸಿದ್ದವು. ಆದರೆ ದಿಲ್ಲಿ, ಪಂಜಾಬ್‌ನಲ್ಲಿರುವ ಸರಕಾರ, ಹಿಮಾಚಲ ಪ್ರದೇಶದ ಕಾಂಗ್ರೆಸ್‌ ಸರಕಾರ ಹಾಗೂ ಪಶ್ಚಿಮ ಬಂಗಾಲದ ತೃಣಮೂಲಕ ಕಾಂಗ್ರೆಸ್‌ ಸರಕಾರಗಳು ವಿರೋಧ ವ್ಯಕ್ತಪಡಿಸಿವೆ. ಬೆಂಗಳೂರಿನಲ್ಲಿ ವಿಪಕ್ಷಗಳ ಸಭೆ ಆಯೋಜಿಸಿದ್ದ ಕಾಂಗ್ರೆಸ್‌, ಈ ವಿಚಾರದಲ್ಲಿ ಯಾವ ನಿಲುವು ತಳೆಯುತ್ತದೆ ಎಂಬುದನ್ನು ಸ್ಪಷ್ಟಪಡಿಸಬೇಕು. ಅದರಲ್ಲೂ ಸ್ವಯಂಘೋಷಿತ ಅಹಿಂದ ನಾಯಕ ಸಿಎಂ ಸಿದ್ದರಾಮಯ್ಯವರು ಎಲ್ಲವನ್ನೂ ತಿಳಿದ ವಕೀಲರಾಗಿ ತಮ್ಮ ಬದ್ಧತೆ ತೋರಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಮಾಜಿ ಸಚಿವ ಹಾಲಪ್ಪ ಆಚಾರ್‌, ಎಸ್ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಚಲವಾದಿ ನಾರಾಯಣ ಸ್ವಾಮಿ, ಹಿರಿಯ ಮುಖಂಡ ಸಚ್ಚಿದಾನಂದ ಮೂರ್ತಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next