Advertisement

ಹೂವುಗಳ ನಡುವೆ ಆಕರ್ಷಿಸಿದ ʻಕಾಂತಾರʼದ ಪಂಜುರ್ಲಿ

11:52 AM Feb 11, 2023 | Team Udayavani |

ಚಿತ್ರದುರ್ಗ: ಅರಳಿ ನಿಂತಿರುವ ಪುಷ್ಪಗಳ ನಡುವೆ ಕಾಂತಾರಾದ ಪಂಜುರ್ಲಿ ದೈವ ಬಾಯ್ತೆರೆದು ಕುಳಿತಿರುವ ದೃಶ್ಯ ನಗರದ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ನಡೆದ ಫಲಪುಷ್ಪ ಪ್ರದರ್ಶನದಲ್ಲಿ ಗಮನ ಸೆಳೆಯುತ್ತಿದೆ. ತೋಟಗಾರಿಕೆ ಇಲಾಖೆ, ಜಿಪಂ, ಜಿಲ್ಲಾ ತೋಟಗಾರಿಕೆ ಸಂಘ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಫೆ.12ರ ವರೆಗೆ ನಡೆಯುವ 30ನೇ ಫಲ-ಪುಷ್ಪ ಪ್ರದರ್ಶನಕ್ಕೆ ಶುಕ್ರವಾರ ಸಂಜೆ ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಟಿ. ಸುರೇಶ ಚಾಲನೆ ನೀಡಿದರು.

Advertisement

ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ, ನಟ ಪುನೀತ್‌ ಹಾಗೂ ಡಾ|ರಾಜ್‌ಆನೆಯೊಂದಿಗೆ ಇರುವ ಗಂಧದ ಗುಡಿ, ಐತಿಹಾಸಿಕ ಗಾಳಿ ಗೋಪುರ, ಉಯ್ನಾಲೆ ಕಂಬ ಹೀಗೆ ಅನೇಕ ಆಕರ್ಷಕ ಕಲಾಕೃತಿಗಳು ಪ್ರದರ್ಶನದ ಆಕರ್ಷಣೆಯಾಗಿವೆ. ಹಳ್ಳಿಯ ಸೊಗಡಿನ ತರಕಾರಿ ಮನೆ ಹಾಗೂ ಮತದಾನ ಜಾಗೃತಿ, ಮಕ್ಕಳಿಗಾಗಿ ನೀತಿ ಕತೆ ಹಾಗೂ ಕಾರ್ಟೂನ್‌ ಕಲಾಕೃತಿಗಳು ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿವೆ.

ಕುಬ್ಜ ಮರಗಳು, ಆಕರ್ಷಕ ವರ್ಣಗಳಿಂದ ಕೂಡಿದ ಆರ್ಕಿಡ್ಸ್‌, ಕಾರ್ನೇಶನ್‌, ಕಾಕ್ಸ್‌ ಕೂಂಬ್‌, ಸೆಲೋಶಿಯಾ, ಪ್ಲಾಕ್ಸ್‌, ಗಾಕ್ಸೀನಿಯ, ಕಲಂಚಾ, ಲಿಲ್ಲಿಸ್‌, ಇಂಪೇನ್ಸ್‌ (ಮಿಕ್ಸಡ್‌), ಡೇಲಿಯಾ (ಡ್ವಾರ್ಫ್‌), ಸಾಲ್ವಿಯಾ (ಕೆಂಪು, ನೀಲಿ ಕೇಸರಿ, ಬಿಳಿ) ಚೆಂಡು ಹೂ, ಚಿಂತಾಮಣಿ ಚೆಂಡು ಹೂ, ಜಿನಿಯಾ, ಪೆಟೂನಿಯಾ ಮತ್ತಿತರೆ ಹೂವಿನ ರಾಶಿ ವಿಶೇಷವಾಗಿದೆ. ಇದರೊಟ್ಟಿಗೆ ರೈತರು ಬೆಳೆದ ಆಕರ್ಷಕ ಬೆಳೆಗಳು, ತರಕಾರಿ, ಹಣ್ಣು ಕಾಯಿಗಳನ್ನು ಪ್ರದರ್ಶನಕ್ಕಿಟ್ಟಿದ್ದು, ಒಂದಕ್ಕಿಂತ ಒಂದು  ಗಮನ ಸೆಳೆಯುತ್ತಿವೆ. ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಜಿ.ಸವಿತಾ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ, ಜಿಲ್ಲಾ ತೋಟಗಾರಿಕೆ ಸಂಘದ ಉಪಾಧ್ಯಕ್ಷ ಸುಜಯ್‌ ಪ್ರಕಾಶ್‌, ತೋಟಗಾರಿಕೆ ಸಹಾಯಕ ನಿರ್ದೇಶಕಿ ದೀಪಾ ಮತ್ತಿತರರಿದ್ದರು.

ಇಂದು ನಾಳೆ ವಿದ್ಯಾರ್ಥಿಗಳಿಗೆ ಸ್ಪರ್ಧೆ:
ಫಲಪುಷ್ಪ ಪ್ರದರ್ಶನದ ಅಂಗವಾಗಿ ಫೆ.11ರ ಬೆಳಗ್ಗೆ 11 ರಿಂದ 1 ಮತ್ತು 2 ತರಗತಿ ವಿದ್ಯಾರ್ಥಿಗಳಿಗೆ ಹಣ್ಣು ಮತ್ತು ತರಕಾರಿ ಗುರುತಿಸುವುದು, 12 ರಿಂದ 5 ರಿಂದ 7 ಹಾಗೂ 8 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಎರಡು ವಿಭಾಗದಲ್ಲಿ ಚಿತ್ರಕಲಾ ಸ್ಪರ್ಧೆ, 8 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನ 2 ರಿಂದ ಆಶುಭಾಷಣ ಮತ್ತು ಪ್ರಬಂಧ ಸ್ಪರ್ಧೆ, ಸಂಜೆ 6.30ಕ್ಕೆ 1 ರಿಂದ 4 ತರಗತಿ ವಿದ್ಯಾರ್ಥಿಗಳಿಗೆ ಹೂವು-ಹಣ್ಣು, ಸೊಪ್ಪು, ತರಕಾರಿಗಳನ್ನು ಬಳಸಿದ ಫ್ಯಾನ್ಸಿಡ್ರೆಸ್‌ ಸ್ಪರ್ಧೆ, ಸಂಜೆ 5 ರಿಂದ 8 ರಿಂದ 10 ತರಗತಿ ವಿದ್ಯಾರ್ಥಿಗಳಿಗೆ ವೈಯಕ್ತಿಕ ವಿಭಾಗದಲ್ಲಿ ಜನಪದ ಮತ್ತು ಭಾವಗೀತೆ ಸ್ಪರ್ಧೆಗಳು ಜರುಗಲಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next