ಬೆಂಗಳೂರು: ದೈವದ ಮಹಿಮೆ, ಕಾಡಿನ ಜನರ ಕಥಾ ಹಂದರ ಹೊಂದಿದೆ ಸೂಪರ್ ಹಿಟ್ ಚಲನ ಚಿತ್ರ ತಂಡ ಕಾಡಿನ ಜನರ ಸಮಸ್ಯೆಗಳನ್ನು ಪಟ್ಟಿ ಮಾಡಿ ಕಾಳಜಿ ತೋರಿದ್ದು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ನಟ ರಿಷಬ್ ಶೆಟ್ಟಿ ಮನವಿ ನೀಡಿದ್ದಾರೆ.
”ಕಾಂತಾರ ಚಿತ್ರದ ನಂತರದ ದಿನಗಳಲ್ಲಿ ಕಾಡು ಸುತ್ತಿ,ಅಡವಿ ಅಂಚಿನ ಜನರ ಜತೆ ಮಾತಾಡಿ, ಅರಣ್ಯ ಇಲಾಖೆ ಸಿಬಂದಿಗಳ ಜತೆ ಚರ್ಚಿಸಿ ಕಲೆಹಾಕಿದ ಅಂಶಗಳನ್ನು ಮಾನ್ಯ ಮುಖ್ಯಮಂತ್ರಿಗಳ ಮುಂದಿಟ್ಟಾಗ ಅವರು ತಕ್ಷಣವೇ ಪರಿಹರಿಸುವುದಾಗಿ ಹೇಳಿದ್ದಾರೆ. ಸಮಸ್ಯೆಗೆ ಸ್ಪಂದಿಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಯವರಿಗೆ ಧನ್ಯವಾದಗಳು” ಎಂದು ನಟ ರಿಷಬ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.
”ಕಾಂತಾರದ ನಂತರ ಒಂದಷ್ಟು ಕಾಡು ಮತ್ತು ಕಾಡಂಚಿನ ಜನರು ಮತ್ತು ಅರಣ್ಯ ಸಿಬಂದಿಗಳ ಸಮಯ ಕಳೆಯುತ್ತಾ, ಬೆರೆಯುತ್ತಾ ನಾನು ಪ್ರಯಾಣ ಮಾಡಿದ್ದೇನೆ . ಜನರು ಮತ್ತು ಅರಣ್ಯ ಸಿಬಂದಿಗಳ ಜೊತೆ ಬೆರೆತು ಕೃಷಿಕರಿಗೆ ಕಾಡಾನೆಗಳ ಹಾವಳಿ,ಕಾಡಿನಲ್ಲಿ ಈಗ ಕಾಣಿಸಿಕೊಳ್ಳುತ್ತಿರುವ ಅಗ್ನಿ, ಅರಣ್ಯ ಸಿಬಂದಿಗಳ ನೇಮಕಾತಿ ಸೇರಿ 20 ಕ್ಕೂ ಹೆಚ್ಚು ಸಮಸ್ಯೆಗಳ ಪಟ್ಟಿಯನ್ನು ಮುಖ್ಯಮಂತ್ರಿಗಳಿಗೆ ನೀಡಿದ್ದೇವೆ. ಅವರು ಧನಾತ್ಮಕವಾಗಿ ಅದ್ಭುತವಾಗಿ ಸ್ಪಂದಿಸಿದ್ದು, ಈಗಾಗಲೇ ಅವರೂ ಕಾಡಿನ ಸಮಸ್ಯೆಗಳ ಕುರಿತು, ಅರಣ್ಯ ಇಲಾಖೆಯ ಸಿಬಂದಿಗಳ ಸಮಸ್ಯೆಗಳ ಕುರಿತು ಆಲಿಸಿದ್ದಾರೆ. ಅತೀ ಶೀಘ್ರದಲ್ಲಿ ಸಮಸ್ಯೆಗಳಿಗೆ ಪರಿಹಾರ ಸಿಗುವ ರೀತಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಸಿಎಂ ತಿಳಿಸಿದ್ದಾರೆ. ಬಸವರಾಜ್ ಬೊಮ್ಮಾಯಿ ಅವರಂತಹ ಸಿಎಂ ಪಡೆದಿದ್ದಕ್ಕೆ ನಾವೆಲ್ಲ ಧನ್ಯರು. ಇಂತಹ ಚಿಕ್ಕ ಚಿಕ್ಕ ಸಮಸ್ಯೆಗಳ ಕುರಿತು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ” ಎಂದು ರಿಷಬ್ ಸಿಎಂ ಭೇಟಿ ಬಳಿಕ ವಿಡಿಯೋ ಟ್ವೀಟ್ ಮಾಡಿದ್ದಾರೆ.