Advertisement

ಕಾಂತಮಂಗಲ ರಸ್ತೆ : ಪಕ್ಷಗಳ ಮೌನ!

02:31 PM May 05, 2018 | |

ಸುಳ್ಯ : ರಾಜಕೀಯ ಸಮರಕ್ಕೆ ವೇದಿಕೆಯಾಗಿದ್ದ ಕಾಂತಮಂಗಲ- ಅಜ್ಜಾವರ ರಸ್ತೆ ಅಭಿವೃದ್ಧಿ ಬಗ್ಗೆ ಈಗ ಯಾವ ಪಕ್ಷಗಳೂ ತುಟಿ ಬಿಚ್ಚುತ್ತಿಲ್ಲ.

Advertisement

ಚುನಾವಣೆಯ ಪೂರ್ವದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಈ ರಸ್ತೆ ಅಭಿವೃದ್ಧಿ ಬಗ್ಗೆ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದವು. ಚುನಾವಣೆಗೆ ದಿನ ನಿಗದಿಯಾದ ಬಳಿಕ ಕೆಲ ದಿನ ರಸ್ತೆ ಅಭಿವೃದ್ಧಿ ವಿಚಾರ ಜೀವಂತಿಕೆ ಪಡೆದುಕೊಂಡಿತ್ತು. 25 ವರ್ಷಗಳಿಂದ ಬಿಜೆಪಿ ಬೆಂಬಲಿತ ಶಾಸಕರನ್ನು ಹೊಂದಿದ್ದರೂ ಅಭಿವೃದ್ಧಿ ಮಾಡಿಲ್ಲ ಎಂದು ಕಾಂಗ್ರೆಸ್‌ ಆರೋಪಿಸಿದರೆ, ರಾಜ್ಯದ ಕಾಂಗ್ರೆಸ್‌ ಸರಕಾರ ಅನುದಾನಕ್ಕೆ ತಡೆಯೊಡ್ಡಿತು ಎಂದು ಬಿಜೆಪಿ ಆರೋಪಿಸಿತ್ತು.

6 ಕಿ.ಮೀ. ರಸ್ತೆ
ನಗರದ ಹೊರವಲಯದಲ್ಲಿರುವ ಕಾಂತಮಂಗಲದಿಂದ ಅಜ್ಜಾವರ- ಮಂಡೆ ಕೋಲು ಸಂಪರ್ಕದ 6 ಕಿ.ಮೀ. ರಸ್ತೆಯ ಪಾಡಂತೂ ಹೇಳತೀರದು. ಕೇರಳ- ಕರ್ನಾಟಕ ಗಡಿಭಾಗ ಮಂಡೆಕೋಲು ಸಂಪರ್ಕದ ರಸ್ತೆ ಇದಾಗಿದ್ದು, ಹೊಂಡ- ಗುಂಡಿಗಳಿಂದ ತುಂಬಿ ಸಂಚಾರ ಇಲ್ಲಿನ ನಿತ್ಯದ ಬದುಕಿನ ಸರ್ಕಸ್‌ ಅನ್ನುವಂತಾಗಿದೆ. ಹಲವು ವರ್ಷಗಳಿಂದ ಈ ಭಾಗದ ಜನರು ಪಕ್ಷಭೇದ ಮರೆತು ರಸ್ತೆ ದುರಸ್ತಿ ಮಾಡಿ ಎಂದು ಬೇಡಿಕೆ ಇಡುತ್ತಿದ್ದಾರೆ. ಪ್ರತಿ ಚುನಾವಣೆಯಲ್ಲೂ ಆಶ್ವಾಸನೆ ಬಿಟ್ಟರೆ ಅದರಿಂದ ಏನೂ ಪ್ರಯೋಜನ ಕಂಡಿಲ್ಲ.

ಅನುಷ್ಠಾನಕ್ಕಿಲ್ಲ
2 ವರ್ಷಗಳ ಹಿಂದೆ ಶಾಸಕ ಎಸ್‌. ಅಂಗಾರ ಅವರು ನಮ್ಮ ಗ್ರಾಮ- ನಮ್ಮ ರಸ್ತೆ ಯೋಜನೆಯಡಿ ರಸ್ತೆ ಅಭಿವೃದ್ಧಿಗೆ 4 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದರು. ಮಂಜೂರಾತಿ ಸಿಕ್ಕಿ, ಸರ್ವೆ ಕಾರ್ಯ ಪೂರ್ಣಗೊಂಡಿತ್ತು. ರಸ್ತೆಗೆ ಸಿಆರ್‌ಎಫ್‌ (ಕೇಂದ್ರ) ನಿಧಿಯಿಂದ 6 ಕೋಟಿ ರೂ. ಮಂಜೂರಾತಿಗೊಂಡಿತ್ತು. ನಮ್ಮ ಗ್ರಾಮ- ನಮ್ಮ ರಸ್ತೆ ಯೋಜನೆಯಡಿ ಮಂಜೂರಾತಿಗೊಂಡ 4 ಕೋಟಿ ರೂ. ಅನುದಾನವನ್ನು ಬೇರೆ ರಸ್ತೆಗೆ ವರ್ಗಾಯಿಸಿ, ಸಿಆರ್‌ಎಫ್‌ ನಿಧಿಯಿಂದ ಬಿಡುಗಡೆಗೊಂಡ ಅನುದಾನ ಬಳಸಲು ನಿರ್ಧರಿಸಲಾಯಿತು.

ಹಣ ಬರಲಿಲ್ಲ
ಸಿಆರ್‌ಎಫ್‌ ಅನುದಾನದಿಂದ ರಸ್ತೆ ಅಭಿವೃದ್ಧಿಯ ನಿರೀಕ್ಷೆ ಇತ್ತಾದರೂ ಟೆಂಡರ್‌ ಆದರೂ ಆ ಹಣ ಬರಲಿಲ್ಲ. ಕೇಂದ್ರ ಸರಕಾರ ಹಣ ನೀಡಿಲ್ಲ. ಹಾಗಾಗಿ ಸಿಆರ್‌ಎಫ್‌ ಅನುದಾನದಡಿ ಕಾಮಗಾರಿ ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಹೇಳಿದ್ದರು. 

Advertisement

ರಾಜ್ಯ ಸರಕಾರ ಉದ್ದೇಶಪೂರ್ವಕವಾಗಿ ಅನುದಾನ ನೀಡದೆ ಕಾಮಗಾರಿಗೆ ತಡೆ ಒಡ್ಡಿದೆ ಎಂದು ಸಂಸದ ನಳಿನ್‌ ಕುಮಾರ್‌ ಆರೋಪಿಸಿದರು. ಈ ರಸ್ತೆ ಅಭಿವೃದ್ಧಿಗೆ ಎರಡು ಯೋಜನೆಯಡಿ ಅನುದಾನ ಬಂದಿದ್ದರೂ ಅನುಷ್ಠಾನಕ್ಕೆ ಸಿಗದೆ, ಹೊಂಡ-ಗುಂಡಿ ರಸ್ತೆಯಿಂದ ಜನರಿಗೆ ಮುಕ್ತಿ ಸಿಗಲಿಲ್ಲ.

ಪ್ರತಿಭಟನೆ ಪರ್ವ
ಎರಡು ವರ್ಷಗಳ ಹಿಂದೆ ಎಸ್ಕೆಎಸ್ಸೆಸೆಫ್ ಮಂಡೆಕೋಲಿನಿಂದ ಸುಳ್ಯದ ತನಕ ಕಾಲ್ನಡಿಗೆ ಜಾಥಾ ನಡೆಸಿ, ತಹಶೀಲ್ದಾರ್‌ಗೆ ಮನವಿ ಸಲ್ಲಿಸಿತ್ತು. ಕೆಲ ತಿಂಗಳ ಹಿಂದೆ ಅಜ್ಜಾವರ ನಾಗರಿಕ ಹಿತರಕ್ಷಣ ವೇದಿಕೆ ಮೂಲಕ ಕಾಂತಮಂಗಲ ಜಂಕ್ಷನ್‌ ಬಳಿ ಪ್ರತಿಭಟನೆ ನಡೆಯಿತು. ಅದಾದ ಬಳಿಕ ರಸ್ತೆ ಹೋರಾಟ ಸಮಿತಿ ವತಿಯಿಂದ ಸುಳ್ಯ ವಿವೇಕಾನಂದ ಸರ್ಕಲ್‌ ಬಳಿ ಪ್ರತಿಭಟನೆ ನಡೆಯಿತು. ಅಧಿಕಾರಿಗೆ ದಿಗ್ಬಂಧನ ಹಾಕಿ ರಸ್ತೆ ತಡೆ ನಡೆಯಿತು. ಎಂಜಿನಿಯರ್‌ ಅವರು ಸಿಆರ್‌ಎಫ್‌ ಅನುದಾನದ ಕುರಿತಂತೆ ನಡೆಸಿದ ದೂರವಾಣಿ ಸಂಭಾಷಣೆಗಳು ವಾಟ್ಸ್‌ ಆ್ಯಪ್‌ ಮೂಲಕ ಹರಿದಾಡಿತ್ತು. ಇದೇ ವಿಷಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಮುಖಂಡರು, ಪತ್ರಿಕಾಗೋಷ್ಠಿ ಮೂಲಕ ಸುದ್ದಿಯಾದದ್ದು ಬಿಟ್ಟರೆ, ರಸ್ತೆ ಗುಂಡಿಗೆ ತೇಪೆ ಹಾಕಲು ಇವರಿಂದ ಸಾಧ್ಯವಾಗಿಲ್ಲ ಅನ್ನುವುದು ಸ್ಥಳೀಯರ ಅಭಿಪ್ರಾಯ.

ಬಿರುಕು ಬಿಟ್ಟ ಸೇತುವೆ
ಕಾಂತಮಂಗಲ ಸೇತುವೆ ಬಿರುಕು ಬಿಟ್ಟಿದ್ದು, ನದಿ ಕೆಳಭಾಗ ಕಾಣುವ ಸ್ಥಿತಿಗೆ ತಲುಪಿದೆ. ದಿನಂಪ್ರತಿ ನೂರಾರು ವಾಹನಗಳು ಇಲ್ಲಿ ಸಂಚಾರ ಮಾಡುತ್ತಿದ್ದು, ಅಪಾಯದ ಭೀತಿ ಎದುರಾಗಿದೆ. ಸೇತುವೆಯ ಮೇಲಿನ ಡಾಮರು ಕಿತ್ತು ಹೋಗಿದ್ದು, ಶಿಥಿಲಾವಸ್ಥೆಯ ಸೇತುವೆಯಲ್ಲಿ ಜನರು ಜೀವ ಕೈಯಲ್ಲಿ ಹಿಡಿದು ಸಂಚರಿಸುತ್ತಿದ್ದಾರೆ.

ವರ್ಗಾಯಿಸಿದ್ದು ಏಕೆ?
ಅಜ್ಜಾವರ-ಮಂಡೆಕೋಲು ಭಾಗದಲ್ಲಿ ಅಧಿಕಾರದ ಎಲ್ಲ ಹಂತಗಳಲ್ಲಿಯೂ ಬಿಜೆಪಿ ಬೆಂಬಲಿತ ಜನಪ್ರತಿನಿಧಿಗಳು ಇದ್ದರೂ, ದೀರ್ಘ‌ ಕಾಲದಿಂದ ರಸ್ತೆ ನನೆಗುದಿಗೆ ಬಿದ್ದಿದೆ. 4 ಕೋಟಿ ರೂ. ಅನುದಾನ ಮಂಜೂರಾಗಿದ್ದರೂ ಶಾಸಕರು ಅದನ್ನು ಬೇರೆ ರಸ್ತೆಗೆ ವರ್ಗಾಯಿಸಿದ ಪರಿಣಾಮ ರಸ್ತೆ ದುರಸ್ತಿ ಕಂಡಿಲ್ಲ. ಸಿಆರ್‌ಎಫ್‌ ಅನುದಾನದ ಕಾಮಗಾರಿ ಆರಂಭಗೊಳ್ಳದೇ ಇರುವುದಕ್ಕೆ ಕೇಂದ್ರ ಸರಕಾರ ಹಣ ನೀಡದಿರುವುದು ಮುಖ್ಯ ಕಾರಣ ಹೊರತು ಇದನ್ನು ರಾಜ್ಯ ಸರಕಾರ ತಡೆಹಿಡಿದಿದೆ ಎಂಬುದು ಸುಳ್ಳು.
– ಜಯಪ್ರಕಾಶ್‌ ರೈ
ಅಧ್ಯಕ್ಷರು, ಬ್ಲಾಕ್‌ ಕಾಂಗ್ರೆಸ್‌, ಸುಳ್ಯ 

ಕಾಂಗ್ರೆಸ್‌ ತಡೆಹಿಡಿದಿದೆ
ಕೇಂದ್ರ ಸರಕಾರ ಸಿಆರ್‌ಎಫ್‌ ನಿಧಿಯಿಂದ 6 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿತ್ತು. ಟೆಂಡರ್‌ ಆಹ್ವಾನಿಸಿತ್ತು. ಆದರೆ ರಾಜ್ಯದ ಕಾಂಗ್ರೆಸ್‌ ಸರಕಾರ ಅದಕ್ಕೆ ತಡೆ ನೀಡಿತ್ತು. ಹಣ ಇಲ್ಲದೆ ಯಾವುದೇ ಕಾಮಗಾರಿಯ ಟೆಂಡರ್‌ ಕರೆಯುವುದಿಲ್ಲ. ಇಲ್ಲಿ ಹಣ ಇಲ್ಲ ಎಂಬ ಕಾಂಗ್ರೆಸ್‌ ಆರೋಪದಲ್ಲಿ ಸತ್ಯಾಂಶ ಇಲ್ಲ.
– ವೆಂಕಟ ವಳಲಂಬೆ
ಅಧ್ಯಕ್ಷರು, ಬಿಜೆಪಿ ಮಂಡಲ ಸಮಿತಿ

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next