ಚಾಮರಾಜನಗರ: ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳನ್ನು ದಾದಾ ಸಾಹೇಬ್ ಕಾನ್ಶಿರಾಂ ಅವರು ವಿಶ್ವಕ್ಕೆಲ್ಲ ಪ್ರಚುರಪಡಿಸಿದರು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ ಹೇಳಿದರು. ನಗರದಲ್ಲಿ ಬಹುಜನ ಸಮಾಜ ಪಕ್ಷದ ಜಿಲ್ಲಾ ಸಮಿತಿ ವತಿಯಿಂದ ನಡೆದ ದಾದಾ ಸಾಹೇಬ್ ಕಾನ್ಶಿರಾಂ 12ನೇ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶೋಷಿತರಿಗೆ ರಾಜಕೀಯ ಅರಿವು: ಕಾನ್ಶಿರಾಂ ಅವರು ಬಹುಜನ ಸಮಾಜ ಪಕ್ಷ ಸ್ಥಾಪಿಸುವ ಮೂಲಕ ದೇಶದ ಪರ್ಯಾಯ ರಾಜಕೀಯ ವ್ಯವಸ್ಥೆ ಜಾರಿಗೆ ತಂದು ಎಸ್‌ಸಿ, ಎಸ್ಟಿ, ಒಬಿಸಿ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರು, ಶೋಷಿತರಿಗೆ ರಾಜಕೀಯ ಅರಿವು ಮೂಡಿಸಿದ್ದಾರೆ. ಕೆಳವರ್ಗದವರಿಗೆ ಬಿಜೆಪಿ, ಕಾಂಗ್ರೆಸ್ ಪಕ್ಷದಲ್ಲಿ ಸಣ್ಣಪುಟ್ಟ ಸ್ಥಾನಮಾನ ಸಿಗಲು ಕಾರಣೀಭೂತರಾಗಿದ್ದಾರೆ. ಆದರಿಂದ ಬಹುಜನ ಸಮಾಜಪಕ್ಷವನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದರು.
ಬಹುಜನರ ಅಪರೂಪದ ಚಿಂತಕ: ಭಾರತದೇಶ ಸಾಮಾಜಿಕ, ರಾಜಕೀಯ ವಿಜ್ಞಾನಿ ದಾದಾ ಸಾಹೇಬ್ ಕಾನ್ಶಿರಾಂ. ಬಹುಜನರ ಅಪರೂಪದ ಚಿಂತಕ. ಕಾನ್ಶಿರಾಂ ಎಂದರೆ ತ್ಯಾಗ, ಸ್ವಾಭಿಮಾನ, ಭಾರತದ ಮೂಲ ನಿವಾಸಿಗಳಿಗೆ ರಾಜಕೀಯ ಪಕ್ಷ ತಂದು ಕೊಟ್ಟಿದ್ದಾರೆ. ವರ್ಣಭೇದ, ಭಾಷೆ, ನೆಲ ತಾರತಮ್ಯ ಕೂಡಿರುವ ದೇಶದಲ್ಲಿ ಸ್ವಾಭಿಮಾನಿ ಬದುಕನ್ನು ಹೇಳಿಕೊಟ್ಟಿದ್ದಾರೆ ಎಂದರು.
ಅಂಬೇಡ್ಕರ್ ಜಾತಿಗೆ ಸೀಮಿತರಲ್ಲ: ದೇಶದಲ್ಲಿ ಒಂದು ಜಾತಿಗೆ ಸೀಮಿತ ಮಾಡಿದ್ದ ಅಂಬೇಡ್ಕರ್‌ರವರ ಘನತೆ, ಗೌರವವನ್ನು ಎತ್ತಿ ಹಿಡಿದಿದ್ದಾರೆ. ಕಾನ್ಶಿರಾಂ ಅವರು ಇಲ್ಲದಿದ್ದರೆ. ಮನುವಾದಿಗಳು ಜಾತಿ ಸಂಕೋಲೆಯಲ್ಲಿ ಅಂಬೇಡ್ಕರ್‌ರವನ್ನು ಸಿಲುಕಿಸಿ ಬಿಡುತ್ತಿದ್ದರು. ಅವರನ್ನು ನೆನೆಪು ಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಮುಖಂಡ ಕೃಷ್ಣಯ್ಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಎಂ.ಪಂಚಾಕ್ಷರಿ, ರಾಜಶೇಖರ್, ಎನ್.ನಾಗಯ್ಯ, ತಾಪಂ ಸದಸ್ಯ ನಾಗರಾಜ್‌ಉಪ್ಪಾರ್, ವಕೀಲರಾದ ರಾಜೇಂದ್ರ, ರಮೇಶ್, ಮುಖಂಡರಾದ ಬ.ಮ.ಕೃಷ್ಣಮೂರ್ತಿ, ಬ್ಯಾಡಮೂಡ್ಲುಬಸವಣ್ಣ, ಎಸ್.ಪಿ.ಮಹೇಶ್, ರವಿ, ಮಲ್ಲರಾಜು, ಶಾಗ್ಯಮಹೇಶ್, ದೌಲತ್‌ಪಾಷ, ಸಿದ್ದರಾಜನಾಯಕ, ಸ್ವಾಮಿ ಇತರರು ಇದ್ದರು.