ಲಕ್ನೋ: ಉತ್ತರಪ್ರದೇಶದ ಕಾನ್ಪುರ್ ನ ಹಿರಿಯ ಐಎಎಸ್ ಅಧಿಕಾರಿ ಧಾರ್ಮಿಕ ಮತಾಂತರ ಉತ್ತೇಜಿಸುವ ಮತ್ತು ಹಿಂದೂ ಧರ್ಮದ ವಿರುದ್ಧ ಅಪಪ್ರಚಾರದಲ್ಲಿ ತೊಡಗಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎಂದು ವರದಿ ತಿಳಿಸಿದೆ.
ಹಿರಿಯ ಐಎಎಸ್ ಅಧಿಕಾರಿ ಮೊಹಮ್ಮದ್ ಇಫ್ತಿಖರುದ್ದೀನ್ ಹಿಂದೂ ಧರ್ಮದ ವಿರುದ್ಧದ ಅಪಪ್ರಚಾರದಲ್ಲಿ ತೊಡಗಿಕೊಂಡಿರುವುದಾಗಿ ಮಠ, ಮಂದಿರ ಸಮನ್ವಯ ಸಮಿತಿಯ ರಾಷ್ಟ್ರೀಯ ಉಪಾಧ್ಯಕ್ಷ ಭೂಪೇಶ್ ಅವಾಸ್ಥಿ ಆರೋಪಿಸಿದ್ದಾರೆ.
ಉತ್ತರಪ್ರದೇಶ ರಾಜ್ಯ ರಸ್ತೆ ಸಾರಿಗೆ ಕಾರ್ಪೋರೇಶನ್ ಅಧ್ಯಕ್ಷರಾಗಿರುವ ಮೊಹಮ್ಮದ್ ಇಫ್ತಿಖರುದ್ದೀನ್, ಕಾನ್ಪುರ್ ದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಐಎಎಸ್ ಅಧಿಕಾರಿ ಭಾಗವಹಿಸಿರುವ ವಿಡಿಯೋವನ್ನು ಅವಾಸ್ಥಿ ಬಿಡುಗಡೆಗೊಳಿಸಿದ್ದಾರೆ.
ವಿಡಿಯೋದಲ್ಲಿ, ಮೌಲಾನಾ ಧಾರ್ಮಿಕ ಪ್ರವಚನ ನೀಡುತ್ತಿದ್ದ ಸಂದರ್ಭದಲ್ಲಿ ಜನರ ಗುಂಪು ನೆಲದ ಮೇಲೆ ಕುಳಿತು ಕೇಳಿಸಿಕೊಳ್ಳುತ್ತಿದ್ದರು. ಈ ವೇಳೆ ಐಎಎಸ್ ಅಧಿಕಾರಿಯೂ ಭಾವಹಿಸಿರುವುದಾಗಿ ವರದಿ ವಿವರಿಸಿದೆ.
ಈ ಘಟನೆ ಬಗ್ಗೆ ತನಿಖೆ ನಡೆಸಲು ಉತ್ತರಪ್ರದೇಶ ಸಿಎಂ ಯೋಗಿ ನೇತೃತ್ವದ ಸರ್ಕಾರ ವಿಶೇಷ ತನಿಖಾ ತಂಡ(ಎಸ್ ಐಟಿ)ವನ್ನು ರಚಿಸಿದ್ದು, ಏಳು ದಿನಗಳೊಳಗೆ ಉತ್ತರಪ್ರದೇಶ ಸರ್ಕಾರಕ್ಕೆ ವರದಿ ಸಲ್ಲಿಸಬೇಕೆಂದು ಸೂಚಿಸಿದೆ.