ಕನೋಜ್ : ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳು ದೇಶದಲ್ಲಿ ನಿರಂತರವಾಗಿ ಸಾಗುತ್ತಿರುವಂತೆಯೇ ಇದೀಗ ತಾಜಾ ಪ್ರಕರಣವಾಗಿ, ಪತ್ನಿ ಸಂಭೋಗಕ್ಕೆ ನಿರಾಕರಿಸಿದಳೆಂಬ ಕಾರಣಕ್ಕೆ ಕ್ರುದ್ಧನಾದ ಪತಿ ಆಕೆಯ ಗುಪ್ತಾಂಗದ ಮೇಲೆ ಆ್ಯಸಿಡ್ ಸುರಿದು ಅಮಾನುಷ ದೌರ್ಜನ್ಯವನ್ನು ಮೆರೆದಿರುವುದಾಗಿ ವರದಿಯಾಗಿದೆ.
ದುರುಳ ಪತಿ ತೋರಿರುವ ಈ ಅಮಾನುಷ ಲೈಂಗಿಕ ದೌರ್ಜನ್ಯದಿಂದಾಗಿ ನತದೃಷ್ಟ ಪತ್ನಿಯ ಗುಪ್ತಾಂಗ ಗಂಭೀರ ಸುಟ್ಟುಹೋಗಿದೆ. ಈ ಮಹಿಳೆಯು ಕೋತ್ವಾಲಿ ಜಿಲ್ಲೆಯ ಬೆಹರಿನ್ ಗ್ರಾಮದವಳಾಗಿದ್ದು ಆರು ವರ್ಷದ ಹಿಂದೆ ಆತನನ್ನು ಮದುವೆಯಾಗಿ ಎರಡು ಮಕ್ಕಳನ್ನು ಪಡೆದಿದ್ದಾಳೆ. ಯಾವುದೋ ವಿಷಯಕ್ಕೆ ಸಂಬಂಧಿಸಿ ಈ ದಂಪತಿಗೆ ಜಗಳವಾಗಿತ್ತು.
ನೆರೆಕರೆಯವರ ಮೂಲಕ ಮಹಿಳೆಯ ಮೇಲೆ ನಡೆದ ದೌರ್ಜನ್ಯದ ಮಾಹಿತಿ ಪಡೆದ ಆಕೆಯ ಕುಟುಂಬ ಸದಸ್ಯರು ಕೂಡಲೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಿದ್ದಾರೆ.
ಮಹಿಳೆಯ ತಂದೆ ಕೊಟ್ಟಿರುವ ದೂರಿನ ಪ್ರಕಾರ ಪೊಲೀಸರು ಆರೋಪಿ ಮತ್ತು ಇತರ ಮೂವರ ವಿರುದ್ಧ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ಮುಖ್ಯ ಆರೋಪಿ ತಲೆಮರೆಸಿಕೊಂಡಿದ್ದು ಆತನಿಗಾಗಿ ಶೋಧ ಕಾರ್ಯ ನಡೆದಿದೆ.