ನೀರ್ಚಾಲು: ಕಾಸರಗೋಡಿನ ಕನ್ನಡಿಗರ ಸಂಸ್ಕೃತಿ ಅಪಾರವಾಗಿದ್ದು ಸುಮಾರು ಹತ್ತಕ್ಕಿಂತ ಹೆಚ್ಚು ಸಮುದಾಯಗಳಲ್ಲಿ ಬೇರೆ ಬೇರೆ ಕನ್ನಡ ಪ್ರಭೇದಗಳನ್ನು ಇಲ್ಲಿ ಕಾಣಬಹುದು ಮತ್ತು ಹಲವು ವಿಭಾಗದ ಕನ್ನಡವು ಬೇರೆ ಬೇರೆಯಿದೆ. ಇವುಗಳನ್ನು ಒಟ್ಟುಸೇರಿಸಿ ಕಾಸರಗೋಡು ಕನ್ನಡಿಗರ ಸಿರಿ ಪ್ರದರ್ಶನವಾಗಬೇಕೆಂದು ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎನ್. ಕೃಷ್ಣ ಭಟ್ ಹೇಳಿದರು.
ಅವರು ನೀರ್ಚಾಲಿನಲ್ಲಿ ಅಕ್ಟೋಬರ್ 14-15ರಂದು ನಡೆಯಲಿರುವ ಕನ್ನಡ ಸಿರಿ ಉತ್ಸವದ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದರು.
ಕಾಸರಗೋಡಿನ ಸಮೃದ್ಧ ಸಂಸ್ಕೃತಿಯಲ್ಲಿ ಜಾತಿ, ಮತ, ಭಾಷಾ ಭೇದಗಳಿಲ್ಲ. ಇಲ್ಲಿ ಎಲ್ಲರೂ ಸಮಾನರು. ಇಂತಹ ಸಂಸ್ಕೃತಿಯ ಪ್ರದರ್ಶನ ಉತ್ಸವದ ರೀತಿಯಲ್ಲಿ ಆಯೋಜಿಸ ಲ್ಪಡುತ್ತಿರುವುದು ಶ್ಲಾಘನೀಯ ಎಂದು ನ್ಯಾಯವಾದಿ ಥೋಮಸ್ ಡಿ’ ಸೋಜಾ ಅಭಿಪ್ರಾಯಪಟ್ಟರು. ಕನ್ನಡ ಸಿರಿ ಉತ್ಸವ ಸಮಿತಿಯ ಕಾರ್ಯಾಧ್ಯಕ್ಷ ಪ್ರೊ| ಶ್ರೀನಾಥ್ ಕಾಸರಗೋಡು ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ ಕಾರ್ಯಕ್ರಮದ ಉದ್ದೇಶ ಹಾಗೂ ರೂಪುರೇಷೆಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಆಹ್ವಾನಿಸಲ್ಪಟ್ಟ ಲಾಂಛನಗಳಲ್ಲಿ ಸುರೇಂದ್ರ ಆಚಾರ್ಯ ಪೆರ್ಲ ಅವರು ರಚಿಸಿದ ಲಾಂಛನವು ಆಯ್ಕೆಗೊಂಡಿದ್ದು ಕಾಸರಗೋಡಿನ ಸಿರಿ ಪ್ರದರ್ಶನದ ಪ್ರತಿಬಿಂಬವಾಗಿ ಮೂಡಿ ಬಂದಿದೆ ಎಂದು ಡಾ| ರಾಜೇಶ್ ಆಳ್ವ ಅಭಿಪ್ರಾಯಪಟ್ಟರು. ಸಮಿತಿ ಕಾರ್ಯದರ್ಶಿ ರಾಜಶ್ರೀ ರೈ ಲಾಂಛನವನ್ನು ಸ್ವೀಕರಿಸಿದರು. ರಾಮಪ್ಪ ಮಂಜೇಶ್ವರ, ಮೊಹಮ್ಮದಲಿ ಪೆರ್ಲ, ದಾಮೋದರ್, ಪ್ರದೀಪ್ ಕುಮಾರ್ ಶೆಟ್ಟಿ ಬೇಳ, ಎನ್.ಜಿ ರಾಮಕೃಷ್ಣ ಭಟ್, ಸದಾಶಿವ ಮಾಸ್ತರ್ ಪೊಯೆÂ ಮೊದಲಾದವರು ಉಪಸ್ಥಿತರಿದ್ದರು. ಶಂಕರ ಸ್ವಾಮಿಕೃಪಾ, ಸುರೇಶ್ ಕಾಳ್ಯಂಗಾಡ್, ದಿಲೀಪ್ ಕುಮಾರ್, ಜಯಾ ರಾಮಪ್ಪ, ಕೃಷ್ಣದಾಸ್, ಪುರುಷೋತ್ತಮ ಕುಲಾಲ್, ನವೀನ್ ಕುಮಾರ್ ಪುತ್ರಕಳ ಮೊದಲಾದವರು ಅಭಿಪ್ರಾಯ ಮಂಡಿಸಿದರು. ಶ್ರೀನಿವಾಸ ಆಳ್ವ ಕಳತ್ತೂರು ಸ್ವಾಗತಿಸಿದರು. ಕುಂಬಾxಜೆ ಗ್ರಾಮಪಂಚಾಯತ್ ಉಪಾಧ್ಯಕ್ಷ ಆನಂದ ಮವ್ವಾರ್ ವಂದಿಸಿದರು.
ಉತ್ಸವಗಳಿಂದ ಜನರಲ್ಲಿ ಭಾಷೆಯ ಮೇಲಿನ ಜಾಗೃತಿ ಮತ್ತು ಅಭಿಮಾನ ಹೆಚ್ಚಾಗುತ್ತದೆ. ಇಂತಹ ಕಾರ್ಯಕ್ರಮಗಳು ಕಾಸರಗೋಡಿನಲ್ಲಿ ನಿರಂತರ ನಡೆಯುವಂತಿದ್ದರೆ ಕನ್ನಡದ ಉಳಿವು ಸಾಧ್ಯ.
– ವಿ.ಬಿ. ಕುಳಮರ್ವ
ಲಾಂಛನ ಆಯ್ಕೆ
ಅಕ್ಟೋಬರ್ 14-15 ರಂದು ನೀರ್ಚಾಲಿನಲ್ಲಿ ನಡೆಯಲಿರುವ ಕನ್ನಡ ಸಿರಿ ಉತ್ಸವದ ಲಾಂಛನವನ್ನು ಕಲಾವಿದರಿಂದ ಆಹ್ವಾನಿಸಲಾಗಿತ್ತು. ಹಲವಾರು ಕಲಾವಿದರು ಲಾಂಛನಗಳನ್ನು ಕಳುಹಿ ಸಿದ್ದು ಸುರೇಂದ್ರ ಆಚಾರ್ಯ ಪೆರ್ಲ ರಚಿಸಿದ ಕಾಸರಗೋಡಿನ ನಾಡು ನುಡಿ ಸಂಸ್ಕೃತಿಯ ಪ್ರತೀಕವಾಗಿ ಮೂಡಿಬಂದ ಲಾಂಛನವು ಕಾರ್ಯಕ್ರಮದ ಲಾಂಛನವಾಗಿ ಆಯ್ಕೆಯಾಗಿದೆ. ಉತ್ತಮ ಲಾಂಛನವನ್ನು ರಚಿಸಿ ನೀಡಿದ ಸುರೇಂದ್ರ ಆಚಾರ್ಯ ಅವರಿಗೆ ಅಭಿನಂದನೆ ಸಲ್ಲಿಸುವುದರೊಂದಿಗೆ ಕಾರ್ಯಕ್ರಮದಲ್ಲಿ ಸೂಕ್ತ ಬಹುಮಾನವನ್ನು ನೀಡಿ ಗೌರವಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.