Advertisement

ಹೆದ್ದಾರಿ ಹಿಂದಿ ಹೇರಿಕೆ ವಿರುದ್ಧ ಕನ್ನಡಿಗರ ಆಂದೋಲನ

03:45 AM Jul 10, 2017 | |

ಬೆಂಗಳೂರು: “ಹಿಂದಿ ಹೇರಿಕೆ’ ಕನ್ನಡಿಗರನ್ನು ಕೆರಳಿಸುವಂತೆ ಮಾಡಿದ್ದು ಇಂದು ನಿನ್ನೆಯದಲ್ಲ. ರೈಲ್ವೆ ಇಲಾಖೆ ಕನ್ನಡ ಫ‌ಲಕ ಬಳಸದೇ ಇರುವ ಸಂದರ್ಭದಲ್ಲಿ ರಾಜ್ಯದ ಎಲ್ಲೆಡೆ ಕನ್ನಡಿಗರು ರಸ್ತೆಗಿಳಿದು ಹೋರಾಟ ನಡೆಸಿದ್ದಾರೆ. ಈಗ ಒಂದೆಡೆ ಬೆಂಗಳೂರಿನಲ್ಲಿ ಮೆಟ್ರೊ ರೈಲು ನಿಲ್ದಾಣಗಳಲ್ಲಿ ಹಿಂದಿ ಬಳಕೆ ವಿರುದ್ಧ ಪ್ರತಿಭಟನೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಕೆಲ ಕನ್ನಡಿಗ ಯುವಕರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕನ್ನಡದ ಕಹಳೆ ಮೊಳಗಿಸುವ ವಿಶಿಷ್ಟ  ಆಂದೋಲನಕ್ಕೆ ಹೊರಟಿದ್ದಾರೆ.

Advertisement

ಹೋರಾಟದ ಕೂಗು ಕೇವಲ ಘೋಷಣೆಗಳಲ್ಲಷ್ಟೇ ಆದರೆ ಪ್ರಯೋಜನವಿಲ್ಲ ಎಂದರಿತ, ಬೆಂಗಳೂರು ಸೇರಿ ರಾಜ್ಯದ ಬೇರೆ ಬೇರೆ ಭಾಗಗಳ ಯುವಕರನ್ನೊಳಗೊಂಡ ತಂಡವೊಂದು ವಿಭಿನ್ನ ಅಭಿಯಾನಕ್ಕೆ ಇಳಿದಿದೆ.”ಹಿಂದಿ, ಇಂಗ್ಲಿಷ್‌ ಇರಲಿ, ಅಭ್ಯಂತರವಿಲ್ಲ. ಆದರೆ ಮೊದಲು ಕನ್ನಡ, ಆಮೇಲೆ ಉಳಿದದ್ದು’ ಎನ್ನುವ ಸದುದ್ದೇಶದೊಂದಿಗೆ ಈಗ ಪ್ರಾಯೋಗಿಕ ಅಭಿಯಾನದೊಂದಿಗೆ ಬೀದಿಗಿಳಿದಿದೆ. ಅತ್ತ ರಾಷ್ಟ್ರೀಯ ಹೆದ್ದಾರಿಗಳ ಮೈಲಿಗಲ್ಲುಗಳಲ್ಲಿ ಹೆದ್ದಾರಿ ಪ್ರಾಧಿಕಾರ ಹಿಂದಿ, ಇಂಗ್ಲಿಷ್‌ನಲ್ಲಿ ಊರ ಹೆಸರು ಬರೆಯುತ್ತಾ ಹೋದರೆ, ಈ ತಂಡದ ಸದಸ್ಯರು ಬಣ್ಣ, ಕುಂಚ ಕೈಗೆತ್ತಿಕೊಂಡು ಕನ್ನಡದಲ್ಲಿ ಊರ ಹೆಸರು ಬರೆಯುತ್ತಾ ಹೋಗುತ್ತಾರೆ. ಹಾಗೆಂದು ಇಂಗ್ಲಿಷ್‌, ಹಿಂದಿಯನ್ನು ಅಳಿಸುವುದಿಲ್ಲ. ಅದರ ಮೇಲ್ಭಾಗದಲ್ಲಿ ಕನ್ನಡ ಬರೆದು, “ಕನ್ನಡ ಮೊದಲು’ ಎಂದು ಸಾರುತ್ತಾರೆ. 

ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಬೆಂಗಳೂರು-ಬಿಡದಿ-ರಾಮನಗರ, ಚೆನ್ನಪಟ್ಟಣ, ಮದ್ದೂರು, ಮಂಡ್ಯ ಮೂಲಕ ಕನಕಪುರ ಮಾರ್ಗವಾಗಿ ಬೆಂಗಳೂರು ಸೇರುವ ಹೆದ್ದಾರಿಯಲ್ಲಿ ಹೆಚ್ಚಾಕಡಿಮೆ 30ಕ್ಕೂ ಹೆಚ್ಚು ಮೈಲುಗಲ್ಲುಗಳ ಮೇಲೆ ಕನ್ನಡದಲ್ಲಿ ಹೆಸರು ಬರೆದುಕೊಂಡು ಬಂದಿದೆ ಈ ತಂಡ.

ಮಂಡ್ಯದ ಕಡಿಲುಬಾಗಿಲು ಮೂಲದ ರುಚಿತ್‌ ಕುಮಾರ್‌ ಹಾಗೂ ಅವರ ಸ್ನೇಹಿತರಾದ ಪವನ್‌ ಹಿರಿಯಣ್ಣ ಹೆಗಡೆ, ಮಾದೇಶ್‌ ಗೌಡ, ಹರೀಶ್‌ ಗೌಡ, ಪ್ರದೀಪ್‌ ಹಾಗೂ ನಿತೀಶ್‌ ಗೌಡ ತಂಡದ ಪ್ರಮುಖರಾಗಿ ಇಂಥ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.

ಮೈಲುಗಲ್ಲುಗಳ ಮೇಲೆ ಕನ್ನಡದಲ್ಲಿ ನಾವೇ ಹೆಸರು ಬರೆದುಕೊಂಡು ಹೋಗುವ ಮೂಲಕ ಜಾಗೃತಿ ಮೂಡಿಸೋಣ ಎನ್ನುವುದು ಮನಸ್ಸಿಗೆ ಬಂದಿದ್ದೇ ಹಿಂದಿ ಕಡ್ಡಾಯ ಎಂದು ಪ್ರಕಟಿಸಿದಾಗ ಎನ್ನುತ್ತಾರೆ ತಂಡದ ಸದಸ್ಯ ರುಚಿತ್‌ ಕುಮಾರ್‌. ಈಗಾಗಲೇ ರಾಷ್ಟ್ರೀಯ ಹೆದ್ದಾರಿ 275ರ ಮೈಲಿಗಲ್ಲುಗಳ ಮೇಲೆ ಹಿಂದಿ, ಇಂಗ್ಲಿಷ್‌ ಜತೆಗೆ ಕನ್ನಡದಲ್ಲಿ ಊರ ಹೆಸರು ಬರೆದಿದ್ದೇವೆ. ಅಷ್ಟಕ್ಕೂ, ಕನ್ನಡಿಗರು ಹೆಚ್ಚೆಚ್ಚು ಪ್ರಯಾಣಿಸುವ ಹೆದ್ದಾರಿಯಲ್ಲಿ ಕನ್ನಡವೇ ಇಲ್ಲದಿದ್ದರೆ ಹೇಗೆ? ಇಂಗ್ಲಿಷ್‌, ಹಿಂದಿಯಲ್ಲಷ್ಟೇ ಇದ್ದರೆ ಅದು ಕನ್ನಡಿಗರಿಗೆ ನೆರವಾಗುತ್ತದೆಯೇ? ಇಲ್ಲ, ಹಾಗಾಗಿ ಕನ್ನಡ ನಮಗೆ ಬೇಕೇಬೇಕು ಎನ್ನುವ ಕಾರಣಕ್ಕಾಗಿ ಈ ಕೆಲಸ ಮಾಡಿದ್ದೇವೆ. ನಮ್ಮ ಈ ಎಲ್ಲಾ ಚಟುವಟಿಕೆಗೂ ನಾವು ದುಡಿದಿರುವ ಸಂಬಳದಲ್ಲೇ ಕ್ರೋಡೀಕರಿಸಿಕೊಂಡು ಮಾಡುತ್ತಿದ್ದೇವೆ ಎನ್ನುತ್ತಾರೆ.

Advertisement

ಕಾನೂನು ಅಡ್ಡಿಯಾಗುವ ಪ್ರಶ್ನೆಯೇ ಇಲ್ಲ
ನಾವೇನು ಅಪರಾಧ ಮಾಡುತ್ತಿಲ್ಲವಲ್ಲ ಎಂದು ಹೇಳುವ ರುಚಿತ್‌ ಕುಮಾರ್‌, ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಪ್ರಾಶಸ್ತ್ಯ ನೀಡುವುದೂ ಕಾನೂನಿನಲ್ಲಿ ಇರಬೇಕಲ್ಲವೇ? ಅಷ್ಟಕ್ಕೂ ಇಂಗ್ಲಿಷ್‌, ಹಿಂದಿಯನ್ನೇ ಬಳಸಬೇಕೆಂದು ಎಲ್ಲಿದೆ? ಹಿಂದಿ ರಾಷ್ಟ್ರೀಯ ಭಾಷೆ ಎಂದು ಕಲ್ಪಿಸಿಕೊಂಡು ಹೇರಿಕೆಗೆ ಮುಂದಾದರೆ ಕನ್ನಡಿಗರು ಅದನ್ನು ಒಪ್ಪಿಕೊಳ್ಳಬೇಕಾ? ಸಾಂವಿಧಾನಿಕವಾಗಿ ರಾಷ್ಟ್ರೀಯ ಭಾಷೆ ಹಿಂದಿ ಎಂದು ಎಲ್ಲಾದರೂ ಘೋಷಣೆ ಆಗಿರುವ ಬಗ್ಗೆ ನಮಗಂತೂ ಮಾಹಿತಿ ಇಲ್ಲ. ಹೀಗಾಗಿ ನಾವು ಕನ್ನಡಿಗರು, ನಮಗೆ ಕನ್ನಡದಲ್ಲೂ ಊರ ಹೆಸರು ಇರಬೇಕು ಅನ್ನೋದಷ್ಟೇ ನಮ್ಮ ವಾದ. ನಾವೇನು ಭಾಷಾ ತಾರತಮ್ಯ ಮಾಡಿಲ್ಲ. 

ಸರ್ಕಾರವೇ ಅದನ್ನ ಮಾಡುತ್ತಿರುವುದು. ರಾಜ್ಯ ಸರ್ಕಾರವೇ ಈ ಕೆಲಸ ಮಾಡಿದರೆ ನಮಗೆ ಇನ್ನೂ ಖುಷಿ ಇದೆ. ನಾವೂ ಜತೆಗೂಡುತ್ತೇವೆ.

ಭಾಷಾ ಬಳಕೆಯನ್ನು ಪ್ರತಿಷ್ಠೆಯಾಗಿ ಯಾರೂ ತೆಗೆದುಕೊಳ್ಳದೇ, ಅಭಿಮಾನದಿಂದ ಕಾಣಬೇಕು, ಬಳಸಬೇಕು. ಜತೆಗೆ ಬ್ಯಾಂಕ್‌ಗಳು, ರಾಜ್ಯದಲ್ಲಿರುವ ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಉತ್ತರ ಭಾರತದವರೇ ಹೆಚ್ಚಿದ್ದು, ಅವರೂ ಕನ್ನಡ ಕಲಿತುಕೊಳ್ಳಬೇಕು. ಕನ್ನಡ ಬಳಕೆಗೆ ಮುಂದಾಗಬೇಕು. ಆಗ ಕನ್ನಡ ಅನುಷ್ಠಾನ ಸಾಧ್ಯ.
– ರುಚಿತ್‌ ಕುಮಾರ್‌, ಕನ್ನಡ ಅಭಿಮಾನಿ

– ಜಿಎಸ್‌ಬಿ ಅಗ್ನಿಹೋತ್ರಿ

Advertisement

Udayavani is now on Telegram. Click here to join our channel and stay updated with the latest news.

Next