Advertisement

Mangaluru: ರಾಷ್ಟ್ರೀಯ ಕ್ರೀಡೆಗೆ ಕ್ರೀಡಾಂಗಣವೇ ಇಲ್ಲ

04:51 PM Sep 24, 2024 | Team Udayavani |

ಮಹಾನಗರ: ನಗರದಲ್ಲಿ ಹಾಕಿ ಆಟಕ್ಕೆ ಪ್ರತ್ಯೇಕ ಕ್ರೀಡಾಂಗಣ ನಿರ್ಮಾಣ ಮಾಡಬೇಕು ಎನ್ನುವ ಹಾಕಿ ಕ್ರೀಡಾಪಟುಗಳ ಬೇಡಿಕೆ ಇನ್ನೂ ಈಡೇರಿಲ್ಲ. ನಗರದಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಹಾಕಿಯತ್ತ ಆಸಕ್ತಿ ಹೊಂದಿದ್ದರೂ ಸೂಕ್ತ ಕ್ರೀಡಾಂಗಣ ಇಲ್ಲದೆ ಆಟದಿಂದಲೇ ವಿಮುಖವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಸ್ಟೇಟ್‌ಬ್ಯಾಂಕ್‌ ಬಳಿಯಲ್ಲಿ ದಶಕಗಳ ಹಿಂದೆ ಇದ್ದ ಹಾಕಿ ಕ್ರೀಡಾಂಗಣ ಬಸ್‌ ನಿಲ್ದಾಣವಾಗಿ ಬದಲಾದ ಬಳಿಕ ಹಾಕಿಗೆ ಸೂಕ್ತ ಕ್ರೀಡಾಂಗಣವೇ ಇಲ್ಲದಂತಾಗಿದೆ. ಶಾಲಾ ಶಿಕ್ಷಣ, ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಆಯೋಜಿಸುವಂತಹ ಹಾಕಿ ಕ್ರೀಡಾ ಕೂಟಗಳು ಶಾಲಾ ಮೈದಾನ ಗಳಲ್ಲಿ ನಡೆ ಯುತ್ತಿದ್ದು, ಕಲ್ಲು ಮಣ್ಣಿನ ಮೈದಾನದಲ್ಲಿ ಆಡುವಾಗ ಬಿದ್ದು ಗಾಯಗೊಳ್ಳುವ ಸಾಧ್ಯತೆಯೇ ಅಧಿಕವಾಗಿದೆ. ರಾಷ್ಟ್ರೀಯ ಕ್ರೀಡೆಯಾದರೂ, ಸೂಕ್ತ ಮೈದಾನ ಕೊರತೆಯಿಂದ ಜಿಲ್ಲೆಯಲ್ಲಿ ಹಾಕಿ ಜನಪ್ರಿಯತೆ ಕಳೆದುಕೊಳ್ಳುತ್ತಿದೆ.

ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಟರ್ಫ್‌ ಕ್ರೀಡಾಂಗಣ ವನ್ನು ಹೊಂದಿದೆಯಾದರೂ ಅದರ ಬಾಡಿಗೆಯೂ ಹೆಚ್ಚಿದೆ. ಹಾಕಿ ಅಸೋಸಿಯೇಶನ್‌ಗೆ ದುಬಾರಿ ಬಾಡಿಗೆ ತೆತ್ತು ವಿದ್ಯಾರ್ಥಿಗಳಿಗೆ ತರಬೇತಿ ನೀಡಲು, ಪಂದ್ಯಾವಳಿಗಳನ್ನು ಆಯೋಜಿಸಲು ಸಾಧ್ಯ ವಾಗುತ್ತಿಲ್ಲ. ಈ ಹಿಂದೆ ಮಂಗಳೂರಿನ ಕರಾವಳಿ ಉತ್ಸವ ಮೈದಾನದ ಒಂದುಭಾಗ ದಲ್ಲಿ ಹಾಕಿ ತರಬೇತಿ ನೀಡಲಾಗುತ್ತಿತ್ತು.

ಹಾಕಿ ಕ್ರೀಡಾಂಗಣಕ್ಕೆ ನೀಡಿದ ಭೂಮಿ ಈಗ ಸರ್ವಿಸ್‌ ಬಸ್‌ ನಿಲ್ದಾಣ
ಕೆಲವು ದಶಕಗಳ ಹಿಂದೆ ನಗರದ ದಾನಿ ಯೊಬ್ಬರು ಹಾಕಿ ಕ್ರೀಡಾಂಗಣಕ್ಕೆಂದು ನೀಡಿದ ಭೂಮಿ ಈಗ ಸರ್ವಿಸ್‌ ಬಸ್‌ ನಿಲ್ದಾಣ ವಾಗಿ ಪರಿವರ್ತನೆಯಾಗಿದ್ದು, ಹಾಕಿಗಾಗಿ ಪ್ರತ್ಯೇಕ ಜಮೀನು ಹುಡುಕುವ ಪರಿಸ್ಥಿತಿ ಬಂದಿದೆ. ಪ್ರಸ್ತುತ ನಗರದಲ್ಲಿ ವ್ಯಾಪ್ತಿಯಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಬೇಕಾದ ಜಮೀನಿನ ಕೊರತೆ ಇದೆ. ಆದ್ದರಿಂದ ಹೊರ ವಲಯದಲ್ಲಿ ಹುಡುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಕೊಣಾಜೆ ಬಳಿ ಜಮೀನು ಲಭ್ಯವಾಗಿತ್ತಾದರೂ ಅದು ಅಂತಿಮವಾಗಿಲ್ಲ.

ಕೋಚ್‌ ಕೂಡ ವರ್ಗ
ಜಿಲ್ಲೆಯ ಕ್ರೀಡಾ ಇಲಾಖೆಯಲ್ಲಿ ಈ ಮೊದಲು ಇದ್ದ ಕೋಚ್‌ ಮಡಿಕೇರಿಗೆ ವರ್ಗಾವಣೆಯಾಗಿ ಹೋಗಿದ್ದಾರೆೆ. ಕೋಚ್‌ ಇದ್ದಾಗ ಶಾಲಾ ಮಕ್ಕಳಿಗೆ ಶಾಲೆಗಳಿಗೆ ತೆರಳಿ ತರಬೇತಿ ನೀಡುತ್ತಿದ್ದರು. ಶಿಕ್ಷಣ ಇಲಾಖೆಯ ಹಾಕಿ ಪಂದ್ಯಾವಳಿಯಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತಿದ್ದರು.

Advertisement

ತರಬೇತಿ ಸಿಗುತ್ತಿಲ್ಲ
ನಗರದ ವಿವಿಧ ಪದವಿಪೂರ್ವ, ಪದವಿ ಕಾಲೇಜುಗಳಿಗೆ ಕೊಡಗು ಜಿಲ್ಲೆಯಿಂದ ಸಾಕಷ್ಟು ಮಂದಿ ವಿದ್ಯಾರ್ಥಿಗಳು ಬರುತ್ತಾರೆ. ಹೆಚ್ಚಿನ ವಿದ್ಯಾರ್ಥಿಗಳು ತಮ್ಮೊಂದಿಗೆ ಹಾಕಿ ಸ್ಟಿಕ್‌ಗಳನ್ನು ತರುತ್ತಾರೆ. ಕೊಡಗಿನಲ್ಲಿ ಹಾಕಿಯಲ್ಲಿ ಸಾಧನೆ ಮಾಡಿರುವ ಆವರಿಗೆ ಇಲ್ಲಿ ಬಂದ ಬಳಿಕ ಸೂಕ್ತ ತರಬೇತಿ ಕೊರತೆ ಉಂಟಾಗುತ್ತಿದೆ. ಕೆಲವು ಖಾಸಗಿ ಕಾಲೇಜುಗಳಲ್ಲಿ ಮಾತ್ರ ತರಬೇತಿ ಸಿಗುತ್ತಿದೆ. ಪ್ರತ್ಯೇಕ ಮೈದಾನವಿದ್ದರೆ ಅಂತಹ ಕ್ರೀಡಾಪಟುಗಳನ್ನು ಬಳಸಿಕೊಂಡು ರಾಜ್ಯ, ರಾಷ್ಟ್ರದ ಸ್ಪರ್ಧೆಗಳಲ್ಲಿ ಜಿಲ್ಲೆಯಿಂದ ಪ್ರತಿನಿಧಿಸಲು ನೆರವಾಗುತ್ತದೆ ಎನ್ನುತ್ತಾರೆ ಆಸೋಸಿಯೇಶನ್‌ನ ಪ್ರಮುಖರು.

ಹಾಕಿ ಕ್ರೀಡಾಂಗಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹಲವು ವರ್ಷಗಳ ಹಿಂದೆಯೇ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಹಾಕಿ ಅಸೋಸಿಯೇಶನ್‌ ಅವರು ಜಮೀನಿಗಾಗಿ ಬೇಡಿಕೆ ಸಲ್ಲಿಸಿದ್ದಾರೆ. ನಗರ ವ್ಯಾಪ್ತಿಯಲ್ಲಿ ಜಮೀನಿಗೂ ಕೊರತೆಯಿದ್ದು, ಹೊರ ವಲಯದಲ್ಲಿ ಮಾಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು.
-ಪ್ರದೀಪ್‌ ಡಿ’ಸೋಜಾ ಉಪನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ

-ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next