ಮಂಗಳೂರು: ಮಂಗಳೂರು – ಬೆಂಗಳೂರು ಹೆದ್ದಾರಿಯ ಚೆನ್ನರಾಯಪಟ್ಟಣ, ಮದ್ದೂರು ಮೊದಲಾದ ಕಡೆಗಳಲ್ಲಿ ಕಾರಿನಲ್ಲಿ ಪ್ರಯಾಣಿಸುವವರಿಗೆ ಬೈಕ್‌ನಲ್ಲಿ ಬರುವರು “ಕಾರಿನ ಚಕ್ರಕ್ಕೆ ಬೆಂಕಿ ಹತ್ತಿಕೊಂಡಿದೆ’ ಎಂದು ಸುಳ್ಳು ಹೇಳಿ ಹಗಲು ದರೋಡೆ ಮಾಡುವ ಪ್ರಕರಣಗಳು ವರದಿಯಾಗುತ್ತಿದೆ.
ಇತ್ತೀಚೆಗೆ ಮಂಗಳೂರು ಮೂಲದ ಅಶೋಕವರ್ಧನ್ ಅವರು ಪತ್ನಿಯೊಂದಿಗೆ ಬೆಂಗಳೂರಿನತ್ತ ಹೋಗುತ್ತಿದ್ದಾಗ ಚೆನ್ನರಾಯಪಟ್ಟಣದ ಬಳಿ ಹಿಂದಿನಿಂದ ಬೈಕ್‌ನಲ್ಲಿ ಬಂದ ಇಬ್ಬರು ಕಾರಿನ ಮುಂಭಾಗದ ಚಕ್ರದತ್ತ ಕೈ ತೋರಿಸಿ, ಕಾರನ್ನು ನಿಲ್ಲಿಸುವಂತೆ ಸೂಚಿಸಿದ್ದರು. ಅಶೋಕ್‌ವರ್ಧನ್ ಅದನ್ನು ನಿರ್ಲಕ್ಷಿಸಿ ವೇಗ ಹೆಚ್ಚಿಸಿ ಸಾಗಿದ್ದಾರೆ. ಮತ್ತೆ ಎಡಭಾಗದಿಂದ ಬಂದು ಏನೋ ಹೊತ್ತಿ ಹೊಗೆ ಬರುತ್ತಿರುವಂತೆ ಕೈಯಲ್ಲಿ ತೋರಿಸಿದ್ದಾರೆ.
ಕಾರನ್ನು ನಿಲ್ಲಿಸಿದಾಗ ಬೈಕ್ ಸವಾರರು ಕಾರಿನತ್ತ ಬಂದು ಚಕ್ರದಲ್ಲಿ ಹೊಗೆ ಬರುತ್ತಿದೆ ಎಂದು ಹೇಳಿದ್ದಾರೆ. ಎಂಜಿನ್ ಒಳಗೆ ಏನೋ ಆಗಿರಬೇಕು “ಬಾನೆಟ್ ಎತ್ತಿ’ ಎಂದು ಹೇಳಿದ್ದಾರೆ. ಅಶೋಕ್‌ವರ್ಧನ್ ಅವರಿಗೆ ಈ ಹಿಂದೆ ಇಂತಹುದೇ ಘಟನೆ ನಡೆದುದರ ಬಗ್ಗೆ ಅರಿವಿದ್ದ ಕಾರಣ, ಹಾಗೇನೂ ಇಲ್ಲ ಎಂದು ಹೇಳಿ ಕಾರಿನಲ್ಲಿ ಬೆಂಗಳೂರಿನತ್ತ ಹೊರಟು ದರೋಡೆಯರಿಂದ ಬಚಾವಾಗಿದ್ದಾರೆ. ಘಟನೆ ಬಗ್ಗೆ ಅಶೋಕ ವರ್ಧನ್ ತಮ್ಮ ಫೇಸ್‌ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.
ಇದೇ ರೀತಿಯ ಎರಡು ಘಟನೆಗಳು ಕರಾವಳಿಯ ಇನ್ನಿಬ್ಬರಿಗೆ ಆಗಿದೆ. ಬೈಕ್‌ನಲ್ಲಿ ಬಂದ ಸವಾರರು ಹೇಳಿದ್ದನ್ನು ನಿಜವೆಂದು ನಂಬಿ ಒಬ್ಬರು 7 ಸಾ. ರೂ. ಮತ್ತು ಇನ್ನೊಬ್ಬರು 27 ಸಾ. ರೂ. ಕಳೆದುಕೊಂಡಿದ್ದಾರೆ.
ಇಂತಹ ವಂಚಕರ ಜಾಲ ಹೆದ್ದಾರಿಯಲ್ಲಿ ಸಕ್ರಿಯವಾಗಿದ್ದು, ಹೆದ್ದಾರಿಯಲ್ಲಿ ಸಾಗುವಾಗ ಜನ ಸಂದಣಿ ಇರದ ಪ್ರದೇಶದಲ್ಲಿ ಈ ರೀತಿ ಹೇಳಿಕೊಂಡು ಬರುತ್ತಾರೆ. ಅವರನ್ನು ನಿರ್ಲಕ್ಷಿಸಿ ಬಿಡಬೇಕು. ಜನರು ಇರುವ ಕಡೆಯಲ್ಲಿ ಕಾರು ನಿಲ್ಲಿಸಿ ಪರೀಕ್ಷಿಸಿ ಮುಂದುವರಿಯಬಹುದು. ಅವರು ಹೇಳಿದಂತೆ ಕಾರಿನ ಬಾನೆಟ್ ತೆಗೆದರೆ ರಾಳ, ಕರ್ಪೂರ ಇತ್ಯಾದಿಗಳನ್ನು ಬಳಸಿ ಬಾನೆಟ್ ಒಳಗಿನಿಂದ ಬೆಂಕಿ ಬರುವಂತೆ ಮಾಡುತ್ತಾರೆ. ಇಂಜಿನ್‌ನ ಯಾವುದೋ ಭಾಗ ಸುಟ್ಟ ಹೋಗಿದೆ. ತಾನು ಮೆಕಾನಿಕ್, ತನ್ನ ಬಳಿ ಬಿಡಿ ಭಾಗ ಇದೆ ಎಂದು ಹೇಳಿ ಸಿಕ್ಕಿಸಿ ಸಾವಿರಾರು ರೂ. ವಸೂಲಿ ಮಾಡುತ್ತಾರೆ. ಇಂತಹವರ ವಿರುದ್ಧ ಎಚ್ಚರಿಕೆ ವಹಿಸಬೇಕು ಎನ್ನುತ್ತಾರೆ ಅಶೋಕ್‌ವರ್ಧನ್.