ಬದಿಯಡ್ಕ: ಕನ್ನಡದ ಬಗೆಗಿನ ಚಿಂತನೆಗಳು ವ್ಯಕ್ತಿಗತವಾಗಿ ಬೆಳೆದಾಗ ಮಾತ್ರ ಅದು ಸಾಮೂಹಿಕ ಬಲ ಪಡೆಯುತ್ತದೆ. ಕನ್ನಡವನ್ನು ಒಂದು ಭಾಷೆಯಾಗಿ ಮಾತ್ರ ಪರಿಭಾವಿಸದೆ ಸಂಸ್ಕೃತಿಯಾಗಿ ಕಂಡುಕೊಂಡಲ್ಲಿ ಜಾಗƒತಿ ಸಾಧ್ಯ.
ಜಾಗತಿಕ ಮಟ್ಟದಲ್ಲಿ ಕನ್ನಡದಷ್ಟು ಸಮೃದ್ಧ ಭಾಷೆ ಬೇರೊಂದಿಲ್ಲ. ಆದರೆ ಕನ್ನಡಿಗರಲ್ಲಿ ಬೀಡುಬಿಟ್ಟಿರುವ ಕೀಳರಿಮೆ ಇಂದು ಕಾಸರಗೋಡಿನ ಕನ್ನಡದ ಬಗೆಗಿನ ಭೀತಿಗೆ ಕಾರಣ ಎಂದು ಪತ್ರಕರ್ತ, ಯಕ್ಷಗಾನ ಕಲಾವಿದ ವೀಜಿ ಕಾಸರಗೋಡು ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಂಗಳೂರಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗು ಕಾಸರಗೋಡಿನ ಅಪೂರ್ವ ಕಲಾವಿದರು ಇವುಗಳ ಜಂಟಿ ಆಶ್ರಯದಲ್ಲಿ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೆ„ಸ್ಕೂಲಿನ ಸಭಾಂಗಣದಲ್ಲಿ ನಡೆದ ಕನ್ನಡ ಚಿಂತನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಸಮಾರಂಭದಲ್ಲಿ ‘ಗಡಿನಾಡಿನ ಕನ್ನಡಿಗರ ಸವಾಲುಗಳು’ ಎಂಬ ವಿಷಯದ ಬಗ್ಗೆ ವಿಶೇಷೋಪನ್ಯಾಸ ನೀಡಿ ಮಾತನಾಡಿದ ಲೇಖಕಿ, ಸಂಶೋಧನಾ ವಿದ್ಯಾರ್ಥಿನಿ ಸೌಮ್ಯಾ ಪ್ರಸಾದ್ ಅವರು ಜಾಗತೀಕರಣದ ಪ್ರಭಾವ ಸಾಂದರ್ಭಿಕ ಒತ್ತಡ, ಸ್ವಾರ್ಥ ಮನೋಭಾವ, ತಿಳುವಳಿಕೆಯ ಕೊರತೆ ನಮ್ಮನ್ನು ಕನ್ನಡ ಭಾಷೆಯಿಂದ ಬೇರ್ಪಡಿಸುತ್ತದೆ. ಸಾಮಾಜಿಕ, ಶೆ„ಕ್ಷಣಿಕ, ಔದ್ಯೋಗಿಕ, ಸಾಂಸ್ಕೃತಿಕ, ರಾಜಕೀಯ ಮೊದಲಾದ ವಿವಿಧ ಕ್ಷೇತ್ರಗಳಲ್ಲಿ ಕಾಸರಗೋಡಿನ ಕನ್ನಡಿಗರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಆದರೆ ಕನ್ನಡ ಭಾಷೆಯ ಮಮತೆಯಿಂದ ಇವೆಲ್ಲವನ್ನು ಬದಿಗಿರಿಸಿ ಸ್ಪಷ್ಟ ಮಾರ್ಗಸೂಚಿಯೊಂದಿಗೆ ಕನ್ನಡದ ಅಸ್ಮಿತೆಯನ್ನು ಉಳಿಸಿಕೊಳ್ಳಬೇಕಿದೆಯೆಂದು ಅವರು ತಿಳಿಸಿದರು.
ಬದಿಯಡ್ಕ ಗ್ರಾಮ ಪಂಚಾಯತ್ ಸದಸ್ಯ ಶಂಕರ್ ಡಿ. ಸಮಾರಂಭವನ್ನು ಔಪಚಾರಿಕವಾಗಿ ಉದ್ಘಾಟಿಸಿದರು.
ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು, ಹೆ„ಸ್ಕೂಲಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ ಅಧ್ಯಕ್ಷತೆ ವಹಿಸಿದ್ದರು. ರಕ್ಷಕ ಶಿಕ್ಷಕ ಸಂಘದ ಸದಸ್ಯೆ ಜಯಂತಿ, ಜಯಂತ ಪಾಟಾಳಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತೆ ಭಾರತೀ ಬಾಬು ಕಾಸರಗೋಡು, ಮುಖ್ಯೋಪಾಧ್ಯಾಯ ವೆಂಕಟರಾಜ ಸಿ.ಎಚ್, ಸುಂದರ ಬಾರಡ್ಕ ಶುಭಹಾರೈಸಿದರು. ಶಿಕ್ಷಕಿ ವಾಣಿ ಪಿ.ಎಸ್.ಸ್ವಾಗತಿಸಿದರು. ಅಪೂರ್ವ ಕಲಾವಿದರು ಸಂಸ್ಥೆಯ ಅಧ್ಯಕ್ಷ ಎಂ.ಉಮೇಶ ಸಾಲಿಯಾನ್ ವಂದಿಸಿದರು. ಜಯ ಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿದರು. ಅಪೂರ್ವ ಕಲಾವಿದರು ಸಂಸ್ಥೆಯ ಸಂಚಾಲಕ ಎಸ್.ಜಗನ್ನಾಥ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಳಿಕ ಕನ್ನೆಪ್ಪಾಡಿಯ ಬೊಳಿಕೆ ಕಲಾತಂಡದವರಿಂದ ಶಂಕರ ಸ್ವಾಮಿಕೃಪಾ ರಚಿಸಿ, ನಿರ್ದೇಶಿಸಿದ “ಮಾರಿಕ್ಕಳ’ ಕನ್ನಡ ನಾಟಕ ಪ್ರದರ್ಶನಗೊಂಡಿತು.