Advertisement

ಗೋವಾ: ನಿರಾಶ್ರಿತ ಕನ್ನಡಿಗರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಲು ಮನವಿ

04:52 PM Jan 25, 2023 | Team Udayavani |

ಪಣಜಿ: 2004 ರಿಂದ ಗೋವಾದ ವಾಸ್ಕೊ ಬೈನಾದಲ್ಲಿ ಹಂತ ಹಂತವಾಗಿ ಕನ್ನಡಿಗರ ಸಾವಿರಾರು ಮನೆಗಳನ್ನು ಗೋವಾ ಸರ್ಕಾರ ಯಾವುದೇ ಪುನರ್ವಸತಿ ಕಲ್ಪಿಸಿಕೊಡದೆಯೇ ತೆರವುಗೊಳಿಸಿದೆ. ಇದುವರೆಗೂ ಈ ನಿರಾಶ್ರಿತ ಕನ್ನಡಿಗರಿಗೆ ಗೋವಾ ಸರ್ಕಾರವಾಗಲೀ ಅಥವಾ ಕರ್ನಾಟಕ ಸರ್ಕಾರವಾಗಲೀ ಯಾವುದೇ ಪುನರ್ವಸತಿ ಕಲ್ಪಿಸಿಕೊಟ್ಟಿಲ್ಲ. ಇಷ್ಟೇ ಅಲ್ಲದೆಯೇ ಯಾವುದೇ ಪರಿಹಾರವನ್ನೂ ಸರ್ಕಾರ ನೀಡಿಲ್ಲ. ಈ ಸಾವಿರಾರು ಕುಟುಂಬಗಳು ನಿರಾಶ್ರಿತರಾಗಿಯೇ ಉಳಿದಿದ್ದಾರೆ ಇವರಿಗೆ ಕರ್ನಾಟಕ ಸರ್ಕಾರದ ಮೂಲಕ ಶಾಶ್ವತ ಪುನರ್ವಸತಿ ಕಲ್ಪಿಸಿಕೊಡಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತು ಗೋವಾ ರಾಜ್ಯಾಧ್ಯಕ್ಷ ಡಾ.ಸಿದ್ಧಣ್ಣ ಮೇಟಿ ರವರು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ ಸೋಮಶೇಖರ್ ರವರ ಬಳಿ ಮನವಿ ಮಾಡಿದರು.

Advertisement

ಗಡಿ ಕನ್ನಡ ಪ್ರದೆಶಗಳಲ್ಲಿ ವಾಸಿಸುತ್ತಿರುವ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳನ್ನು ಚರ್ಚಿಸಲು ಬುಧವಾರ ಬೆಂಗಳೂರಿನಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ ಸೋಮಶೇಖರ್ ರವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ವಿವಿಧ ರಾಜ್ಯಗಳ ಕನ್ನಡಿಗರ ಮುಖಂಡರ ಸಭೆ ನಡೆಯಿತು.

ಗೋವಾದಲ್ಲಿ ಕಳೆದ ಅನೇಕ ವರ್ಷಗಳಿಂದ ಗೋವಾದಲ್ಲಿ ಕನ್ನಡಿಗರಿಗೆ ಏಕೈಕ ವೇದಿಕೆಯಾಗಿ ಕನ್ನಡ ಭವನ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರದ ಬಳಿ ಮನವಿ ಸಲ್ಲಿಸಲಾಗುತ್ತಿದೆ. ಪ್ರಸಕ್ತ ಬಾರಿ ಕರ್ನಾಟಕ ಸರ್ಕಾರವು ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಹತ್ತು ಕೋಟಿ ನೀಡುವುದಾಗಿ ಘೋಷಿಸಿದೆ. ಆದರೆ ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರದ ವತಿಯಿಂದಲೇ ಜಾಗ ಖರೀದಿಸಬೇಕಿದೆ ಇಷ್ಟೇ ಅಲ್ಕದೆಯೇ, ಗೋವಾದಲ್ಲಿ ವ್ಯಾಸಂಗ ಮಾಡುವ ಕನ್ನಡಿಗರ ಮಕ್ಕಳಿಗೆ ಶಾಲೆಯಲ್ಲಿ ಜಾತಿ ಕಾಲಂ ಇಲ್ಲದ ಕಾರಣ ಜಾತಿ ಪ್ರಮಾಣಪತ್ರದ ತೊಂದರೆಯುಂಟಾಗುತ್ತಿದೆ. ಮುಂದೆ ಈ ವಿದ್ಯಾರ್ಥಿಗಳಿಗೆ  ಕರ್ನಾಟಕದಲ್ಲಿ ಉನ್ನತ ವ್ಯಾಸಂಗ ಮಾಡಲು ಅಥವಾ ಉದ್ಯೋಗಕ್ಕಾಗಿ ಯಾವುದೇ ಮೀಸಲಾತಿ ಲಭಿಸುವುದಿಲ್ಲ. ಇದರಿಂದಾಗಿ ಗೋವಾ ಸರ್ಕಾರಕ್ಕೆ ಕರ್ನಾಟಕ ಸರ್ಕಾರ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಡಬೇಕಿದೆ ಎಂದು ಕಸಾಪ ಗೋವಾ ರಾಜ್ಯಾಧ್ಯಕ್ಷ ಸಿದ್ಧಣ್ಣ ಮೇಟಿ ಮನವಿ ಮಾಡಿದರು.

ಹೊರ ರಾಜ್ಯ ಗೋವಾದಲ್ಲಿನ ಕನ್ನಡಿಗ ವಿದ್ಯಾರ್ಥಿಗಳು ಕರ್ನಾಟಕದಲ್ಲಿ ಐಟಿಐ ಮಾಡಬೇಕಾದರೆ ಕರ್ನಾಟಕ ಸರ್ಕಾರ ಹೊರಡಿಸಿರುವ ಆದೇಶದ ಪ್ರಕಾರ ಯಾವ ಜಿಲ್ಲೆಯಲ್ಲಿ ವ್ಯಾಸಂಗ ಮಾಡಿದ್ದಾರೋ ಅದೇ ಜಿಲ್ಲೆಯಲ್ಲಿ ಮಾತ್ರ ಐಟಿಐಗೆ ಅವಕಾಶ ನೀಡಲಾಗುತ್ತಿದದೆ. ಸಿಇಟಿ ಪರೀಕ್ಷೆ ಬರೆಯಬೇಕಾದರೆ ಆ ಮಕ್ಕಳು ಖಡ್ಡಾಯವಾಗಿ 7 ವರ್ಷ ಕರ್ನಾಟಕದಲ್ಲಿ ವ್ಯಾಸಂಗ ಮಾಡಿರಬೇಕು. ಇದರಿಂದಾಗಿ ಹೊರ ರಾಜ್ಯದ ವಿದ್ಯಾರ್ಥಿಗಳು ಕರ್ನಾಟಕದಲ್ಲಿ ಇಂಜಿನೀಯರಿಂಗ ಮಾಡುವುದರಿಂದಲೂ ವಂಚಿತರಾಗುತ್ತಿದ್ದಾರೆ. ಮತ್ತು  ಗೋವಾದಲ್ಲಿ 15 ವರ್ಷ ವಾಸ್ತವ್ಯದ ದಾಖಲಾತಿ ಹೊಂದಿದವರಿಗೆ ಮಾತ್ರ ಗೋವಾದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ವೈದ್ಯಕೀಯ ಸೇವೆ ಲಭಿಸುತ್ತಿದೆ. ಇದರಿಂದಾಗಿ ಗೋವಾಕ್ಕೆ ಕರ್ನಾಟಕದಿಂದ ಬರುವ ಕೂಲಿ ಕಾರ್ಮಿಕರು ಗೋವಾದಲ್ಲಿ ಅನಾರೋಗ್ಯಕ್ಕೆ ಒಳಗಾದಾಗ ಅಥವಾ ತುರ್ತು ಸಂದರ್ಭದಲ್ಲಿ ಈ ಬಡ ಕೂಲಿ ಕಾರ್ಮಿಕರು ಗೋವಾದ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಕೂಡ ಹೆಚ್ಚಿನ ಹಣ ಖರ್ಚು ಮಾಡಿ ವೈದ್ಯಕೀಯ ಸೇವೆ ಪಡೆಯುವಂತಾಗುತ್ತಿದೆ ಎಂದು ಸಿದ್ಧಣ್ಣ ಮೇಟಿ ನುಡಿದರು.

ಹೊರನಾಡು ಗೋವಾ ರಾಜ್ಯದ ಕನ್ನಡ ವಿದ್ಯಾರ್ಥಿಗಳಿಗೆ ಉದ್ಯೋಗದಲ್ಲಿ ಕರ್ನಾಟಕ ಸರ್ಕಾರ ಶೇ.5 ರಷ್ಟು ಮೀಸಲಾತಿಯನ್ನು ಘೋಷಿಸಬೇಕು. ಅಂದಾಗ ಮಾತ್ರ ಗೋವಾದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಉದ್ಯೋಗ ಲಭಿಸಲು ಸಾಧ್ಯವಾಗುತ್ತದೆ. ಹಾಗೂ  ಪ್ರಮುಖವಾಗಿ ಗೋವಾ ಕನ್ನಡಿಗರ ಸಮಸ್ಯೆ ಪರಿಹಾರಕ್ಕೆ ಕರ್ನಾಟಕ ಸರ್ಕಾರವು ಹೊರನಾಡ ನಿಗಮ ಮಂಡಳಿ ಸ್ಥಾಪನೆ ಮಾಡಬೇಕು. ಅಂದಾಗ ಮಾತ್ರ ಹೊರನಾಡ ಕನ್ನಡಿಗರ ಸಮಸ್ಯೆ ಶೀಘ್ರ ಪರಿಹಾರಕ್ಕೆ ಸಾಧ್ಯವಾಗುತ್ತದೆ ಎಂದು ಸಿದ್ಧಣ್ಣ ಮೇಟಿ ರವರು ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ ಸೋಮಶೇಖರ್ ರವರ ಬಳಿ ಮನವಿ ಮಾಡಿದರು.

Advertisement

ಈ ಸಂದರ್ಭದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ, ಬೆಳಗಾವಿ ಕನ್ನಡ ಸಂಘಟನೆಗಳ ಕ್ರಿಯಾ ಸಮೀತಿ ಅಧ್ಯಕ್ಷ ಅಶೋಕ ಚಂದರಗಿ, ಕನ್ನಡ ಬಹುಭಾಷಾ ಹೋರಾಟಗಾರ ಸುನೀಲ್ ಪೋತದಾರ, ಮದ್ರಾಸ ಕನ್ನಡ ವಿಭಾಗದ ಪ್ರಮುಖರಾದ ಡಾ.ತಮಿಳ್ ಸೆಲ್ವಿ, ಇಂಡೋ ಪೋರ್ಚುಗೀಸ ಸಾಹಿತ್ಯ ಪ್ರತಿಷ್ಠಾನದ ನಿರ್ದೇಶಕ ಡಾ.ಅರವಿಂದ ಯಾಳಗಿ ಸೇರಿದಂತೆ ವಿವಿಧ ರಾಜ್ಯಗಳ ಕನ್ನಡ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದು ಆಯಾ ರಾಜ್ಯದಲ್ಲಿ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಯನ್ನು ಮಂಡಿಸಿದರು.

ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ: ತೃಣಮೂಲ ಕಾಂಗ್ರೆಸ್ ನಾಯಕ ಸಾಕೇತ್ ಗೋಖಲೆ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next