ಕೋಟ: ದೀಪಾವಳಿಯ ಹಬ್ಬದಂದು ಕೃಷಿ ಪರಿಕರಗಳು, ಜಾನುವಾರು ಹಾಗೂ ಧಾನ್ಯಲಕ್ಷ್ಮೀಯ ಆರಾಧನೆ ಅತ್ಯಂತ ಪ್ರಮುಖ. ಹಿಂದೆ ಮನೆ ಮುಂಭಾಗದ ಮೇಟಿ ಕಂಬ, ಭತ್ತದ ತಿರಿಗೆ, ಮನೆಯೊಳಗೆ ರಾಶಿ ಹಾಕಲಾದ ಹತ್ತಾರು ಟನ್ ಭತ್ತದ ರಾಶಿಗೆ (ಹೊಲಿ ರಾಶಿಗೆ) ಪೂಜೆ ಸಲ್ಲಿಸಲಾಗುತ್ತಿತ್ತು. ಈಗ ರಾಶಿ ಭತ್ತದ ಬದಲು ಹರಿವಾಣದಷ್ಟು ಭತ್ತಕ್ಕೆ ಸೀಮಿತವಾಗಿದೆ. ಮೇಟಿ ಕಂಬವಂತೂ ಕಣ್ಮರೆಯೇ ಆಗಿದೆ.
ಸಾಂಪ್ರದಾಯಿಕ ಕೃಷಿ ಪದ್ಧತಿ ಜಾರಿಯಲ್ಲಿದ್ದಾಗ ಕಟಾವು ಮಾಡಿದ ಭತ್ತವನ್ನು ಮನೆಯಂಗಳಕ್ಕೆ ತಂದು ಬೇರ್ಪಡಿಸುವ ಸಂದರ್ಭ ಹಡಿಮಂಚಕ್ಕೆ ಆಧಾರವಾಗಿಸಲು ಮೇಟಿ ಕಂಬವನ್ನು ಪ್ರತಿ ಮನೆಯಂಗಳದಲ್ಲಿ ಸ್ಥಾಪಿಸಲಾಗುತ್ತಿತ್ತು. ದೀಪಾವಳಿಯಂದು ಈ ಮೇಟಿ ಕಂಬಕ್ಕೆ ರಂಗೋಲಿ ಹಾಕಿ ಪೂಜೆ ಸಲ್ಲುತ್ತಿತ್ತು.
ಸಂಜೆ ಗದ್ದೆಯಲ್ಲಿ ಬಲೀಂದ್ರ ಪೂಜೆಯನ್ನು ಮುಗಿಸಿ ಬಂದ ಬಳಿಕ ಮೇಟಿ ಪೂಜೆ. ಮೇಟಿಕಂಬಕ್ಕೆ ಕಾಲು ತಾಗಬಾರದು. ಪಾದರಕ್ಷೆ ಕಂಬದ ಹತ್ತಿರ ಇಡಬಾರದು ಎಂಬ ನಂಬಿಕೆ ಇತ್ತು. ಈಗ ಕಟಾವು ಯಂತ್ರ ನೇರವಾಗಿ ಗದ್ದೆಗೆ ಬಂದು ಕಟಾವು ಮಾಡಿ ಗದ್ದೆಯಲ್ಲೇ ಭತ್ತವನ್ನು ಚೀಲಕ್ಕೆ ತುಂಬಿ ನೇರ ಅಕ್ಕಿಗಿರಣಿಗಳಿಗೆ ಸಾಗಿಸುವುದರಿಂದ ಮನೆಯಂಗಳದಿಂದ ಮೇಟಿ ಕಂಬವೇ ಮಾಯವಾಗಿದೆ.
ಮೊದಲು ಅಂಗಳದಲ್ಲಿ ರಾಶಿ ಹಾಕಲಾದ ಟನ್‌ಗಟ್ಟಲೆ ಭತ್ತ, ಹುಲ್ಲು ಕುತ್ರಿ, ಗೊಬ್ಬರದ ರಾಶಿ, ಕೃಷಿ ಉಪಕರಣಗಳಿಗೆ ಪೂಜೆ ನಡೆಯುತ್ತಿತ್ತು. ಈಗ ಹಬ್ಬದ ದಿನ ಹರಿವಾಣದಲ್ಲಿ ಹಿಡಿಯಷ್ಟು ಭತ್ತವನ್ನು ಇಟ್ಟು ಅದನ್ನೇ ರಾಶಿ ಪೂಜೆಯಾಗಿ ಆಚರಿಸುವ ಪರಿಸ್ಥಿತಿ ಇದೆ.
ಈ ಆಚರಣೆಗಳೆಲ್ಲ ನಮ್ಮ ಜೀವನಾಡಿ ದೀಪಾವಳಿಯಲ್ಲಿ ಮೇಟಿ ಕಂಬ ಹಾಗೂ ಭತ್ತದ ರಾಶಿಗೆ ಪೂಜೆ ಸಲ್ಲಿಸಲು ಮುಖ್ಯ ಕಾರಣ ಇವೆರಡರಲ್ಲೂ ನಮ್ಮ ಹಿರಿಯರು ದೈವಿಕತೆಯನ್ನು ಕಂಡಿದ್ದಾರೆ ಹಾಗೂ ನಮ್ಮ ಹಿರಿಯರಿಗೆ ಕೃಷಿಯೇ ಸರ್ವಸ್ವವಾದ್ದರಿಂದ ಈ ಆಚರಣೆಗಳು ಜೀವನಾಡಿಯಾಗಿತ್ತು. ಆದರೆ ಹಿಂದಿನ ಆಚರಣೆಗಳೆಲ್ಲ ಈಗ ದೂರವಾಗಿದೆ.
ಮನು ಹಂದಾಡಿ, ಸಾಂಸ್ಕೃತಿಕ ಅಧ್ಯಯನಕಾರರು ರಾಜೇಶ್ ಗಾಣಿಗ ಅಚ್ಲಾಡಿ