Advertisement

“ಕನ್ನಡಿಗರಿಗೆ ಶೇ.80 ಉನ್ನತ ಹುದ್ದೆ ನೀಡಿ’

03:45 AM Jan 31, 2017 | Team Udayavani |

ಬೆಂಗಳೂರು: ಖಾಸಗಿ ವಲಯದ ಉದ್ಯಮಗಳಲ್ಲಿ ಡಿ ವರ್ಗದ ಹುದ್ದೆಗಳಿಗೆ ಶೇ.100ರಷ್ಟು ಕನ್ನಡಿಗರನ್ನೇ ನೇಮಕ ಮಾಡಬೇಕು ಎಂಬ ಬಗ್ಗೆ ಉದ್ಯಮಿಗಳ ಜತೆಗಿನ ಕರಾರುಪತ್ರದಲ್ಲೇ ಪೂರ್ವಷರತ್ತು ಹಾಕಬೇಕು. ಉನ್ನತ ಹುದ್ದೆಗಳಲ್ಲಿ ಶೇ.80ರಷ್ಟನ್ನು ಕನ್ನಡಿಗರಿಗೆ ನೀಡಬೇಕು.

Advertisement

ರಾಜ್ಯದ ತಾಂತ್ರಿಕ ಕಾಲೇಜುಗಳಲ್ಲೇ ಕ್ಯಾಂಪಸ್‌ ಆಯ್ಕೆ ನಡೆಸಬೇಕು. ಅಧಿಕಾರೇತರ ಹುದ್ದೆಗಳಲ್ಲಿ ಶೇ.80ರಷ್ಟು
ಹುದ್ದೆಗಳನ್ನು ಸ್ಥಳೀಯರಿಗೆ ಮೀಸಲಿಡಲು ಕೇಂದ್ರ ಸರ್ಕಾರ ರಾಷ್ಟ್ರೀಯ ಉದ್ಯೋಗ ನೀತಿ ರೂಪಿಸಬೇಕು…
ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಜತೆಗೆ ಕೇಂದ್ರ ಪಠ್ಯಕ್ರಮದಲ್ಲೂ ಕನ್ನಡ ಕಡ್ಡಾಯಗೊಳಿಸುವ ಮೂಲಕ ಎಲ್ಲರಿಗೂ ಕನ್ನಡ ಭಾಷಾಜ್ಞಾನ ಮೂಡಿಸುವ ಹಲವು ಪ್ರಮುಖ ಶಿಫಾರಸುಗಳನ್ನೊಳಗೊಂಡ ಸರೋಜಿನಿ ಮಹಿಷಿ ವರದಿಯ ಪರಿಷ್ಕೃತ ವರದಿಯ ಮುಖ್ಯಾಂಶಗಳಿವು.

ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ಡಾ.ಸರೋಜಿನಿ ಮಹಿಷಿ ವರದಿಯನ್ನು ಈಗಿನ ಕಾಲಘಟ್ಟಕ್ಕೆ ತಕ್ಕಂತೆ ಮಾರ್ಪಡಿಸುವುದರೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡಬೇಕಾದ ಕೆಲಸಗಳೇನು ಎಂಬುದನ್ನು ವಿಂಗಡಿಸಿ ಸಿದ್ಧಪಡಿಸಿರುವ ಸರೋಜಿನಿ ಮಹಿಷಿ ವರದಿ ಪರಿಷ್ಕರಣೆ ಕಾರ್ಯ ಪೂರ್ಣಗೊಂಡಿದ್ದು, ಪರಿಷ್ಕೃತ ವರದಿಯನ್ನು ಫೆ.1ರಂದು ಸರ್ಕಾರಕ್ಕೆ ಸಲ್ಲಿಸಲಾಗುತ್ತಿದೆ.

ಈ ಪರಿಷ್ಕೃತ ವರದಿಯ ವಿಶೇಷವೆಂದರೆ, ಅದರಲ್ಲಿ ಕನ್ನಡಿಗರಿಗೆ ಉದ್ಯೋಗ ಕಲ್ಪಿಸಲು ರಾಜ್ಯ ಸರ್ಕಾರವೇ ನೇರವಾಗಿ ಅನುಷ್ಠಾನಗೊಳಿಸಬೇಕಾದ ಅಂಶಗಳು, ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಬೇಕಾದ ಅಂಶ ಗಳು, ಸರೋಜಿನಿ ಮಹಿಷಿ ವರದಿಯ ಈಗಾಗಲೇ ಅನುಷ್ಠಾನವಾಗಿರುವ ಸಲಹೆಗಳು, ಇಂದಿನ ಕಾಲ ಮಾನಕ್ಕೆ ತಕ್ಕಂತೆ ಬದಲಿಸಬೇಕಾಗಿರುವ ಅಂಶಗಳು ಹಾಗೂ ಮೂಲ ವರದಿಯಲ್ಲಿದ್ದವುಗಳ ಪೈಕಿ ಕೈ ಬಿಡಬಹುದಾದ ಅಂಶಗಳು
ಎಂಬ 5 ಅಂಶಗಳನ್ನು ಪ್ರತ್ಯೇಕವಾಗಿ ಪ್ರಸ್ತಾಪಿಸಲಾಗಿದ್ದು, ಅದಕ್ಕೆ ಕಾರಣಗಳನ್ನೂ ನೀಡಲಾಗಿದೆ. ರಾಜ್ಯ ಸರ್ಕಾರಕ್ಕೆ
ಸಂಬಂಧಿಸಿದಂತೆ 14 ಮತ್ತು ಕೇಂದ್ರ ಸರ್ಕಾರಕ್ಕೆ ಏಳು ಅಂಶಗಳನ್ನೊಳಗೊಂಡ ಶಿಫಾರಸುಗಳನ್ನು ಮಾಡಲಾಗಿದೆ.

ಜತೆಗೆ, ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ಕುರಿತಂತೆ ಸಂಬಂಧಿಸಿದ ಇಲಾಖೆಗಳು ಯಾವ ರೀತಿ ಕ್ರಮ ಕೈಗೊಳ್ಳ
ಬೇಕು ಎಂಬುದನ್ನೂ ತಿಳಿಸಲಾಗಿದೆ. ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುವ ಹೊಣೆ ಹೊತ್ತಿರುವ ಅಧಿಕಾರಿಗಳು
ವಿಫ‌ಲವಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವ ಮತ್ತು ವರದಿ ಅನುಷ್ಠಾನ ಪರಿಶೀಲಿಸುವ ಜವಾಬ್ದಾರಿಯನ್ನು
ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡಲಾಗಿದೆ.

Advertisement

ಕನ್ನಡ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ.ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸದಸ್ಯರಾದ ಗೊ.ರು.ಚನ್ನಬಸಪ್ಪ,
ಡಾ.ಬಿ.ಎಲ್‌.ಶಂಕರ್‌, ಹೇಮಲತಾ ಮಹಿಷಿ, ರಾ.ನಂ. ಚಂದ್ರಶೇಖರ ಹಾಗೂ ಸದಸ್ಯ ಕಾರ್ಯದರ್ಶಿ ಡಾ. ಕೆ. ಮುರಳೀಧರ್‌ ಅವರನ್ನೊಳಗೊಂಡ ಸಮಿತಿ, ಸರೋಜಿನಿ ಮಹಿಷಿ ವರದಿ ಪುನರ್‌ ಪರಿಶೀಲಿಸಿ ವರದಿ ಸಿದ್ಧಪಡಿಸಿದೆ. ಫೆ.1ರಂದು ಬೆಳಗ್ಗೆ 10 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಿದೆ.

ವರದಿಯ ಪ್ರಮುಖಾಂಶಗಳು
-„ ರಾಜ್ಯದಲ್ಲಿರುವ ಎಲ್ಲಾ ಬ್ಯಾಂಕ್‌ಗಳು ಗುಮಾಸ್ತರ ಹುದ್ದೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವ ಸಂದರ್ಭದಲ್ಲಿ ಕನ್ನಡ ಭಾಷಾಜ್ಞಾನ ಕಡ್ಡಾಯಗೊಳಿಸಬೇಕು. 10ನೇ ತರಗತಿಯಲ್ಲಿ ರಾಜ್ಯಭಾಷೆಯನ್ನು ಒಂದು ಭಾಷೆಯನ್ನಾಗಿ ಅಧ್ಯಯನ ಮಾಡಿರಬೇಕು ಇಲ್ಲವೇ ಕಡ್ಡಾಯವಾಗಿ ರಾಜ್ಯಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು.

-„ ರಾಜ್ಯದ ಸರ್ಕಾರಿ ವಲಯದ ಉದ್ಯಮಗಳಲ್ಲಿ ಎಲ್ಲಾ ಹುದ್ದೆಗಳಿಗೆ ಕನ್ನಡಿಗರನ್ನೇ ಆಯ್ಕೆ ಮಾಡಬೇಕು. ಹೊರ
ರಾಜ್ಯದವರ ನೇಮಕ ಅನಿವಾರ್ಯತೆ ಎದುರಾದರೆ ಸರ್ಕಾರದ ಪೂರ್ವಾನುಮತಿ ಪಡೆಯಬೇಕು.

-„ ರಾಜ್ಯ ಮತ್ತು ಕೇಂದ್ರ ಸರ್ಕಾರಿ ಉದ್ಯಮ ಹಾಗೂ ಇಲಾಖೆಗಳಲ್ಲಿ ದಿನಗೂಲಿ ಕೆಲಸಗಳಿಗೆ ಗುತ್ತಿಗೆ ಆಧಾರದ
ಮೇಲೆ ನೇಮಕಗೊಳ್ಳುವ ನೌಕರರು ಕಡ್ಡಾಯವಾಗಿ ಕನ್ನಡಿಗರಾಗಿರಬೇಕು. ಈ ಬಗ್ಗೆ ಹೊರಗುತ್ತಿಗೆ ಸಂಸ್ಥೆಗಳಿಗೂ ಈ ಷರತ್ತು ವಿಧಿಸಬೇಕು.

-„ ರಾಜ್ಯದಲ್ಲಿರುವ ಯಾವುದೇ ಉದ್ಯಮ, ಸಂಸ್ಥೆಗಳಲ್ಲಿ 100ಕ್ಕಿಂತ ಹೆಚ್ಚು ನೌಕರರಿದ್ದರೆ ಆ ಸಂಸ್ಥೆಯ ನೇಮಕಾತಿ
ಸಮಿತಿಯಲ್ಲಿ ರಾಜ್ಯ ಸರ್ಕಾರದ ಕನ್ನಡ ಪ್ರತಿನಿಧಿ ಕಡ್ಡಾಯವಾಗಿರಬೇಕು.

-„ ಕೇಂದ್ರ ಸರ್ಕಾರ ಪ್ರಕಟಿಸುವ ಎಂಪ್ಲಾಯ್‌ಮೆಂಟ್‌ ನ್ಯೂಸ್‌ ಮಾದರಿಯಲ್ಲಿ ರಾಜ್ಯ ಸರ್ಕಾರವೂ ಉದ್ಯೋಗ ವಾರ್ತಾ ಪತ್ರಿಕೆ ಪ್ರಕಟಿಸಬೇಕು. ಜತೆಗೆ ಉದ್ಯೋಗ ಮಾಹಿತಿ ನೀಡಲು ಪ್ರತ್ಯೇಕ ಜಾಲತಾಣ ರಚಿಸಬೇಕು.

-„ ಸ್ಥಳೀಯರು ಎಂಬುದನ್ನು ಪರಿಗಣಿಸಲು ರಾಜ್ಯದಲ್ಲಿ 15 ವರ್ಷಗಳ ಕಾಲ ವಾಸವಾಗಿರಬೇಕು ಎಂಬ ನಿಯಮದ
ಜತೆಗೆ ಕನ್ನಡ ಭಾಷಾ ಜ್ಞಾನವೂ ಇರಬೇಕು ಎಂಬುದನ್ನು ಸೇರಿಸಬೇಕು. ಇದನ್ನು ಸಾಬೀತುಪಡಿಸಲು ಶಾಲಾ
ಸರ್ಟಿμಕೆಟ್‌, ಪಡಿತರ ಚೀಟಿ, ಜನ್ಮದಾಖಲೆ, ಆಧಾರ್‌ ಕಾರ್ಡ್‌ ಪೈಕಿ ಯಾವುದಾದರೂ ಒಂದು ದಾಖಲೆ ಹೊಂದಿರಬೇಕು.

– ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಸಿ ಮತ್ತು ಡಿ ವರ್ಗದ ಹುದ್ದೆಗಳನ್ನು ಕಡ್ಡಾಯವಾಗಿ ಸ್ಥಳೀಯರಿಗೆ
ನೀಡಲು ಕೇಂದ್ರ ಸರ್ಕಾರ ಕಾನೂನು ರೂಪಿಸಬೇಕು. ಸ್ಟಾಫ್ ಸೆಲೆಕ್ಷನ್‌ ಕಮಿಷನ್‌ ನಡೆಸುವ ಪರಿಕ್ಷೆಗಳು ಕನ್ನಡದಲ್ಲೂ ಇರುವುದನ್ನು ಕಡ್ಡಾಯಗೊಳಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next