ಬಹ್ರೈನ್:”ಕನ್ನಡ ಸಂಘ ಕೇವಲ ಕನ್ನಡಿಗರ ಸಂಘಟನೆಯಲ್ಲ ಇದು ಕನ್ನಡ ಕಲೆ, ಸಂಸ್ಕೃತಿ, ಭಾಷೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವಂತಹ ಒಂದು ಪರಿಣಾಮಕಾರಿಯಾದ ಮಾಧ್ಯಮ. ಇಲ್ಲಿರುವ ನಮ್ಮ ಸಂಸ್ಕೃತಿಯ ಅಧ್ಯಯನ ಕೇಂದ್ರಗಳು ನಿಜವಾಗಿಯೂ ಕನ್ನಡ ಭಾಷೆ, ಕಲೆ, ಸಂಸ್ಕೃತಿಯ ಮೇಲೆ ಬಹ್ರೈನ್ ಕನ್ನಡಿಗರಿಗಿರುವ ಅನನ್ಯ ಪ್ರೀತಿಗೆ ಸಾಕ್ಷಿಯಾಗಿದೆ’ ಎಂದು ಕರ್ನಾಟಕ ವಿಧಾನಸಭಾ ಅಧ್ಯಕ್ಷ ಯು .ಟಿ .ಖಾದರ್‌ರವರು ಹೇಳಿದರು.
ಸಭಾಧ್ಯಕ್ಷರು ಬಹ್ರೈನ್‌ಗೆ ಭೇಟಿ ನೀಡಿದ್ದ ವೇಳೆ ಕನ್ನಡ ಸಂಘದಿಂದ ಇಲ್ಲಿನ ಕನ್ನಡ ಭವನದಲ್ಲಿ ಆಯೋಜಿಸಲಾಗಿದ್ದ ಸಮ್ಮಾನ ಸಮಾರಂಭದಲ್ಲಿ ಅವರು ಸಮ್ಮಾನವನ್ನು ಸ್ವೀಕರಿಸಿ ಮಾತನಾಡಿದರು. ಸಭಾಧ್ಯಕ್ಷರು ಹೊಸದಾಗಿ ನಿರ್ಮಾಣವಾಗಿರುವ ಕನ್ನಡ ಭವನದಲ್ಲಿ ಕನ್ನಡಿಗರಿಗಾಗಿ ಕಲ್ಪಿಸಿರುವ ವಿವಿಧ ಅಧ್ಯಯನ ಕೇಂದ್ರಗಳು, ಕನ್ನಡ ತರಗತಿ ಮುಂತಾದವುಗಳನ್ನು ನೋಡಿ ಕನ್ನಡ ಸಂಘದ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾ ಸಿದರು.
ಕರ್ನಾಟಕ ವಿಧಾನ ಸಭಾಧ್ಯಕ್ಷರಾಗಿರುವ ಯು.ಟಿ. ಖಾದರ್ ಇವರನ್ನು ಸಂಘದ ಅಧ್ಯಕ್ಷರಾದ ಅಮರನಾಥ್ ರೈ ಹಾಗೂ ಪದಾಧಿಕಾರಿಗಳು ಅತಿಥಿ ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಿ ಗೌರವಿಸಿದರು. ಇದೇ ವೇದಿಕೆಯಲ್ಲಿ ಇಲ್ಲಿನ ಹಾಗೂ ಸೌದಿ ಅರೇಬಿಯಾದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ಮೂಲದ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಯು .ಟಿ .ಖಾದರ್ ಅವರನ್ನು ತಮ್ಮ ಪ್ರೀತಿ, ವಿಶ್ವಾಸ, ಅಭಿಮಾನದ ದ್ಯೋತಕವಾಗಿ ಶಾಲು ಹೊದಿಸಿ, ಸ್ಮರಣಿಕೆಗಳನ್ನಿತ್ತು ಸಮ್ಮಾನಿಸಿದರು.
ವೇದಿಕೆಯಲ್ಲಿ ಬಹ್ರೈನ್ ಕ್ರಿಕೆಟ್ ಫೆಡರೇಷನ್‌ನ ಸಲಹಾ ಮಂಡಳಿಯ ಅಧ್ಯಕ್ಷರಾದ ಮೊಹಮ್ಮದ್ ಮನ್ಸೂರ್, ಸೌದಿ ಅರೇಬಿಯಾದ ಜನಪ್ರಿಯ ಕನ್ನಡಿಗ ಉದ್ಯಮಿ ಎಕ್ಸ್‌ಪರ್ಟ್‌ಟೈಸ್ (expertise ) ಸಂಸ್ಥೆಯ ಉಪಾಧ್ಯಕ್ಷರಾದ ಶೇಖ್ ಕರ್ನಿರೆ, ಕನ್ನಡ ಸಂಘದ ಉಪಾಧ್ಯಕ್ಷರಾದ ಮಹೇಶ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು. ಕನ್ನಡ ಸಂಘದ ಅಧ್ಯಕ್ಷರಾದ ಅಮರನಾಥ್ ರೈ ಅವರು ಪ್ರಾಸ್ತಾವಿಕ ಭಾಷಣ ಮಾಡಿ ಸಂಘದ ಆಗುಹೋಗುಗಳ ಬಗ್ಗೆ ಬೆಳಕು ಚೆಲ್ಲಿದರು. ಬಹ್ರೈನ್ ಕ್ರಿಕೆಟ್ ಮಂಡಳಿಯ ಸಲಹಾ ಸಮಿತಿಯ ಅಧ್ಯಕ್ಷರಾಗಿರುವ ಹಿರಿಯ ಉದ್ಯಮಿ ಮೊಹಮ್ಮದ್ ಮನ್ಸೂರ್, ಸೌದಿಅರೇಬಿಯದ ಉದ್ಯಮಿ ಶೇಖ್ ಕರ್ನಿರೆ ಔಪಚಾರಿಕವಾಗಿ ಮಾತನಾಡಿ ಸಂಘದ ಚಟುವಟಿಕೆಗಳಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮವವನ್ನು ಸಂಘದ ಪ್ರಧಾನ ಕಾರ್ಯದರ್ಶಿಗಳಾದ ರಾಮಪ್ರಸಾದ್ ಅಮ್ಮೆನಡ್ಕ ಅವರು ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.
ವರದಿ: ಕಮಲಾಕ್ಷ ಅಮೀನ್