ಬಹ್ರೈನ್:ಇಲ್ಲಿನ ಕನ್ನಡ ಸಂಘ ಬಹ್ರೈನ್ ವತಿಯಿಂದ ಇತ್ತೀಚೆಗೆ ಎರಡು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ನೂರಾರು ಕನ್ನಡಿಗರು ಭಾಗವಹಿಸಿ ಸಂಭ್ರಮಕ್ಕೆ ಸಾಕ್ಷಿಯಾದರು. ಇಲ್ಲಿನ ಕನ್ನಡ ಭವನದಲ್ಲಿ ನೂತನವಾಗಿ ನಿರ್ಮಿಸಿರುವ ವಿಶ್ರಾಂತಿ ಕೊಠಡಿಯನ್ನು ಕರ್ನಾಟಕದ ಗ್ರಹ ಸಚಿವರಾದ ಡಾ| ಜಿ. ಪರಮೇಶ್ವರ್ ಅವರು ಲೋಕಾರ್ಪಣೆ ಗೊಳಿಸಿದರು.
ಕನ್ನಡ ಭವನದ ನಿರ್ಮಾಣಕ್ಕೆ ಧನ ಸಹಾಯವನ್ನು ನೀಡಿರುವ ಖ್ಯಾತ ಉದ್ಯಮಿ ಹಾಗೂ ಸಮಾಜ ಸೇವಕ ರೊನಾಲ್ಡ್ ಕೊಲಾಸೋ ಅವರ ಹೆಸರನ್ನು ಈ ವಿಶ್ರಾಂತಿ ಕೊಠಡಿಗೆ ನೀಡಲಾಗಿದ್ದು ಸಮಾರಂಭದಲ್ಲಿ ಡಾ| ರೊನಾಲ್ಡ್ ಕೊಲಾಸೋ, ಎಐಸಿಸಿ ಕಾರ್ಯದರ್ಶಿ ಹಾಗೂ ಕರ್ನಾಟಕದ ಅನಿವಾಸಿ ಕನ್ನಡಿಗರ ಘಟಕದ ಮಾಜಿ ಉಪಾಧ್ಯಕ್ಷರೂ ಆಗಿರುವ ಡಾ| ಆರತಿ ಕೃಷ್ಣ , ಮಂಡ್ಯ ಶಾಸಕ ರವಿಕುಮಾರ್ ಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಮುಂತಾದವರು ಉಪಸ್ಥಿತರಿದ್ದರು. ಅದೇ ದಿನ ಸಂಜೆ ಇಲ್ಲಿನ ಪ್ರತಿಷ್ಠಿತ ಮೂವ್ ಎಂಡ್ ಪಿಕ್ ಹೊಟೇಲಿನಲ್ಲಿ ಅಮರನಾಥ್ ರೈ ಅವರ ಸಾರಥ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ನೂತನ ಆಡಳಿತ ಮಂಡಳಿಯ ವಿದ್ಯುಕ್ತ ಪದಗ್ರಹಣ ಸಮಾರಂಭವು ವೈವಿಧ್ಯಮ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವರ್ಣರಂಜಿತವಾಗಿ ಜರಗಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಇಲ್ಲಿನ ಭಾರತೀಯ ರಾಯಭಾರಿ ವಿನೋದ್ .ಕೆ .ಜಾಕೋಬ್ ರವರು ಉಪಸ್ಥಿತರಿದ್ದರು. ಗಣ್ಯರ ಸಮ್ಮುಖದಲ್ಲಿ ಡಾ| ಜಿ. ಪರಮೇಶ್ವರ್ ಅವರು ನೂತನ ಆಡಳಿತ ಮಂಡಳಿಯ ಸದಸ್ಯರಿಗೆ ಗುರುತು ಪತ್ರವನ್ನು ನೀಡುವುದರೊಂದಿಗೆ ವಿದ್ಯುಕ್ತ ಪದಗ್ರಹಣ ಮಾಡಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಇಲ್ಲಿನ ಭಾರತೀಯ ರಾಯಭಾರಿ ವಿನೋದ್ ಕೆ.ಜಾಕೋಬ್ ರವರು ಕರ್ನಾಟಕ ರಾಜ್ಯದ ಹಿರಿಮೆ-ಗರಿಮೆಗಳ ಬಗ್ಗೆ ಮಾತನಾಡಿ ಕನ್ನಡ ಸಂಘದ ಕಾರ್ಯ ವೈಖರಿಯ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಸಂಘದ ಅಧ್ಯಕ್ಷರಾದ ಅಮರನಾಥ್ ರೈಯವರು ಪ್ರಾಸ್ತಾವಿಕ ಭಾಷಣ ಮಾಡಿ ಸಂಘ ಕಳೆದ ನಾಲ್ಕು ದಶಕಗಳಿಂದ ನಡೆದು ಬಂದ ಹಾದಿಯನ್ನು ವಿವರಿಸಿ ಸಂಘದ ಬೆಳವಣಿಗೆಗೆ ದುಡಿದಿರುವ ಎಲ್ಲರನ್ನು ಸ್ಮರಿಸಿ ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿದರು.
ಅಲ್ಲದೆ ಕನ್ನಡ ಭವನದ ಬಾಕಿ ಉಳಿದಿರುವ ಕಾಮಗಾರಿಯ ನಿರ್ಮಾಣಕ್ಕೆ ಕರ್ನಾಟಕ ಸರಕಾರದಿಂದ ಅನುದಾನವನ್ನು ಕೋರಿ ಗ್ರಹಸಚಿವರಿಗೆ ಮನವಿ ಪತ್ರವನ್ನು ನೀಡಿದರು. ಸಮ್ಮಾನವನ್ನು ಸ್ವೀಕರಿಸಿ ಮಾತನಾಡಿದ ಸಚಿವರು, ಕನ್ನಡ ಸಂಘದ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಕನ್ನಡ ಸಂಘದ ಬೆಳವಣಿಗೆಗೆ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಡಾ| ರಿಚರ್ಡ್ ಕೊಲಾಸೋ ಜೀವನಾಧಾರಿತ ಪುಸ್ತಕವನ್ನು ಅನಾವರಣಗೊಳಿಸಲಾಯಿತು. ಇದೇ ವೇಳೆ ಗಣ್ಯರನ್ನು ಸಮ್ಮಾನಿಸಲಾಯಿತು. ಸಂಘದ ನಿಕಟಪೂರ್ವ ಅಧ್ಯಕ್ಷರಾದ ಪ್ರದೀಪ್ ಶೆಟ್ಟಿ, ಸದಸ್ಯರಾದ ಹಾಜಿ ಅಬ್ದುಲ್ ರಜಾಕ್, ಆನಂದ್ ಲೋಬೊ ಅವರನ್ನು ಸಂಘಕ್ಕೆ ನೀಡಿರುವ ಕೊಡುಗೆಗಾಗಿ ಗೌರವಿಸಲಾಯಿತ. ಸಂಘದ ಪ್ರತಿಭಾವಂತ ಕಲಾವಿದರಿಂದ ಹಾಗೂ ನಾಡಿನ ಖ್ಯಾತ ಸುಜಯ್ ಶಾನಭಾಗ್ ತಂಡದಿಂದ ವೈವಿಧ್ಯಮಯವಾದ ನೃತ್ಯ ಪ್ರದರ್ಶನಗಳು ವೇದಿಕೆಯಲ್ಲಿ ಮೂಡಿಬಂದು ನೆರೆದ ಜನಸ್ತೋಮವನ್ನು ರಂಜಿಸಿತು. ಪ್ರಧಾನ ಕಾರ್ಯದರ್ಶಿ ರಾಮ್ ಪ್ರಸಾದ್ ಅಮ್ಮೆನಡ್ಕ ಸ್ವಾಗತಿಸಿ, ಸಂಧ್ಯಾ ಪೈ ಹಾಗೂ ಶಿವಾನಂದ್ ಪಾಟೀಲ್ ಸಹಕರಿಸಿದರು.
ವರದಿ: ಕಮಲಾಕ್ಷ ಅಮೀನ್