Advertisement

ಸಮ್ಮೇಳನಕ್ಕೆ ರಾಜ್ಯ ಸರಕಾರದಿಂದ ಹಣ ಬಿಡುಗಡೆಯಾಗಿಲ್ಲ; ಇದರಿಂದ ಸಮಸ್ಯೆಯಾಗುತ್ತಿದೆ: ಸಿಂಪಿ

09:47 AM Jan 26, 2020 | keerthan |

ಕಲಬುರಗಿ: ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೇವಲ 11 ದಿನಗಳ ಬಾಕಿ ಉಳಿದಿದ್ದು, ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆಯಾಗದಿರುವುದು ಸಮಸ್ಯೆಯಾಗುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಗೂ ಅಖಿಲ ಭಾರತ 85ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ವೀರಭದ್ರ ಸಿಂಪಿ ಹೇಳಿದರು.

Advertisement

ಪರಿಷತ್ತಿನ ಸಭಾ‌ಭವನದಲ್ಲಿ ಸಮ್ಮೇಳನದ ಸಿದ್ಧತೆಗಳ ಕುರಿತಾಗಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 10 ಕೋ ರೂ ಬಿಡುಗಡೆಯಾಗುವುದಾಗಿ ಹೇಳಲಾಗಿದೆ. ಸಿಎಂ ಅವರು ಅನುಮೋದನೆ ನೀಡಿದ್ದಾರೆ ಎನ್ನಲಾಗಿದೆ. ಇನ್ನೆರಡು ದಿನದೊಳಗೆ ಅನುದಾನ ಬಿಡುಗಡೆಯಾಗಲಿದೆ ಎಂಬುದಾಗಿ ವಿಶ್ವಾಸ ಹೊಂದಲಾಗಿದೆ ಎಂದರು.

ಸಮ್ಮೇಳನಕ್ಕೆ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಕಲಾವಿದರಿಗೆ, ಸಾಂಸ್ಕೃತಿಕ ತಂಡಗಳಿಗೆ ಹಣ ನೀಡಲಾಗುತ್ತಿಲ್ಲ. ಅಂದಾಜು 2 ಕೋ ರೂ ಕಲಾವಿದರಿಗೆ ನೀಡಬೇಕಾಗಿದೆ. ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮನು ಬಳಿಗಾರ ಅವರು 10 ಲಕ್ಷ ರೂ ಜಿಲ್ಲಾ ಕಸಾಪಗೆ ಬಿಡುಗಡೆ ಮಾಡಿದ್ದಾರೆ.  ಕೆಲವು ಸಣ್ಣಪುಟ್ಟ ಚಟುವಟಿಕೆಗಳಿಗೆ ಸಹಾಯಕವಾಗಿದೆ.‌ ಅದೇ ರೀತಿ ದೇಣಿಗೆ ಸಂಗ್ರಹ ನಡೆದಿದೆ ಎಂದು ಸಿಂಪಿ ವಿವರಣೆ ನೀಡಿದರು.

ಸಮ್ಮೇಳನಕ್ಕೆ 21030 ಪ್ರತಿನಿಧಿಗಳ ನೋಂದಣಿಯಾಗಿದೆ. ಇದು ಹಿಂದಿನ ಸಮ್ಮೇಳನಗಳ ದಾಖಲೆ ಮುರಿದಿದೆ. ಇದರಲ್ಲಿ 15178 ಪುರುಷರು ಮತ್ತು 5852 ಮಹಿಳೆಯರು ಸೇರಿದ್ದಾರೆ ಎಂದರು.

ಸಮ್ಮೇಳನದ ಮೆರವಣಿಗೆಯು ಡಾ. ಎಸ್.ಎಂ ಪಂಡಿತ ರಂಗಮಂದಿರದಿಂದ ಆರಂಭವಾಗುವುದಾದರೂ ವಿದ್ಯಾರ್ಥಿಗಳೆಲ್ಲ ಚಂದ್ರಕಾಂತ ಪಾಟೀಲ್ ಶಾಲಾ ಆವರಣದಲ್ಲಿ ಬಂದು ಸೇರುವರು ಎಂದರು. ಏನೇ ಆದರೂ ಸಮ್ಮೇಳನ ಐತಿಹಾಸಿಕವಾಗಿ ಯಶಸ್ವಿಯಾಗಲಿದೆ. ಇದಕ್ಕೆ ಸ್ಥಳೀಯ ಮಣ್ಣಿನ ಗುಣಧರ್ಮ ಅಂತದ್ದು ಎಂದು ಸಿಂಪಿ ಹೇಳಿದರು.

Advertisement

ಸಮ್ಮೇಳನಾಧ್ಯಕ್ಷ ಡಾ. ಎಚ್.ಎಸ್.ವೆಂಕಟೇಶ ಮೂರ್ತಿ ಅವರು ಫೆ. 4ರಂದು ಬೆಳಿಗ್ಗೆ ರೈಲಿನ ಮೂಲಕ ಬಂದಿಳಿಯುವರು ಎಂದು ಸಿಂಪಿ ಇದೇ ಸಂದರ್ಭದಲ್ಲಿ ತಿಳಿಸಿದರು.

ಕಸಾಪದ ಪದಾಧಿಕಾರಿಗಳಾದ ಮಡಿವಾಳಪ್ಪ ನಾಗರಹಳ್ಳಿ, ಡಾ. ವಿಜಯ ಕುಮಾರ ಪರೂತೆ, ದೌಲತರಾವ ಪಾಟೀಲ್,  ಅಂಬಾಜಿ ಕವಲಗಾ, ಲಿಂಗರಾಜ ಸಿರಗಾಪುರ, ಆನಂದ ನಂದೂರಕರ್ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next