Advertisement

Kannada ಸಾಹಿತ್ಯ ಸಮ್ಮೇಳನ 2 – 3 ವರ್ಷಕ್ಕೊಮ್ಮೆ ನಡೆಯಲಿ

12:24 AM Dec 18, 2024 | Team Udayavani |

ಬೆಂಗಳೂರು: “ಕನ್ನಡ ಸಾಹಿತ್ಯ ಸಮ್ಮೇಳನದ ರೂಪರೇಖೆ ಬದಲಾಗಬೇಕು. ಪರಿಷತ್‌ನ ಅಜೆಂಡಾದಲ್ಲಿದೆ ಎಂಬ ಮಾತ್ರಕ್ಕೆ ಪ್ರತೀ ವರ್ಷ ಸಮ್ಮೇಳನ ನಡೆಸುವ ಬದಲು ಎರಡು ಅಥವಾ ಮೂರು ವರ್ಷಕ್ಕೊಮ್ಮೆ ಅದ್ದೂರಿಯಾಗಿ ನಡೆಸಬೇಕು. ಕನ್ನಡದಲ್ಲಿ ಪ್ರಭುತ್ವ ಹೊಂದಿದವರಿಗೆ ಸಮ್ಮೇಳನಾಧ್ಯಕ್ಷತೆ ನೀಡಬೇಕು…’ ಇದು ಕಳೆದ ವರ್ಷ ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ದೊಡ್ಡರಂಗೇಗೌಡ ಅವರ ಮಾತು. ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ “ಉದಯವಾಣಿ’ಗೆ ಅವರು ನೀಡಿರುವ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

Advertisement

ಸಾಹಿತ್ಯ ಸಮ್ಮೇಳನಗಳ ನಿರ್ಣಯಗಳನ್ನು ಸರಕಾರ ನಿಜಕ್ಕೂ ಗಂಭೀರವಾಗಿ ಪರಿಗಣಿಸುತ್ತ ದೆಯಾ? ಹಾವೇರಿ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಈ ಬಗ್ಗೆ ಏನು ಹೇಳುತ್ತೀರಿ?
ಪ್ರತೀ ಸಮ್ಮೇಳನದಲ್ಲಿ ನಿರ್ಣಯಗಳು ಆಗುತ್ತವೆ. ಆದರೆ ಆ ನಿರ್ಣಯಗಳನ್ನು ಗಾಜಿನ ಕಪಾಟಿನಲ್ಲಿಟ್ಟು ಬೀಗಹಾಕಲಾಗುತ್ತದೆ. ಇಷ್ಟೂ ವರ್ಷ ಅದೇ ಪರಂಪರೆ ಮುಂದುವರಿದಿದೆ. ಅದೇ ಮರುಕಳಿಸುತ್ತದೆ. ಸಮ್ಮೇಳನದ ಒಂದೂ ನಿರ್ಣಯ ತೇರ್ಗಡೆಯಾ ಗಿಲ್ಲ, ಅನುಷ್ಠಾನಕ್ಕೂ ಬರಲಿಲ್ಲ. ಇದರ ಹಣೆಬರಹವೇ ಇಷ್ಟು. ಏನು ಮಾಡುವುದು ಕನ್ನಡ ನಾಡಿನ ದುರಂತ ಅದು. ಸರಕಾರ ಆಸಕ್ತಿ ವಹಿಸಿದರೂ ಕೆಲವು ಸಲ ಏನೇನೂ ಪ್ರಯೋಜನವಿಲ್ಲ. ಎಲ್ಲೋ ಅಲ್ಲೊಂದು ಇಲ್ಲೊಂದು ನಿರ್ಣಯಗಳು ಜಾರಿಗೆ ಬರುತ್ತವೆ ಅಷ್ಟೆ. ಸಮ್ಮೇಳನಾಧ್ಯಕ್ಷರ ಭಾಷಣ ಒಂದು ರೀತಿಯ ಆಲಂಕರಣ ಮಾತ್ರ; ಯಾವುದೇ ಸರಕಾರ ಗಂಭೀರವಾಗಿ ಪರಿಗಣಿಸುವುದಿಲ್ಲ.

ಐದನೇ ತರಗತಿ ವರೆಗಾದರೂ ಮಕ್ಕಳಿಗೆ ಸರಕಾರ ಕನ್ನಡ ಭಾಷೆಯಲ್ಲೇ ಶಿಕ್ಷಣ ನೀಡಬೇಕೆಂದು ಸಮ್ಮೇಳನಾಧ್ಯಕ್ಷರಾಗಿ ಒತ್ತಾಯಿಸಿದ್ದೀರಿ. ಆದರೆ ಈಗ ಸರಕಾರವೇ ಕನ್ನಡ ಶಾಲೆಗಳನ್ನು ಇಂಗ್ಲಿಷ್‌ ಶಾಲೆಗಳಾಗಿ ಮಾಡ ಹೊರಟಿದೆ?
ಪ್ರಾಥಮಿಕ ಶಾಲೆಗಳು ಕನ್ನಡದಲ್ಲೇ ಇವೆ. ಅವುಗಳನ್ನು ಆಂಗ್ಲ ಭಾಷೆ ಪರವಾನಿಗೆ ಪಡೆದು ಪ್ರಾಥಮಿಕ ಶಾಲೆಗಳು ನಡೆಯುತ್ತಿವೆ. ಸರಕಾರಿ ಶಾಲೆಗಳಿಗೆ ಕಾಯಕಲ್ಪ ಕಂಡುಕೊಳ್ಳಬೇಕಾದ ಸರಕಾರ ಕನ್ನಡ ಶಾಲೆಗಳನ್ನೇ ಮುಚ್ಚಿದೆ. ಇದು ಬೇಸರದ ವಿಚಾರ. ಮಕ್ಕಳು ಏಳನೇ ತರಗತಿವರೆಗಾದರೂ ಕನ್ನಡದಲ್ಲೇ ಓದಬೇಕು. ತಳಪಾಯ ಚೆನ್ನಾಗಿರಬೇಕು ಎಂದಾದರೆ ಮೊದಲು ಅಭಿವ್ಯಕ್ತಿ ಬೇಕು. ಆ ಅಭಿವ್ಯಕ್ತಿ ಕನ್ನಡದಲ್ಲಿದ್ದರೆ ಮಗು ಚೆನ್ನಾಗಿ ಯೋಚನೆ ಮಾಡುತ್ತದೆ. ಮಕ್ಕಳ ಅಭಿವ್ಯಕ್ತಿ ಸ್ವಾತಂತ್ರ್ಯ ಕಿತ್ತುಕೊಳ್ಳುವ ಕೆಲಸ ಆಗಬಾರದು.

ರಾಜಧಾನಿಯಲ್ಲಿ ಕನ್ನಡ ಭಾಷೆ ನಶಿಸುತ್ತಿರುವ ಬಗ್ಗೆ ಸರಕಾರಕ್ಕೆ ಏನು ಸಲಹೆ ನೀಡುತ್ತೀರಿ?
ನೋಡಿ ಬೆಂಗಳೂರಿನಲ್ಲಿ ಎಷ್ಟು ಕನ್ನಡ ಫ‌ಲಕಗಳಿವೆ. 10 ಫ‌ಲಕಗಳು ಇರಬೇಕಾದ ಕಡೆ ಮೂರು ಫ‌ಲಕಗಳು ಇರುತ್ತವೆ. ಉಳಿದೆಲ್ಲವೂ ಆಂಗ್ಲ ಭಾಷೆಯ ಫ‌ಲಕಗಳು ಅಥವಾ ಹಿಂದಿ ಭಾಷೆಯ ಫ‌ಲಕಗಳು. ಫ‌ಲಕವನ್ನೇ ನೀವು ಇಂಗ್ಲಿಷ್‌ ಭಾಷೆಯಲ್ಲಿ ಹಾಕಿದಾಗ ಇಂಗ್ಲಿಷ್‌ಗೆ ನಿಮ್ಮನ್ನು ನೀವು ಮಾರಿಕೊಂಡ ಹಾಗಾಯಿತು. ನಿಮ್ಮ ಭಾಷೆಯಲ್ಲಿ ಅಸ್ತಿತ್ವ ಇಲ್ಲವೇ?. ಕನ್ನಡ ಬಳಸದೆ ಇರುವುದಕ್ಕೆ ನಮ್ಮ ಸಂಕಲ್ಪ ಬಲ ಕಡಿಮೆಯಾಗಿರುವುದೇ ಕಾರಣ. ಸರಕಾರಿ ಅಧಿಕಾರಿ ಗಳಿಗೆ ಕನ್ನಡ ಭಾಷೆ ಬಳಕೆ ವಿಚಾರದಲ್ಲಿ ಬದ್ಧತೆ ಇಲ್ಲ.

ಸಮ್ಮೇಳನದ ರೂಪರೇಖೆಗಳು ಬದಲಾಗ ಬೇಕೆಂದು ಅನಿಸುತ್ತದೆಯಾ?
ಖಂಡಿತವಾಗಿಯೂ ಸಮ್ಮೇಳನದ ರೂಪರೇಖೆಗಳಲ್ಲಿ ಬದಲಾವಣೆ ಆಗಲೇಬೇಕು. ಈ ಬಗ್ಗೆ ಲೇಖನವನ್ನು ಕೂಡ ನಾನು ಬರೆದಿದ್ದೇನೆ. ಏಕೆ ಹಳೆಯ ಕಾಲದ ಆಲದ ಮರಕ್ಕೆ ಜೋತು ಬೀಳುತ್ತೀರಾ? ಬದಲು ಮಾಡಿ. ಸಮ್ಮೇಳನದ ಅಧ್ಯಕ್ಷರನ್ನಾಗಿ ಮಹಿಳೆಯರನ್ನು, ದಲಿತರನ್ನು ಪರಿಗಣಿಸಬೇಕು ಎಂಬುದು ಆ ಲೇಖನದಲ್ಲಿದೆ. ಕನ್ನಡದಲ್ಲಿ ಪ್ರಭುತ್ವ ಹೊಂದಿದವರಿಗೆ ಸಮ್ಮೇಳನಾಧ್ಯಕ್ಷತೆಗೆ ಮಣೆ ಹಾಕಬೇಕು. ಕನ್ನಡದಲ್ಲಿ ಹಲವು ಲೇಖಕಿಯರು ಉತ್ತಮ ಸಾಹಿತ್ಯ ರಚಿಸುತ್ತಿದ್ದು ಅವರೆಲ್ಲರೂ ಸಮರ್ಥರಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next