ಮಳವಳ್ಳಿ: ನಮ್ಮ ತಾಲೂಕು ಜಾನಪದ ಸಾಹಿತ್ಯದಲ್ಲಿ ಸಾಕಷ್ಟು ಹೆಸರು ವಾಸಿಯಾಗಿದ್ದು, ಸಾಹಿತ್ಯ ಸಮ್ಮೇಳನಗಳ ಮೂಲಕ ಅಂಥ ಕಲೆಯನ್ನು ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಶಾಸಕ ಕೆ.ಅನ್ನದಾನಿ ಹೇಳಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ನಡೆದ 6ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ತಾಲೂಕಿನಲ್ಲಿ ನೂರಾರು ಜಾನಪದ ಕಲಾವಿದರನ್ನು ಕಾಣಬಹುದಾಗಿದೆ. ಸ್ವತಃ ತಾನು ಕೂಡ ಜಾನಪದ ವಿಷಯದಲ್ಲಿ ಸಂಶೋಧನೆ ಮಾಡಿ ಪಿಎಚ್‌ಡಿ ಪದವಿ ಪಡೆದಿದ್ದು, ರಾಜಕಾರಣದ ವೃತ್ತಿಯ ಜತೆಗೆ ಜಾನಪದ ಹಾಡುವುದನ್ನು ಪ್ರವೃತ್ತಿಯಾಗಿ ಬೆಳೆಸಿಕೊಂಡಿದ್ದು, ಕಲೆ ಮತ್ತು ಸಾಹಿತ್ಯದ ಎಲ್ಲರಿಗೂ ಸುಲಭವಾಗಿ ಒಲಿಯುವುದಿಲ್ಲ. ಈ ಸಮ್ಮೇಳನದ ಯಶಸ್ವಿ ದುಡಿದ ಕನ್ನಡದ ಸಾಹಿತ್ಯಾಭಿಮಾನಿಗಳಿಗೆ ಚಿರಋಣಿ ಎಂದರು.
ಸಾಹಿತ್ಯ ಕೆಲವರನ್ನು ಮಾತ್ರ ಅಪ್ಪಿಕೊಳ್ಳುತ್ತೆ: ಭಾರತೀ ಕಾಲೇಜಿನ ಪ್ರಾಧ್ಯಾಪಕ ಡಾ.ಮ.ರಾಮಕೃಷ್ಣ ಮಾತನಾಡಿ, ಸಾಹಿತ್ಯ ಎಲ್ಲರನ್ನೂ ಕೈ ಬೀಸಿ ಕರೆಯುತ್ತದೆ. ಆದರೆ, ಅದು ಕೆಲವರನ್ನು ಮಾತ್ರ ಅಪ್ಪಿಕೊಳ್ಳುತ್ತದೆ. ಇನ್ನೂ ಕೆಲವರನ್ನು ಒಪ್ಪಿಕೊಳ್ಳುತ್ತದೆ. ಇದಕ್ಕೆ ಜನ್ಮ ಜನುಮದ ಸಂಸ್ಕಾರ ಬೇಕು ಎನ್ನುತ್ತಾರೆ. ಸಾಹಿತ್ಯ ಹಾಗೆಯೇ ಒಲಿದು ಬರುವುದಿಲ್ಲ. ಕನ್ನಡಮ್ಮನ ಮಡಿಲಿನಲ್ಲಿ ಆಗಾಧೆ ರತ್ನಗಳನ್ನು ಹೊಂದಿರುವ ಕನ್ನಡ ತಾಯಿ. ಕುಮಾರವ್ಯಾಸ ಹೇಳುತ್ತಾರೆ ಅವರು ಸಂಪ್ರದಾಯಕ ಶಿಕ್ಷಣ ಪಡೆದವರಲ್ಲ. ಆದರೂ ಕವಿ ಕಾವ್ಯದ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು ಎಂದು ಹೇಳಿದರು.
ಸಮ್ಮೇಳನಾಧ್ಯಕ್ಷ ಎಂ.ಬಸಪ್ಪ ನೆಲಮಾಕನಹಳ್ಳಿ ಅವರನ್ನು ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಅಭಿನಂದಿಸಲಾಯಿತು. ಪಾಪ ಪಾಂಡು ಖ್ಯಾತಿಯ ಎಂ.ಎಸ್.ನರಸಿಂಹ ಮೂರ್ತಿ, ನಗೆ ಭಾಷಣಕಾರ ಎಚ್.ದುಂಡಿರಾಜ್, ನಟ ಮಿಮಿಕ್ರಿ ಗೋಪಿ, ಬೆಣ್ಣೆ ಬಸವರಾಜ್ ಹೊಸಕೋಟೆ ನಡೆಸಿಕೊಟ್ಟ ನಗೆ ಹಬ್ಬ ಸಾಹಿತ್ಯಾಭಿಮಾನಿ ಗಳನ್ನು ನಗೆಗಡಲಿನಲ್ಲಿ ತೇಲಿಸಿತು.
ಇದನ್ನೂ ಓದಿ :ಜೆಡಿಎಸ್‌ನಲ್ಲಿ ಭಿನ್ನ ಮತ: ನಾಗಮಂಗಲಕ್ಕಾಗಿ ಪೈಪೋಟಿ
ಕಸಪಾ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಹುಸ್ಕೂರು ಕೃಷ್ಣೇಗೌಡ, ಪುರಸಭೆ ಉಪಾಧ್ಯಕ್ಷ ಟಿ.ನಂದಕುಮಾರ್, ತಾಪಂ ಸದಸ್ಯ ಸೋಮಶೇಖರ್, ಟಿಎಪಿಸಿಎಂಎಸ್ ನಿರ್ದೇಶಕ ರಾಜೇಶ್, ಸರ್ಕಾರಿ ನೌಕರರ ಸಂಘದ ಘಟಕದ ಅಧ್ಯಕ್ಷ ಎಚ್.ಮಲ್ಲಿ ಕಾರ್ಜುನಯ್ಯ, ಸುಹಾಸ್ ಮಹದೇವಯ್ಯ, ಮಾದಹಳ್ಳಿ ಶಿವನಂಜಯ್ಯ, ಮರಿಸ್ವಾಮಿ ಹಾಜರಿದ್ದರು.