Advertisement
ಕನಕ-ಶರೀಫರ-ಸರ್ವಜ್ಞರ ಪ್ರಧಾನ ವೇದಿಕೆ (ಹಾವೇರಿ): ಆಳುವ ಸರಕಾರಗಳು ಯಾವುದೇ ಇರಲಿ, ಎಡ-ಬಲ-ಮಧ್ಯಮ ಮಾರ್ಗಗಳೇನೇ ಇರಲಿ, ಕನ್ನಡವೆಂಬುದು ಕನ್ನಡಿಗರ ಅನ್ನದ, ಹಕ್ಕಿನ ಭಾಷೆ ಎನ್ನುವುದನ್ನು ನಾವು ಮರೆಯಬಾರದು…
Related Articles
Advertisement
5ನೇ ತರಗತಿವರೆಗೆ ಕನ್ನಡ ಕಲಿಕೆ ಕಡ್ಡಾಯವಾಗಲಿ: ಪ್ರಾಥಮಿಕ ಶಾಲೆಗಳಲ್ಲಿ ಕನ್ನಡಕ್ಕೆ ನಾವೆಲ್ಲರೂ ಆದ್ಯತೆ ಕೊಡಬೇಕು. 5ನೇ ತರಗತಿವರೆಗೆ ಕನ್ನಡ ಕಲಿಕೆಯನ್ನು ಸರಕಾರ ಕಡ್ಡಾಯಗೊಳಿಸಬೇಕು, ಆ ಮೇಲೆ ಆ ಮಗುವಿನ ಬೌದ್ಧಿಕ ಸಾಮರ್ಥಯದ ಮೇಲೆ ಎಷ್ಟು ಭಾಷೆಗಳನ್ನಾದರೂ ಕಲಿಯಲಿ. ನಮ್ಮ ವಿರೋಧವಿಲ್ಲ. ಇದು ಸೈದ್ಧಾಂತಿಕ ತರ್ಕ. ಈ ಬಗ್ಗೆ ಸರಕಾರ ಕೂಡ ಗಮನ ನೀಡಬೇಕು ಎಂದರು. ಇಂದಿನ ವಾಸ್ತವದ ಜಗತ್ತಿನಲ್ಲಿ “ಅನ್ನ ನೀಡುವ’ ಭಾಷೆ ಬಗ್ಗೆ ಜನಸಮುದಾಯದಲ್ಲಿ ವಿಶೇಷ ಸೆಳೆತ ಕಂಡು ಬರುತ್ತಿರುವುದಕ್ಕೆ ನಾವು ಕುರುಡಾಗಬಾರದು ಎಂದರು.
ಪಾರಿಭಾಷಿಕ ಪದಕೋಶ ಅಗತ್ಯ: ನಮ್ಮ ರಾಜ್ಯದಲ್ಲಿ ವೈದ್ಯಕೀಯ, ಎಂಜಿನಿಯರಿಂಗ್ ಶಿಕ್ಷಣವನ್ನು ಕನ್ನಡ ಭಾಷೆಯಲ್ಲಿಯೇ ನೀಡುವ ತಲಾ ಒಂದೊಂದು ಕಾಲೇಜನ್ನಾದರೂ ಮುಂದಿನ ಮೂರು ವರ್ಷದ ಅವಧಿಯಲ್ಲಿ ಆರಂಭಿಸಬೇಕು. ಇದಕ್ಕಾಗಿ “ಕನ್ನಡ ಜ್ಞಾನ-ವಿಜ್ಞಾನ-ತಂತ್ರಜ್ಞಾನ ಕಾರ್ಯಪಡೆ’ಯೊಂದನ್ನು ಮೊದಲು ರಾಜ್ಯ ಸರಕಾರ ರಚಿಸಬೇಕು ಎಂದು ಆಗ್ರಹಿಸಿದರು.
ಕನ್ನಡದಲ್ಲಿ ಕಲಿಸಬೇಕೆನ್ನುವ ಇಚ್ಛಾಶಕ್ತಿ ಇರುವ ಉತ್ಸಾಹಶೀಲ, ನುರಿತ ಬೋಧಕ ಸಿಬಂದಿಯನ್ನು ಅಲ್ಲಿಗೆ ತರುವ ಮೂಲಕ ಕನ್ನಡದಲ್ಲಿಯೇ ಈ ಶಾಸ್ತ್ರಗಳನ್ನು ಕಲಿಯಲು ಮುಂದಾಗುವ ವಿದ್ಯಾರ್ಥಿಗಳ ಪ್ರತ್ಯೇಕ ತಂಡ ಆರಂಭಿಸಬಹುದು. ಹೀಗೆ ಕನ್ನಡದಲ್ಲಿಯೇ ವೃತ್ತಿಪರ ಶಿಕ್ಷಣವನ್ನು ಪಡೆಯಲು ಮುಂದಾಗುವ ಪ್ರತಿಭಾವಂತ ಮಕ್ಕಳ ಸಂಪೂರ್ಣ ಖರ್ಚು ವೆಚ್ಚವನ್ನು ಸರಕಾರವೇ ವಹಿಸಿಕೊಳ್ಳುವ ಮೂಲಕ ವೃತ್ತಿಪರ ಕೋರ್ಸ್‌ಗಳನ್ನು ಉನ್ನತ ಶಿಕ್ಷಣವನ್ನು ಕನ್ನಡದಲ್ಲಿ ಕಲಿಯುವುದಕ್ಕೆ ದೊಡ್ಡ ಮಟ್ಟದ ಪ್ರೋತ್ಸಾಹ ನೀಡಬೇಕು ಎಂದರು. ಕನ್ನಡದಲ್ಲಿಯೇ ಐಎಎಸ್ ಪರೀಕ್ಷೆ ಬರೆದು ಪಾಸ್ ಮಾಡಿದವರು ಎಂದು ಹೇಳುತ್ತಿದ್ದ ರೀತಿಯಲ್ಲಿ, ಕನ್ನಡದಲ್ಲಿಯೇ ವೈದ್ಯಕೀಯ ಶಿಕ್ಷಣ, ಎಂಜಿನಿಯರಿಂಗ್ ಶಿಕ್ಷಣವನ್ನು ಪಡೆದವರು ಇವರು ಎಂದು ನಾಡಿನ ಜನ ಹೆಮ್ಮೆಯಿಂದ ಗುರುತಿಸುವಂತಾಗಬೇಕು ಎಂದರು.
ಮುಲಾಜಿಲ್ಲದೆ ಧಿಕ್ಕರಿಸಿ: ನಮ್ಮ ಭಾಷೆಯಲ್ಲಿ ಸೇವೆ ನೀಡದ ಬ್ಯಾಂಕ್‌ಗಳು, ಸರಕಾರಿ ಉದ್ದಿಮೆಗಳು, ಖಾಸಗಿ ಸಂಸ್ಥೆಗಳನ್ನು ಮುಲಾಜಿಲ್ಲದೆ ಧಿಕ್ಕರಿಸಬೇಕು. ಇತ್ತೀಚೆಗೆ ಶಾಸನಸಭೆಯಲ್ಲಿ “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ -2022′ ಅನ್ನು ಮಂಡಿಸಲಾಯಿತು. ಇದರಲ್ಲಿ ಕನ್ನಡವನ್ನು ಅಧಿಕೃತ ರಾಜ್ಯ ಭಾಷೆಯಾಗಿ ತೀರ್ಮಾನಿಸುವ, ಆಡಳಿತ, ನ್ಯಾಯಾಂಗದಲ್ಲಿ ಕನ್ನಡ ಬಳಕೆ ಕಡ್ಡಾಯಗೊಳಿಸುವುದು ಸಹಿತ ಹಲವು ಉತ್ತಮ ಅಂಶಗಳಿವೆ ಎಂದರು.
ಕನ್ನಡದಲ್ಲಿಯೂ ವೃತ್ತಿಪರ, ಉನ್ನತ ಶಿಕ್ಷಣ ನೀಡಿಮುಖ್ಯಮಂತ್ರಿಗಳೇ, ಸಮಸ್ತ ಕನ್ನಡಿಗರ ಪರವಾಗಿ ಗಟ್ಟಿ ನಿರ್ಧಾರ ಮಾಡಿ, ಕನ್ನಡದಲ್ಲಿಯೂ ವೃತ್ತಿಪರ ಶಿಕ್ಷಣ, ಉನ್ನತ ಶಿಕ್ಷಣ ನೀಡಿಯೇ ತೀರುತ್ತೇವೆ ಎನ್ನುವ ಪಣ ತೊಡಿ. ಸಾಹಿತಿಯಾಗಿ ಆಗಲಿ, ಕನ್ನಡ ಭಾಷಾ ಪ್ರಾಚಾರ್ಯನಾಗಿ ಆಗಲಿ, ಕನ್ನಡದ ಮೇಲಿನ ಅಭಿಮಾನಕ್ಕಾಗಿಯಾಗಲಿ ನಿಮ್ಮ ಮುಂದೆ ಈ ಮಾತು ಹೇಳುತ್ತಿಲ್ಲ. ಬದಲಿಗೆ ಶಿಕ್ಷಣ ವ್ಯವಸ್ಥೆಯನ್ನು ಬಹುಕಾಲ ಕಂಡಿರುವ, ಅದರ ಒಳಹೊರಗನ್ನು ಅರಿತವನಾಗಿ ಹೇಳುತ್ತಿದ್ದೇನೆ. ಯಾವುದೋ ದೂರ ದೇಶದ ಕಂಡು ಕೇಳರಿಯದ ಭಾಷೆಯಲ್ಲಿ ಆ ದೇಶಗಳಿಗೆ ತೆರಳಿ ವೈದ್ಯಕೀಯ, ವೃತ್ತಿಪರ, ಉನ್ನತ ಶಿಕ್ಷಣವನ್ನು ಪಡೆಯುತ್ತಾರೆ ಎನ್ನುವುದಾದರೆ ನಮ್ಮದೇ ಭಾಷೆಯಲ್ಲಿ ನಗರ-ಹಳ್ಳಿ ಎಂಬ ಹಂಬಲವಿಲ್ಲದ ಈ ನಮ್ಮ ಕರುನಾಡ ಮಕ್ಕಳು ವೈದ್ಯಕೀಯ, ವೃತ್ತಿಪರ, ಉನ್ನತ ಶಿಕ್ಷಣಗಳನ್ನು ಪಡೆಯಲಾಗುವುದಿಲ್ಲವೇ? ಏಕೆ ನಮಗೆ ನಮ್ಮ ಭಾಷೆಯಲ್ಲಿ ಉನ್ನತ ಶಿಕ್ಷಣವನ್ನು ಕೊಡಲಾಗುತ್ತಿಲ್ಲ. ನಮ್ಮ ವಿಶ್ವವಿದ್ಯಾನಿಲಯಗಳನ್ನು ನಾನು ಈ ವೇದಿಕೆಯಲ್ಲಿ ನಿಂತು, ಸಮಸ್ತ ಕನ್ನಡಿಗರ ಪರವಾಗಿ ಕೇಳುತ್ತಿದ್ದೇನೆ, ನಾವು ಕೇವಲ ಎಡ, ಬಲದ ವಾದ-ವಿವಾದಗಳಿಗೆ ಮಾತ್ರವೇ ನಮ್ಮ ಬೌದ್ಧಿಕತೆಯನ್ನು ಸೀಮಿತಗೊಳಿಸಿಕೊಳ್ಳಬೇಕೆ? ಕನ್ನಡವನ್ನು ಸಮರ್ಥ “ಜ್ಞಾನದಾಯಿನಿ’ ಭಾಷೆಯಾಗಿ ಬೆಳೆಸುವ ಜವಾಬ್ದಾರಿ ನಮಗಿಲ್ಲವೇ ಎಂದು ಸಾಹಿತಿ ದೊಡ್ಡರಂಗೇಗೌಡ ಹೇಳಿದರು.