Advertisement

ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ನಡೆಸಲು ಹೈಕೋರ್ಟ ಸೂಚನೆ

06:00 PM Sep 15, 2021 | Team Udayavani |

ಧಾರವಾಡ : ಕೋವಿಡ್ ಕಾರಣದಿಂದ ಮುಂದೂಡಲ್ಪಟ್ಟಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಪ್ರಕ್ರಿಯೆಯನ್ನು ಮುಂಬರುವ ಎರಡು ತಿಂಗಳುಗಳ ಅವಧಿಯಲ್ಲಿ ಪೂರ್ಣಗೊಳಿಸಬೇಕೆಂದು ಧಾರವಾಡ ಹೈಕೋರ್ಟ್ ಪೀಠ ಇಂದು (ಸೆ.15) ನಿರ್ದೇಶನ ನೀಡಿದೆ.

Advertisement

ಮೇ.9 ರಂದು ನಿಗದಿಯಾಗಿದ್ದ ಕಸಾಪ ಚುನಾವಣೆಯನ್ನು ಕೋವಿಡ್ ಎರಡನೇ ಅಲೆ ತೀವ್ರಗೊಂಡ ಕಾರಣ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ನಂತರ ಸಹಕಾರ ವಲಯ, ವಿವಿಧ ಮಹಾನಗರಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಕೈಗೊಂಡ ಬಳಿಕವೂ ಕಸಾಪ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸುವ ನಿರ್ಧಾರ ಪ್ರಕಟವಾಗಲಿಲ್ಲ.ಈ ಕುರಿತು ಕೇಂದ್ರ ಕಸಾಪ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಶೇಖರಗೌಡ ಮಾಲಿಪಾಟೀಲ ಅವರು ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲು ಕೋರಿದ್ದರು.

ನಂತರ ಧಾರವಾಡದ ನ್ಯಾಯವಾದಿಗಳಾದ ಶ್ರೀಹರ್ಷ ನಿಲೋಪಂತ್ ಮತ್ತು ಅವಿನಾಶ್ ಮಾಲಿಪಾಟೀಲ ಅವರ ಮೂಲಕ ಹೈಕೋರ್ಟ್ ಪೀಠಕ್ಕೂ ಒಂದು ರಿಟ್ ಅರ್ಜಿ ಸಲ್ಲಿಸಿದ್ದರು. ಶೇಖರಗೌಡ ಮಾಲಿಪಾಟೀಲ ಅವರ ಅರ್ಜಿ ಪರಿಗಣಿಸಿರುವ ಉಚ್ಛನ್ಯಾಯಾಲಯವು ಕಸಾಪ ಚುನಾವಣಾ ಪ್ರಕ್ರಿಯೆಯನ್ನು ಎರಡು ತಿಂಗಳ ಅವಧಿಯೊಳಗೆ ಪೂರ್ಣಗೊಳಿಸಲು ನ್ಯಾ.ಕೃಷ್ಣಕುಮಾರ ಅವರಿದ್ದ ಏಕ ಸದಸ್ಯ ಪೀಠ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಉಚ್ಛನ್ಯಾಯಾಲಯದ ನಿರ್ದೇಶನದ ಪ್ರತಿಯನ್ನು ಪಡೆದ ಬಳಿಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಹಾಗೂ ಚುನಾವಣಾಧಿಕಾರಿಗಳಿಗೆ ಈ ಕುರಿತು ಮತ್ತೊಮ್ಮೆ ಲಿಖಿತ ಮನವಿ ಸಲ್ಲಿಸಲಾಗುವುದು. ನ್ಯಾಯಾಲಯದ ಈ ನಿರ್ದೇಶನ ಕನ್ನಡ ಕಟ್ಟುವ ಕೆಲಸಕ್ಕೆ ಬಲ ತುಂಬಿದೆ. ಅಡಳಿತ ಮಂಡಳಿಯೇ ಇಲ್ಲದೇ ಅಧಿಕಾರಿಗಳಿಂದ ಹೆಚ್ಚಿನ ಕೆಲಸಗಳು ಸದ್ಯಕ್ಕೆ ಕಸಾಪದಿಂದ ಸಾಧ್ಯವಿಲ್ಲ. ಹೀಗಾಗಿ ಕೂಡಲೆ ಸರ್ಕಾರ ಮತ್ತು ಚುನಾವಣಾ ಆಯೋಗ ಕ್ರಮ ವಹಿಸಬೇಕು ಎಂದು ಕಸಾಪ ಕೇಂದ್ರ ಸಮಿತಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ  ಶೇಖರಗೌಡ ಮಾಲಿಪಾಟೀಲ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next