Advertisement

ಮಕ್ಕಳ ಬೇಸಿಗೆ ಶಿಬಿರಕ್ಕೆ ಸಜ್ಜಾದ ಕಸಾಪ

03:31 PM Apr 18, 2022 | Team Udayavani |

ಗದಗ: ಮಹಾಮಾರಿ ಕೋವಿಡ್‌ನಿಂದಾಗಿ ಮಕ್ಕಳ ನಲಿ, ಕಲಿಕೆಯನ್ನು ಬಹುತೇಕ ಮೊಬೈಲ್‌ ತಂತ್ರಜ್ಞಾನ ಆವರಿಸಿದ ಹಿನ್ನೆಲೆಯಲ್ಲಿ ಮಕ್ಕಳನ್ನು ಸಾಹಿತ್ಯಿಕ ಓದು, ಬರಹದ ಜೊತೆಗೆ ಕಲಾ ಚಟುವಟಿಕೆಗಳಲ್ಲಿ ತೊಡಗಿಸಲು ಬೇಸಿಗೆ ಶಿಬಿರ ಆಯೋಜಿಸುವ ಮೂಲಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ರಾಜ್ಯದಲ್ಲೇ ಮೊದಲ ಬಾರಿಗೆ ಹೊಸ ಪ್ರಯೋಗಕ್ಕೆ ಕೈಹಾಕಿದೆ.

Advertisement

ಕೋವಿಡ್‌ ಸಂಕಷ್ಟದ ದಿನಗಳಲ್ಲಿ ಮಕ್ಕಳ ಆನ್‌ಲೈನ್‌ ಕಲಿಕೆಗೆ ವೇದಿಕೆಯಾಗಿದ್ದ ಮೊಬೈಲ್‌ ತಂತ್ರಜ್ಞಾನದಿಂದ ಅವರ ಸೃಜನಾತ್ಮಕ ಕಲಿಕೆ, ಓದು, ಕನ್ನಡ ಸಾಹಿತ್ಯ ಅಭಿರುಚಿಗೆ ತೊಡಕಾಗುತ್ತಿದೆ. ಪ್ರಾಥಮಿಕ ಶಾಲಾ ಹಂತದಲ್ಲಿ ಈಗಾಗಲೇ ಭೌತಿಕ ತರಗತಿ, ಪರೀಕ್ಷೆಗಳು ಮುಗಿದಿದ್ದರಿಂದ ಮಕ್ಕಳು ಮತ್ತೆ ಟಿವಿ ಮತ್ತು ಮೊಬೈಲ್‌ ಗೀಳಿಗೆ ಅಂಟಿಕೊಳ್ಳುತ್ತಿದ್ದಾರೆ.

ಬೇಸಿಗೆಯ ಬಿಸಿಲಿನ ನೆಪ ನೀಡುವ ಕೆಲ ಮಕ್ಕಳು ದಿನವಿಡೀ ಮೊಬೈಲ್‌ನಲ್ಲೇ ಕಾಲ ಕಳೆಯುತ್ತಿದ್ದಾರೆ. ಇದರಿಂದ ಚಿಂತನಶೀಲತೆ ಹಾಗೂ ರಚನಾತ್ಮಕ ಕ್ರಿಯೆಗಳಿಂದ ದೂರ ಉಳಿಯುವಂತಾಗುತ್ತದೆ ಎಂಬುದು ಆತಂಕಕಾರಿ ಸಂಗತಿ.

ಮಕ್ಕಳನ್ನು ಮುಕ್ತರಾಗಿಸಲು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಪ್ರತೀ ತಾಲೂಕು ಸಮಿತಿಯಿಂದ ಮೂರು ದಿನಗಳ ಬೇಸಿಗೆ ಶಿಬಿರ ಹಮ್ಮಿಕೊಂಡಿದ್ದು, ಕಥೆ ರಚನೆ, ಕವಿತೆ ರಚನೆ ಹೀಗೆ ಎರಡು ವಿಭಾಗದಲ್ಲಿ ಸಾಹಿತ್ಯಿಕ ಚಟುವಟಿಕೆಗಳನ್ನು ಏರ್ಪಡಿಸಿದೆ. ಆ ಮೂಲಕ ಮಕ್ಕಳಲ್ಲಿ ಸಾಹಿತ್ಯ ಓದುವ ಅಭಿರುಚಿಯನ್ನು ಹೆಚ್ಚಿಸುವ ಜೊತೆಗೆ ಅವರಲ್ಲಿನ ಸಾಹಿತ್ಯ ರಚನೆಯ ಕಲೆಯನ್ನು ಗುರುತಿಸಿ, ಪ್ರೋತ್ಸಾಹಿಸುವುದು ಶಿಬಿರದ ಉದ್ದೇಶ.

ಶಿಬಿರದಲ್ಲಿ ದಿನ ಏನೇನಿರುತ್ತೆ? 10 ರಿಂದ 20 ವರ್ಷದೊಳಗಿನ ಮಕ್ಕಳು ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದ್ದು, ಮೊದಲ ಹಂತದಲ್ಲಿ ತಾಲೂಕು, ಬಳಿಕ ಜಿಲ್ಲಾ ಮಟ್ಟದ ಶಿಬಿರ ನಡೆಸಲು ಉದ್ದೇಶಿಸಲಾಗಿದೆ.

Advertisement

ಮೂರು ದಿನಗಳ ಶಿಬಿರದಲ್ಲಿ ಮೊದಲ ದಿನ ಸಾಂಕೇತಿಕವಾಗಿ ಉದ್ಘಾಟನೆ ನೆರವೇರಿಸಿ, ಚಟುವಟಿಕೆಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತದೆ. ಸಾಹಿತ್ಯ ಶಿಬಿರವನ್ನು ಕಥೆ ಮತ್ತು ಕವನ ರಚನಾ ವಿಭಾಗವನ್ನಾಗಿ ವಿಭಾಗಿಸಿದ್ದು, ಸಂಪನ್ಮೂಲ ವ್ಯಕ್ತಿಗಳಿಂದ ಶಬ್ಧ, ವಾಕ್ಯಗಳ ರಚನೆ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತದೆ.

ಕಥಾ ರಚನೆಯ ವಿನ್ಯಾಸ, ಬಳಸುವ ಭಾಷೆ, ಕಥೆಯ ವಿನ್ಯಾಸ, ಕಥೆಯ ಆರಂಭ, ಮಧ್ಯ, ಮುಕ್ತಾಯ, ಕಥಾ ರಚನೆಯಲ್ಲಿ ಪ್ರಾವೀಣ್ಯತೆ ಹೊಂದಿರುವ ಸಾಹಿತಿಗಳಿಂದ ಉಪನ್ಯಾಸ ನೀಡಲಾಗುತ್ತದೆ. ಅದರ ಜೊತೆ ಜೊತೆಗೆ ಮಕ್ಕಳಿಂದ ಕತೆ ಕೇಳುವ ಮೂಲಕ ಅವರಲ್ಲಿನ ಲೋಪಗಳನ್ನು ತಿದ್ದುವ ಕೆಲಸ ನಡೆಯಲಿದೆ.

ಕಲಾ ಶಿಬಿರದಲ್ಲಿ ಚಿತ್ರ ಕಲೆ ಮತ್ತು ಆರ್ಟ್‌ ವಿಭಾಗವನ್ನಾಗಿ ವಿಂಗಡಿಸಿದೆ. ಓರಿಗ್ಯಾಮಿ, ಕ್ಲೇ ಆರ್ಟ್‌, ಆರ್ಟ್‌ ಕ್ರಾಫ್ಟ್‌, ಜಾನಪದ ಹಾಡು ಮತ್ತು ನೃತ್ಯದ ಕುರಿತು ನುರಿತ ಕಲಾವಿದರಿಂದ ತರಬೇತಿ ಒದಗಿಸಲು ಕಸಾಪ ಉದ್ದೇಶಿಸಿದೆ.

ಮೇ ಅಂತ್ಯದವರೆಗೆ ಶಿಬಿರ ಪೂರ್ಣ: ಮಕ್ಕಳ ಬೇಸಿಗೆ ರಜೆಯ ಸದ್ವಿನಿಯೋಗಕ್ಕೆ ಕಸಾಪ ತಾಲೂಕುವಾರು ಮೇ 15ರ ಒಳಗಾಗಿ ಶಿಬಿರ ಏರ್ಪಡಿಸುತ್ತಿದೆ. ಅದರ ಭಾಗವಾಗಿ ಏ.17 ರಿಂದ 19ರ ವರೆಗೆ ಕಸಾಪ ಗದಗ ತಾಲೂಕು ಸಮಿತಿ ಶಿಬಿರ ಆರಂಭಗೊಂಡಿದೆ.

ಮುಂಡರಗಿ ತಾಲೂಕಿನಲ್ಲಿ ಏ.26, 27, 28 ರಂದು ಏರ್ಪಡಿಸಿದೆ. ಇನ್ನುಳಿದ ತಾಲೂಕುಗಳ ದಿನಾಂಕ ನಿಗದಿಯಾಗಲಿದೆ. ಒಟ್ಟಾರೆ ಮೇ ಅಂತ್ಯದೊಳಗೆ ಶಿಬಿರ ನಡೆಸಲು ತಾಲೂಕು ಸಮಿತಿಗಳಿಗೆ ನಿರ್ದೇಶನ ನೀಡಲಾಗಿದೆ.

ಆನಂತರ ತಾಲೂಕುವಾರು ಪ್ರತಿಭಾನ್ವಿತರನ್ನು ಗುರುತಿಸಿ, ಅವರಿಗೆ ಮೇ ಅಂತ್ಯದಲ್ಲಿ ಜಿಲ್ಲಾ ಮಟ್ಟದಲ್ಲಿ ವಸತಿ ಸಹಿತ ಶಿಬಿರ ಏರ್ಪಡಿಸುವ ಚಿಂತನೆ ಇದೆ ಎನ್ನುತ್ತಾರೆ ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದ ಗೌಡ ಪಾಟೀಲ.

ಮಕ್ಕಳು ಮೂಲತಃ ಸೃಜನಶೀಲರು. ಸದಾ ಹೊಸತನಕ್ಕೆ ಹಾತೊರೆಯುವ ಕುಸುಮಗಳು. ಪರೀಕ್ಷೆ ಮತ್ತು ಅಂಕಗಳಿಗೆ ಪ್ರಾಧಾನ್ಯತೆ ಹೆಚ್ಚಿದಷ್ಟೂ ಸೃಜನಶೀಲತೆ ಕಡಿಮೆಯಾಗುತ್ತದೆ. ಅಕ್ಷರಗಳನ್ನು ಕಲಿತ ಮಕ್ಕಳು ತಮ್ಮ ದಿನನಿತ್ಯದ ಸಂಗತಿಗಳನ್ನು ಬರಹ ಮತ್ತು ಮಾತಿನ ಮೂಲಕ ಅಭಿವ್ಯಕ್ತಿಸಿದಾಗ ಭಾಷೆ ಮೊನಚುಗೊಳ್ಳುತ್ತದೆ. ಸಾಹಿತ್ಯದ ಬಗ್ಗೆ ಅಭಿರುಚಿಯನ್ನು ಹೆಚ್ಚಿಸಲು ಬೇಸಿಗೆ ಶಿಬಿರ ಸಂಘಟಿಸಲಾಗುತ್ತಿದೆ. ವಿದ್ಯಾರ್ಥಿಗಳು ಬರೆದ ಅತ್ಯುತ್ತಮ ಕಥೆ ಮತ್ತು ಕವಿತೆಗಳನ್ನು ಸಂಗ್ರಹಿಸಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಾತಿನಿಧಿಕ ಸಂಕಲನ ಹೊರತರಲು ಉದ್ದೇಶಿಸಲಾಗಿದೆ. ಇದು ವಿದ್ಯಾರ್ಥಿಯ ಸಾಹಿತ್ಯ ಯಾತ್ರೆಗೆ ಮುನ್ನುಡಿ ಎಂದು ಭಾವಿಸಿದ್ದೇನೆ. –ವಿವೇಕಾನಂದ ಗೌಡ ಪಾಟೀಲ ಕಸಾಪ ಜಿಲ್ಲಾಧ್ಯಕ್ಷರು

ಗದಗ ತಾಲೂಕು ಸಾಹಿತ್ಯ ಪರಿಷತ್ತಿನಿಂದ ಆರಂಭಗೊಂಡಿರುವ ಬೇಸಿಗೆ ಶಿಬಿರಕ್ಕೆ ನಿರೀಕ್ಷೆ ಮೀರಿ 98 ವಿದ್ಯಾರ್ಥಿಗಳು ಆಗಮಿಸಿದ್ದರು. ಅವರನ್ನು 4 ತಂಡಗಳಲ್ಲಿ ವಿಂಗಡಿಸಲಾಗಿತ್ತು. ಶಿಬಿರಕ್ಕೆ ಕೈಜೋಡಿಸಿರುವ ಕೆಲ ಸ್ವಯಂಸೇವಾ ಸಂಸ್ಥೆಗಳು, ಚಿತ್ರಕಲೆಗೆ ಅಗತ್ಯವಿರುವ ಲೇಖನ ಸಾಮಗ್ರಿಗಳನ್ನು ಒದಗಿಸಿದ್ದರು. ಶಿಬಿರಾರ್ಥಿಗಳು ಅತ್ಯಂತ ಉಲ್ಲಾಸದೊಂದಿಗೆ ಶಿಬಿರವನ್ನು ಅನುಭವಿಸಿದರು. ಇತ್ತೀಚಿನ ದಿನಗಳಲ್ಲಿ ವಿವಿಧ ಸಂಸ್ಥೆಗಳು ಬೇಸಿಗೆ ಶಿಬಿರದ ನೆಪದಲ್ಲಿ ಸಾವಿರಾರು ರೂ. ಪೀಕುತ್ತಿರುವಾಗ ಕಸಾಪ ಉಚಿತ ಶಿಬಿರ ಆಯೋಜಿಸಿರುವುದು ಸ್ವಾಗತಾರ್ಹ. ವಿಜಯಲಕ್ಷೀ¾, ಸೇಂಟ್‌ ಜಾನ್ಸ್‌ ಶಾಲೆ ಶಿಕ್ಷಕಿ

ಬೇಸಿಗೆ ಶಿಬಿರದ ವೇಳಾಪಟ್ಟಿ ಗದಗ: ಬೇಸಿಗೆ ಸಾಹಿತ್ಯ ಶಿಬಿರದ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದ್ದು, ಮುಂಡರಗಿ ತಾಲೂಕಿನಲ್ಲಿ ಏ.25 ರಿಂದ 27, ರೋಣ, ಶಿರಹಟ್ಟಿಯಲ್ಲಿ ಮೇ 5 ರಿಂದ 7, ರೋಣದಲ್ಲಿ ಮೇ 6 ರಿಂದ 8 ರ ವರೆಗೆ ನಡೆಯಲಿದೆ. ಇನ್ನುಳಿದ ತಾಲೂಕುಗಳ ದಿನಾಂಕವೂ ನಿಗದಿಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next