ನರಗುಂದ: ಅಚ್ಚ ಕನ್ನಡದ ಮೊದಲ ದೊರೆ ಮಯೂರ ವರ್ಮ, ಕನ್ನಡದ ಮೊದಲ ಕವಿ ಪಂಪ, ಕನ್ನಡದ ಮೊದಲ ಶಾಸನ ಹಲ್ಮಿಡಿ ಶಾಸನ, ತ್ರಿಪದಿ ಛಂದಸ್ಸಿನ ಮೊದಲ ಬಳಕೆ ಬಾದಾಮಿಯ ಕಪ್ಪೆ ಆರ್ಯಭಟ್ಟನ ಶಾಸನ, ಕನ್ನಡದ ಮೊದಲ ಲಕ್ಷಣ ಗ್ರಂಥ ಕವಿರಾಜ ಮಾರ್ಗ…ಕನ್ನಡದ ಇತಿಹಾಸ ಸಾರುವ ಈ ಪದಗಳು ಇಲ್ಲೇಕೆ ಅಂತೀರಾ.. ಹೌದು, ಇಂಥದೊಂದು ಪ್ರಯೋಗದ ಮೂಲಕ ಸುಮಾರು ಎರಡು ದಶಕಗಳಿಂದ ಮಾತೃಭಾಷೆ ಕನ್ನಡದ ಕೈಂಕರ್ಯದಲ್ಲಿ ತೊಡಗಿಸಿಕೊಂಡು ಈ ಭಾಗದಲ್ಲಿ “ಕನ್ನಡ ಮಠ’ ಎಂದೇ ಗುರುತಿಸಿಕೊಂಡ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಪಾಠಶಾಲೆ ವಟುವಿನೋರ್ವನ ಕಲ್ಯಾಣ
ಮಹೋತ್ಸವದ ಆಮಂತ್ರಣ ಪತ್ರಿಕೆ ಯಲ್ಲಿ ಮೂಡಿಬಂದ ಕನ್ನಡದ ಕಂಪಿದು.
ಕನ್ನಡದ ವಿಷಯ ಬಂದಾಗ ನಿರಂತರ ಧ್ವನಿಯೆತ್ತಿ, ಕನ್ನಡಕ್ಕೆ ಧಕ್ಕೆ ಬಂದಾಗ ಸದಾ ಹೋರಾಟದ ಅಡಿಯಿಡುವ ದೊರೆಸ್ವಾಮಿ ವಿರಕ್ತಮಠದ ಕನ್ನಡ ಸ್ವಾಮೀಜಿ ಎಂದೇ ಗುರುತಿಸಿಕೊಂಡ ಶ್ರೀ ಶಾಂತಲಿಂಗ ಸ್ವಾಮೀಜಿ ಶಿಷ್ಯರು, ಶ್ರೀಮಠದ ವ್ಯವಸ್ಥಾಪಕರೂ ಆದ ಮಹಾಂತೇಶ ಶಾಸ್ತ್ರಿಗಳು ಹಿರೇಮಠ ಅವರ ಕಲ್ಯಾಣ ಮಹೋತ್ಸವದ ಆಮಂತ್ರಣ ಪತ್ರಿಕೆಯ ಪರಿಯಿದು.
ಕನ್ನಡದ ಮೊದಲುಗಳು: ವಿವಾಹ ಆಮಂತ್ರಣ ಪತ್ರಿಕೆಯ ಹಿಂಭಾಗ ಪುಟದಲ್ಲಿ ಕನ್ನಡ ಭಾಷೆಯ ಬಗ್ಗೆ ನಿಮಗೆಷ್ಟು ಗೊತ್ತು?, ಕನ್ನಡದ ಮೊದಲುಗಳು ಎಂಬ ಶೀರ್ಷಿಕೆಯಡಿ 32 ವಿವಿಧ ಕನ್ನಡದ ಮೊದಲುಗಳ ಮಾಹಿತಿ ಮುದ್ರಿಸಲಾಗಿದೆ. ಆ ಮೂಲಕ ಪೂಜ್ಯರು ಕನ್ನಡದ ಬಗೆಗಿನ ತಮ್ಮ ಬದ್ಧತೆಯನ್ನು ಮೆರೆದಿದ್ದಾರೆ.
ಈ ಮೂಲಕ ಶ್ರೀಮಠದ ಶಿಷ್ಯನ ಕಲ್ಯಾಣ ಮಹೋತ್ಸವದಲ್ಲೂ ಕನ್ನಡ ಭಾಷೆ ಮೇಳೈಸುವ ಮೂಲಕ ದೊರೆಸ್ವಾಮಿ ವಿರಕ್ತಮಠ ಕನ್ನಡದ ಕಂಪು ಹೊರ ಸೂಸುವ ಜೊತೆಗೆ ಕನ್ನಡಿಗರಿಗೆ ಕನ್ನಡದ ಮಹಿಮೆ ಸಾರುವ ಪ್ರಯತ್ನ ಮಾಡಿದ್ದು ಗಮನಾರ್ಹ. ನ.26ರಂದು ಶ್ರೀಮಠದ ಆವರಣ ದಲ್ಲಿ ಧಾರವಾಡ ಜಿಲ್ಲೆ ಗೋವನಕೊಪ್ಪ ಮೂಲದ ಗುರಯ್ಯ ಹಿರೇಮಠ ಹಾಗೂ ಗೌರಮ್ಮ ಹಿರೇಮಠ ದಂಪತಿ ಸುಪುತ್ರರಾದ ಮಹಾಂತೇಶ ಹಾಗೂ ಮಹೇಶ ಸಹೋದರರ ವಿವಾಹ ಸಮಾರಂಭ ಏರ್ಪಡಿಸಲಾಗಿದೆ.ಗದಗತೋಂಟದಾರ್ಯಮಠದ ಜ|ಡಾ|ಸಿದ್ಧರಾಮ ಮಹಾ ಸ್ವಾಮಿಗಳು ಸೇರಿದಂತೆ 8 ಜನ ವಿವಿಧ ಪೂಜ್ಯರ ಸಾನ್ನಿಧ್ಯದಲ್ಲಿ ಕಲ್ಯಾಣ ಮಹೋತ್ಸವ ಜರುಗಲಿದೆ.
ಕರ್ನಾಟಕದ ಪ್ರತಿಯೊಬ್ಬ ಕನ್ನಡಿಗರಿಗೂ ಕನ್ನಡವೇ ಧರ್ಮ. ಕನ್ನಡವೇ ಜಾತಿ. ನಮ್ಮ ಯಾವುದೇ ಕಾರ್ಯಕ್ರಮದಲ್ಲಿ ಕನ್ನಡದ ಸಂಖ್ಯೆ, ಭಾಷೆ ಬಳಸಿದರೆ ಕನ್ನಡ ಭಾಷೆ ಬೆಳೆಯುತ್ತದೆ. ಕನ್ನಡ ಉಳಿಸಿ ಬೆಳೆಸುವ ಕಾರ್ಯ ಕನ್ನಡಿಗರಿಂದಲೇ ಆಗಬೇಕು.
ಶ್ರೀ ಶಾಂತಲಿಂಗ
ಸ್ವಾಮೀಜಿ, ದೊರೆಸ್ವಾಮಿ
ವಿರಕ್ತಮಠ, ಭೈರನಹಟ್ಟಿ.
ಸಿದ್ಧಲಿಂಗಯ್ಯ ಮಣ್ಣೂರಮಠ