Advertisement

Kannada Rajyotsava: ಕನ್ನಡ ನಮ್ಮೊಳಗೆ ಅಂತರ್ಗತವಾದಾಗಲೇ ನಿಜವಾದ ರಾಜ್ಯೋತ್ಸವ

04:03 PM Oct 29, 2023 | Team Udayavani |

ಕನ್ನಡ ಅಂದ್ರೆ ಮೊದಲು ನನಗೆ ನೆನಪಾಗುವುದು ನಮ್ಮೂರು. ಕರ್ನಾಟಕ ಅಂದ್ರೆ ಮೊದಲು ನೆನಪಾಗೋದು ಮೈಸೂರು ಮಹಾರಾಜರು. ವಿದ್ಯಾರ್ಥಿ ಜೀವನದಿಂದ ವೃತ್ತಿ ಜೀವನದ ಇಲ್ಲಿಯವರೆಗೂ ಕನ್ನಡವೇ ನನ್ನ ನಿತ್ಯದ ಉಸಿರು. ನನ್ನ ಜೀವನದಲ್ಲಿ ಮಾತುಕತೆ, ಕೃತಿ, ಕಾರ್ಯ ಎಲ್ಲವೂ ಕನ್ನಡದಲ್ಲೇ ನಡೆಯತ್ತಿರುವುದರಿಂದ, ಅದರ ಮೇಲೇ ನಿಂತಿರುವುದರಿಂದ ಕನ್ನಡವನ್ನಾಗಲಿ ಅಥವಾ ಕರ್ನಾಟಕವನ್ನಾಗಲಿ ನನ್ನ ಜೀವನದಿಂದ ಹೊರಗೆ ಕಲ್ಪಿಸಿಕೊಳ್ಳುವೂ ಕೂಡ ಅಸಾಧ್ಯ.

Advertisement

ಇಂದು ಕನ್ನಡ ಮತ್ತು ಕರ್ನಾಟಕದ ಅಸ್ವಿತ್ವಕ್ಕೆ ಅದರದ್ದೇ ಆದ ಸವಾಲುಗಳಿವೆ. ನಮ್ಮ ದೈನಂದಿನ ಬದುಕು ದಿನದಿಂದ ದಿನಕ್ಕೆ ಕಂಗ್ಲಿಷ್‌ ಮಯವಾಗುತ್ತಿದ್ದು, ಇದರಿಂದ ಮುಂದಿನ ಪೀಳಿಗೆಯನ್ನು ಹೇಗೆ ಪಾರು ಮಾಡಬೇಕು ಎಂಬುದೇ ನಮ್ಮ ಮುಂದಿರುವ ದೊಡ್ಡ ಪ್ರಶ್ನೆ.

ಸ್ವತಂತ್ರ್ಯ ಭಾರತದ ಈ ಎಪ್ಪತ್ತೈದು ವರ್ಷಗಳಲ್ಲಿ ಯಾವುದೇ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರಗಳು ಕನ್ನಡ ಪ್ರಾದೇಶಿಕ ಭಾಷೆಯನ್ನು ಉಳಿಸುವ, ಬೆಳೆಸುವ ಗಂಭೀರ ಪ್ರಯತ್ನ ಮಾಡಿಲ್ಲ. ವಿದ್ಯಾಭ್ಯಾಸದಲ್ಲಿ ಕನ್ನಡವನ್ನು ಕಡೆಗಣಿಸುವ ಕೆಲಸ ಎಲ್ಲ ಸರ್ಕಾರಗಳು ಮಾಡಿವೆ. ಸರ್ಕಾರಿ ನೌಕರಿಯಲ್ಲೂ ಕನ್ನಡದ ಕಡೆಗಣನೆಯಾಗುತ್ತಿದೆ. ಅನ್ನ, ಅಕ್ಷರ, ಆರೋಗ್ಯ ಎಲ್ಲೂ ಕನ್ನಡಕ್ಕೆ ನೆಲೆ ಇಲ್ಲದಂತಾಗಿದೆ. ಅದರ ಪರಿಣಾಮವನ್ನು ಇಂದು ನಾವೆಲ್ಲರೂ ಎದುರಿಸುತ್ತಿದ್ದೇವೆ. ಕನ್ನಡ ಮತ್ತು ಕರ್ನಾಟಕದ ವಿಷಯದಲ್ಲಿ ರಾಜಕೀಯ ಪಕ್ಷಗಳು, ರಾಜಕೀಯ ನಾಯಕರ ನಡೆಗಿಂತ, ಸಾಂಸ್ಕೃತಿಕ ಹೆಜ್ಜೆಗಳನ್ನು ಇಡಬೇಕಾದ ಅವಶ್ಯಕತೆ ಹೆಚ್ಚಾಗಿದೆ.

ಕನ್ನಡವನ್ನು ವಿಭಜಿಸುವುದಕ್ಕಿಂತ ಕೂಡಿಸುವ ಕೆಲಸ ತುರ್ತಾಗಿ ಆಗಬೇಕಿದೆ. ಕನ್ನಡಕ್ಕೆ ಗೌರವ ಮತ್ತು ಗರ್ವ ಎರಡೂ ಸಿಕ್ಕಾಗ ಮಾತ್ರ ಕನ್ನಡದ ಬಗ್ಗೆ ಸಹಜವಾಗಿಯೇ ಆತ್ಮಾಭಿಮಾನ ಜಾಗೃತವಾಗುತ್ತದೆ. ರಾಜಕೀಯ ನಾಯಕರ ಬಾಯಿ ಮಾತಿನ ಆಶ್ವಾಸನೆ ಮತ್ತು ಭರವಸೆಗಳನ್ನು ಬದಿಗಿಟ್ಟು, ನಿಜವಾಗಿಯೂ ಆಂತರ್ಯದಲ್ಲಿ ಕನ್ನಡ ವ್ಯಕ್ತಿ ಮತ್ತು ವ್ಯಕ್ತಿತ್ವಗಳು ಕನ್ನಡದ ಕೈಂಕರ್ಯಕ್ಕೆ ಮುಂದಾಗಬೇಕು, ನೈಜ ಅಭಿಮಾನದ ಕನ್ನಡ ಕಾರ್ಯಕರ್ತರ ಪಡೆ ಸಿದ್ಧವಾಗಬೇಕು. ಹಾಗಾದಾಗ ಮಾತ್ರ ನಿಜವಾಗಿಯೂ ಕರ್ನಾಟಕದಲ್ಲಿ ಕನ್ನಡ ಅಂತರ್ಗತವಾಗುತ್ತದೆ.

-ಟಿ. ಎಸ್‌. ನಾಗಾಭರಣ, ಹಿರಿಯ ಚಿತ್ರ ನಿರ್ದೇಶಕ ಮತ್ತು ರಂಗಕರ್ಮಿ

Advertisement
Advertisement

Udayavani is now on Telegram. Click here to join our channel and stay updated with the latest news.

Next