ರಾಮನಗರ: ರಾಮ್‌ಘಡ್ ರಾಕರ್ಸ್ ತಂಡ ಕೈಲಾಂಚ ಹೋಬಳಿಯ ಹುಣಸನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೂನಗಲ್ ಬೆಟ್ಟಕ್ಕೆ ಚಾರಣ ಕೈಗೊಂಡು ಕರ್ನಾಟಕ ರಾಜ್ಯೋತ್ಸವ ಆಚರಿಸಿದರು. ಬೆಟ್ಟದ ತುದಿ ತಲುಪಿದ ಸುಮಾರು 50 ಮಂದಿಯ ತಂಡ ಕನ್ನಡ ನಾಡಗೀತೆ ಹಾಡುತ್ತ ಕನ್ನಡ ಧ್ವಜವನ್ನು ಆರೋಹಿಸಿ ರಾಜೋತ್ಸವ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು, ಸಸಿ ನೆಟ್ಟು , ಸಹಿ ಹಂಚಿ ಸಂಭ್ರಮಿಸಿದರು.
ರಾಮ್‌ಘಡ್ ರಾಕರ್ ತಂಡ ಪ್ರತಿ ವಾರ ಒಂದೊಂದು ಬೆಟ್ಟಕ್ಕೆ ಚಾರಣ ಹೋಗುತ್ತದೆ. ಅಲ್ಲಿರುವ ತ್ಯಾಜ್ಯ ತೆಗೆದು ಸ್ವತ್ಛ ಮಾಡಿ ಸೀಡ್ ಬಾಲ್ (ಬೀಜದ ಉಂಡೆ) ಗಳನ್ನು ಎಸೆದು ದೈಹಿಕ ವ್ಯಾಮಾ ಯದ ಜೊತೆಗೆ ಪರಿಸರ ಕಾಳಜಿಯನ್ನು ಮೆರೆಯುತ್ತಿದೆ. ರಾಮ್‌ಘಡ್ ರಾಕರ್ ತಂಡದ ಈ ಕಾರ್ಯ ಜಿಲ್ಲಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಮ್‌ಘಡ್ ರಾಕರ್ ತಂಡದ ಅಧ್ಯಕ್ಷ ಎಲ್.ಪ್ರಭಾಕರ್, ತಂಡದಲ್ಲಿ ಹಿರಿಯರು, ಕಿರಿಯರು, ಬಾಲಕಿಯರು, ಮಹಿಳೆಯರು ಸೇರಿದಂತೆ 50 ಜನ ಸದಸ್ಯರಿದ್ದು, ಪ್ರತಿ ಭಾನುವಾರ ತಾಲೂಕಿನ ಒಂದೊಂದು ಬೆಟ್ಟಕ್ಕೆ ಚಾರಣ ಹೋಗಿ, ಪ್ರಕೃತಿಯ ಸೊಬಗು ಆಸ್ವಾದಿಸುವ ಜೊತೆಗೆ ಸ್ವತ್ಛತಾ ಶ್ರಮದಾನ ಕೈಗೊಳ್ಳುತ್ತಿರುವುದಾಗಿ ತಿಳಿಸಿದರು.
ಈಗಾಗಲೆ ತಮ್ಮ ತಂಡ 10 ಚಾರಣಗಳನ್ನು ಪೂರೈಸಿದೆ. ಇನ್ನು ಮುಂದುವರೆಯಲಿದೆ. ತಮ್ಮ ತಂಡದಈ ಕಾರ್ಯವನ್ನು ಗಮನಿಸಿ ತಂಡ ಸೇರಲು ಇನ್ನು ಕೆಲವರು ಇಚ್ಚಿಸಿದ್ದಾರೆ. ಆದರೆ ತಾವು ಗುಂಪನ್ನು 50 ಸದಸ್ಯರಿಗೆ ಮಾತ್ರ ಸೀಮಿತ ಮಾಡಿಕೊಳ್ಳಲು ಉದ್ದೇಶಿಸಿರುವುದಾಗಿ ತಿಳಿಸಿದರು. ಐತಿಹಾಸಿಕ ಸಂಗತಿಗಳ ಅಧ್ಯಯನ: ತಾಲೂಕಿನ ಕೆಲವು ಬೆಟ್ಟಗಳು ಐತಿಹಾಸಿಕವಾಗಿ, ಪ್ರಾಕೃತಿಕವಾಗಿ, ಭೌಗೋಳಿಕವಾಗಿ ಪೌರಾಣಿಕವಾಗಿ ಪ್ರಸಿದ್ಧಿ ಪಡೆದಿವೆ.
ಅಂತಹ ಬೆಟ್ಟದ ವಿಚಾರಗಳನ್ನು ಸದಸ್ಯರು ವಿನಿಯಮ ಮಾಡಿಕೊಂಡು, ಹುಟ್ಟೂರಿನ ಬೆಟ್ಟ, ಗುಡ್ಡಗಳ ಬಗ್ಗೆ ಸ್ವಯಂ ಜಾಗೃತಿ ಮೂಡಿಸಿಕೊಳ್ಳುತ್ತಿರುವುದಾಗಿ ತಿಳಿಸಿದರು. ತಮ್ಮ ತಂಡ ಕೈಗೊಳ್ಳುವ ಚಾರಣದ ಬಗ್ಗೆ ಮತ್ತು ಆ ಬೆಟ್ಟದ ಬಗ್ಗೆ ಮಾಹಿತಿ ಇರುವ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗುತ್ತಿದ್ದು, ಅನ್ಯ ಜಿಲ್ಲೆಗಳಿಂದಲೂ ಬೆಟ್ಟಗಳಿಗೆ ಬರಲು ಆಸಕ್ತಿ ತೋರುತ್ತಿದ್ದಾರೆ ಎಂದರು.
50 ಸಾವಿರ ವೀಕ್ಷಣೆ ರಾಮ್‌ಘಡ್ ರಾಕರ್ ತಂಡದ ಮತ್ತೂಬ್ಬ ಪ್ರಮುಖ ಕೆ.ವಿ. ಉಮೇಶ್ ಮಾತನಾಡಿ, ಪ್ರವಾಸಿಗರ ತಾಣವಾಗಿರುವ ಕೂನಗಲ್ ಬೆಟ್ಟಕ್ಕೆ ತಮ್ಮದು 10ನೇ ಚಾರಣ. ಮೇಲಾಗಿ ರಾಜ್ಯೋತ್ಸವವನ್ನು ಅತ್ಯಂತ ಉತ್ಸಾಹದಿಂದ ಕೈಗೊಂಡಿದ್ದೇವೆ. ರಾಮನಗರದ ಪ್ರಸಿದ್ಧ ಬೆಟ್ಟಗಳ ಚಾರಣ ನಂತರ ಜಿಲ್ಲೆಯ ಇತರ ಪ್ರಸಿದ್ದ ಬೆಟ್ಟಗಳಿಗೆ ಚಾರಣ ಹೋಗುವುದಾಗಿ ತಿಳಿಸಿದರು. ಸಾಮಾಜಿಕ ಜಾಲತಾಣದಲ್ಲಿ ತಮ್ಮ ವೀಡಿಯೋಗಳು ಸುಮಾರು 50 ಸಾವಿರ ವೀಕ್ಷಣೆಗಳಾಗಿವೆ ಎಂದರು.
ಚಾರಣ ತಂಡದ ಪ್ರಮುಖರಾದ ಆರ್.ಶಿವರಾಜು, ಎನ್.ರವಿಕುಮಾರ್, ನವೀನ್, ಪರಮೇಶ್, ಗುರು, ಗಂಗಾಧರ್, ಬಿ.ಗೋಪಾಲ್, ಗುರುಮೂರ್ತಿ ಮುಂತಾದವರು ಇದ್ದರು.