Advertisement

Kannada rajyotsava: ಹೊರಗಿನವರಿಗೆ ಮೊದಲು ಕನ್ನಡ ಕಲಿಸಿ

10:36 AM Nov 02, 2023 | Team Udayavani |

ಹನೂರು: ಗಡಿ ತಾಲೂಕಿನಲ್ಲಿ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದ್ದು, ಕನ್ನಡವನ್ನು ಉಳಿಸುವನಿಟ್ಟಿನಲ್ಲಿ ಹೆಚ್ಚಿನ ಒತ್ತು ನೀಡಬೇಕಿದೆ. ಹೊರರಾಜ್ಯದಿಂದ ಬಂದವರಿಗೆ ಮೊದಲಿಗೆ ಕನ್ನಡ ಭಾಷೆಯನ್ನುಕಲಿಸಬೇಕಿದೆ ಎಂದು ಶಾಸಕ ಎಂ.ಆರ್‌.ಮಂಜುನಾಥ್‌ ಹೇಳಿದರು.

Advertisement

ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ತಾ. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ವರನಟ ಡಾ.ರಾಜ್‌ಕುಮಾರ್‌ ಜನಿಸಿದ್ದು ನಮ್ಮ ಕ್ಷೇತ್ರದ ಸಿಂಗಾ ನಲ್ಲೂರು ಗ್ರಾಮದಲ್ಲಿ. ಇಂತಹ ಗಡಿ ತಾಲೂಕಿನಲ್ಲಿ ಸಂಭ್ರಮ ಸಡಗರದಿಂದ ರಾಜ್ಯೋತ್ಸವ ವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಕನ್ನಡವನ್ನು ಉಳಿಸುವ ನಿಟ್ಟಿನಲ್ಲಿ ನಾವೆಲ್ಲಾ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.

ಹೊರರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಬಂದವರಿಗೆ ಪ್ರಥಮವಾಗಿ ಕನ್ನಡ ಭಾಷೆಯನ್ನು ಕಲಿಸಬೇಕಿದೆ. ನಮ್ಮ ಮುಂದಿನ ಪೀಳಿಗೆಗೆ ಕನ್ನಡ ಭಾಷೆಯನ್ನು ಉಳಿಸಬೇಕಾಗಿದ್ದು ನಾವೆಲ್ಲ ಬದ್ಧರಾಗಿ ಕನ್ನಡವನ್ನು ಉಳಿಸುವ ಕೆಲಸ ಮಾಡೋಣ. ಇಂದಿನ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಟಿಬೇಟಿಯನ್‌ ಪ್ರಜೆಗಳೂ ಕೂಡಭಾಗವಹಿಸಿ ವಿವಿಧ ಸಾಂಸ್ಕೃತಿಕ ಕಲೆಗಳನ್ನು ಪ್ರದರ್ಶಿಸಿರುವುದು ಒಂದು ಸಂದೇಶ ನೀಡಿದೆ ಎಂದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ 125ಕ್ಕೆ 125 ಅಂಕ ಪಡೆದ 5 ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ವಿವಿಧ ಶಾಲಾ ವಿದ್ಯಾರ್ಥಿಗಳು ಆಕರ್ಷಕ ನೃತ್ಯ ಮತ್ತು ದೇಶಭಕ್ತಿ ಗೀತೆಗಳಿಗೆ ನೃತ್ಯ ಪ್ರದರ್ಶಿಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಟಿಬೇಟಿಯನ್‌ ಮಹಿಳೆ ಮುಂಗಾರು ಮಳೆ ಚಿತ್ರದ ಅನಿಸುತ್ತಿದೆ ಯಾಕೋ ಇಂದು ಗೀತೆಯನ್ನು ಸಂಪೂರ್ಣವಾಗಿ ಹಾಡಿ ಸಭಿಕರನ್ನುರಂಜಿಸಿದರು.

ಕಾರ್ಯಕ್ರಮದ ಹಿನ್ನೆಲೆ ಹನೂರು ತಹಶೀಲ್ದಾರ್‌ ವೈ.ಕೆ.ಗುರುಪ್ರಸಾದ್‌ ಧ್ವಜಾರೋಹಣ ನೆರವೇರಿಸಿ ಧ್ವಜಗೌರವ ಸಲ್ಲಿಸಿದರು.

Advertisement

ಮುಖ್ಯ ಭಾಷಣಕಾರ ಸ್ವಾಮಿ ಪೊನ್ನಾಚಿ, ಪಪಂ ಸದಸ್ಯರಾದ ಸುದೇಶ್‌, ಹರೀಶ್‌ ಕುಮಾರ್‌, ಗಿರೀಶ್‌, ಮುಮ್ತಾಜ್‌ ಬಾನು, ಪವಿತ್ರಾ, ಮಹೇಶ್‌ ನಾಯ್ಕ, ಆನಂದ್‌ಕುಮಾರ್‌, ಮಂಜುಳಾ, ನಟ ಪ್ರಥಮ್‌, ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜು, ತಾಪಂ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಉಮೇಶ್‌, ಕೃಷಿ ಇಲಾಖಾ ಉಪನಿರ್ದೇಶಕಿ ಸುಂದ್ರಮ್ಮ, ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆಯ ನವೀನ್‌ ಮಠದ್‌ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಇದ್ದರು.

ಸಂಭ್ರಮದ ಮೆರವಣಿಗೆ:

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ವಿವಿಧ ಕಲಾ ತಂಡಗಳ ಆಕರ್ಷಕ ಪ್ರದರ್ಶನದೊಂದಿಗೆ ಕನ್ನಡಾಂಬೆಯ ಭಾವಚಿತ್ರವನ್ನು ವಾಹನದಲ್ಲಿಟ್ಟು ಮೆರವಣಿಗೆ ನಡೆಸಲಾಯಿತು. ಪಟ್ಟಣದ ಎಪಿಎಂಸಿ ಪ್ರಾಂಗಣದಿಂದ ಅಂಬೇಡ್ಕರ್‌ ವೃತ್ತದ ಮೂಲಕ ಮುಖ್ಯ ವೃತ್ತದವರೆಗೆ ಸಾಗಿ ಪ್ರಾಥಮಿಕ ಶಾಲಾ ಆವರಣದಲ್ಲಿ ಮೆರವಣಿಗೆ ಸಂಪನ್ನವಾಯಿತು. ಮೆರವಣಿಗೆಯಲ್ಲಿ ವಿವಿಧಕಲಾತಂಡಗಳು ಆಕರ್ಷಕ ಪ್ರದರ್ಶನ ನೀಡಿದವು. ಕಳಸ ಹೊತ್ತ ಹೆಣ್ಣುಮಕ್ಕಳು, ವೀರಗಾಸೆ ಕುಣಿತ ತಂಡ ಮೆರವಣಿಗೆಗೆ ರಂಗು ತಂದವು.ಟಿಬೇಟಿಯನ್‌ ಮಹಿಳೆಯರು ಮತ್ತು ಮಕ್ಕಳ ವಿವಿಧ ಕಲಾತಂಡಗಳು ಆಕರ್ಷಕ ಪ್ರದರ್ಶನ ನೀಡಿ ರಂಜಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next