ಪಣಜಿ: ಗೋವಾ ರಾಜ್ಯದಲ್ಲಿ ಲಕ್ಷಾಂತರ ಕನ್ನಡಿಗರು ನೆಲೆಸಿದ್ದಾರೆ. ಗೋವಾದ 40 ವಿಧಾನಸಭಾ ಚುನಾವಣಾ ಕ್ಷೇತ್ರಗಳ ಪೈಕಿ ಸುಮಾರು 8 ರಿಂದ 9 ಕ್ಷೇತ್ರಗಳಲ್ಲಿ ಕನ್ನಡಿಗರ ಮತವೇ ನಿರ್ಣಾಯಕವಾಗಿದೆ. ಬರುವ ಲೋಕಸಭಾ ಚುನಾವಣೆಯಲ್ಲಿ ಗೋವಾದ ಎರಡೂ ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಲು ಪ್ರಯತ್ನಿಸಬೇಕು ಎಂದು ಬಿಜೆಪಿ ಗೋವಾ ರಾಜ್ಯಾಧ್ಯಕ್ಷ ಸದಾನಂದ ತಾನಾವಡೆ ನುಡಿದರು.
ಗೋವಾ ರಾಜಧಾನಿ ಪಣಜಿಯಲ್ಲಿ ಆಯೋಜಿಸಿದ್ದ ಗೋವಾ ರಾಜ್ಯ ಬಿಜೆಪಿ ಕರ್ನಾಟಕ ಘಟಕದ ಉಧ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಗೋವಾ ರಾಜ್ಯದಲ್ಲಿ ಈಗಾಗಲೇ ಸೌತ್ ಇಂಡಿಯನ್ ಸೆಲ್ ಕಾರ್ಯನಿರ್ವಹಿಸುತ್ತಿದೆ. ಆದರೆ ಗೋವಾದಲ್ಲಿ ಲಕ್ಷಾಂತರ ಕನ್ನಡಿಗರು ನೆಲೆಸಿದ್ದು ಗೋವಾದಲ್ಲಿ ಬಿಜೆಪಿಯ ಕರ್ನಾಟಕದ ಪ್ರತ್ಯೇಕ ಸೆಲ್ ಮಾಡಲು ನಮ್ಮ ಪಕ್ಷ ನಿರ್ಧರಿಸಿ ಇಂದು ಅಧಿಕೃತ ಉದ್ಘಾಟನೆಯನ್ನೂ ನೆಎವೇರಿಸಲಾಗುತ್ತಿದೆ. ಇಲ್ಲಿ ನಮ್ಮಲ್ಲಿ ಬೇಧಭಾವ ಇರಬಾರದು. ನಾವು ಭಾಷೆಯನ್ನು ಮೊದಲು ಗೌರವಿಸಬೇಕು. ಭಾಷೆ ಉಳಿದಾಗ ಸಂಸ್ಕೃತಿ ಉಳಿಯುತ್ತದೆ. ಭಾರತ ವಿವಿಧ ಭಾಷೆಗಳಲ್ಲಿ ಏಕತೆ ಸಾಧಿಸಿದ ರಾಷ್ಟ್ರ. ಸಬ್‍ಕಾ ಸಾಥ್ ಸಬಕಾ ವಿಕಾಸ್ ಸಬಕಾ ಪ್ರಯಾಸ್ ಎಂಬ ಬಿಜೆಪಿಯ ಘೋಷವಾಕ್ಯದಂತೆ ಎಲ್ಲರೂ ಒಗ್ಗಟ್ಟಾಗಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ಸೆಲ್ ಕೆಲಸ ಮಾಡಬೇಕು ಎಂದು ಸದಾನಂದ ತಾನಾವಡೆ ಕನ್ನಡಿಗರಲ್ಲಿ ಮನವಿ ಮಾಡಿದರು.
ಗೋವಾ ರಾಜ್ಯ ಬಿಜೆಪಿ ಕರ್ನಾಟಕ ಘಟಕದ ಕನ್‍ವಿನರ್ ಆಗಿ ಅಧೀಕೃತವಾಗಿ ಘೋಷಣೆಯಾದ ಗೋವಾದ ಉದ್ಯಮಿ ಮುರಳಿ ಮೋಹನ್ ಶೆಟ್ಟಿ ಮಾತನಾಡಿ-ಗೋವಾದ ದೈನಿಂದಿನ ಕೆಲಸ ಕಾರ್ಯದಲ್ಲಿ ಮತ್ತು ಗೋವಾದ ಅಭಿವೃದ್ಧಿಯಲ್ಲಿ ಒಬ್ಬ ಮುನ್ಸಿಪಲ್ ಕಾರ್ಮಿಕನಾಗಿ, ಒಬ್ಬ ಗುತ್ತಿಗೆದಾರನಾಗಿ, ಕಾರ್ಖಾನೆಯಲ್ಲಿ ಕಾರ್ಮಿಕನಿಂದ ಹಿಡಿದು ಉನ್ನತ ಮಟ್ಟದ ಅಧಿಕಾರಿಯವರೆಗೂ ಗೋವಾದ ಅಭಿವೃದ್ಧಿಗೆ ಕನ್ನಡಿಗರ ಪಾತ್ರ ಇದೆ. ಇಂದು ಅಧೀಕೃತವಾಗಿ ಬಿಜೆಪಿ ಕರ್ನಾಟಕ ಸೆಲ್ ಉದ್ಘಾಟನೆಯಾಗಿದೆ. ನಾವು ಬಿಜೆಪಿ ಸರ್ಕಾರದ ಜೊತೆ ಕೆಲಸ ಮಾಡಿ ನಂತರ ಗೋವಾದಲ್ಲಿರುವ ಕನ್ನಡಿಗರ ಸಮಸ್ಯೆಗಳಿಗೂ ಒಗ್ಗಟ್ಟಾಗಿ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.
ಗೋವಾ ರಾಜ್ಯ ಬಿಜೆಪಿ ಕರ್ನಾಟಕ ಘಟಕದ ಕನ್‍ವಿನರ್ ಆಗಿ ಮುರಳಿ ಮೋಹನ್ ಶೆಟ್ಟಿ, ಉತ್ತರ ಗೋವಾ ಜಿಲ್ಲಾ ಅಧ್ಯಕ್ಷರಾಗಿ ಹನುಮಂತಪ್ಪ ಶಿರೂರ್ ರೆಡ್ಡಿ, ದಕ್ಷಿಣ ಗೋವಾ ಜಿಲ್ಲಾಧ್ಯಕ್ಷರಾಗಿ ಗಿರಿರಾಜ್ ಭಂಡಾರಕರ್, ಉತ್ತರ ಗೋವಾ ಕಾರ್ಯದರ್ಶಿಯಾಗಿ ನಿಂಗಪ್ಪ ಪಾಟೋಳೆ, ದಕ್ಷಿಣ ಗೋವಾ ಕಾರ್ಯದರ್ಶಿಯಾಗಿ ರಾಜೇಶ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ಬಿಜೆಪಿ ಗೋವಾ ರಾಜ್ಯ ಕನ್ನಡಿಗರ ಕೋರ್ ಕಮಿಟಿ ಸದಸ್ಯರಾಗಿ- ಶ್ರೀನಿವಾಸ್ ಪೈ ಗಂಗೊಳ್ಳಿ, ಶ್ರೀಕಾಂತ ಲೋಣಿ, ಪ್ರಶಾಂತ್ ಜೈನ್ ಸಿ.ಎ, ಶಿವಾನಂದ ಬಿಂಗಿ, ಚಂದ್ರಹಾಸ ಅಮಿನ್, ಭರತೇಶ ಗುಳಣ್ಣವರ್, ಶಿವಪ್ಪ ಮಸಿಬಿನಾಳ, ಲೋಕೇಶ ರಾಠೋಡ್, ಮಲ್ಲಿಕಾರ್ಜುನ ಬದಾಮಿ, ಅಶೋಕ ಶೆಟ್ಟಿ, ವಿಶ್ವ ಎಲಿಗಾರ, ಸುರೇಶ ಹಡಪದ ರವರನ್ನು ಆಯ್ಕೆ ಮಾಡಲಾಯಿತು.
ಗಿರಿರಾಜ್ ಭಂಡಾರಕರ್ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು, ಶ್ರೀನಿವಾಸ್ ಪೈ ಪರಿಚಯಿಸಿದರು, ಅರುಣಕುಮಾರ್ ಕಾರ್ಯಕ್ರಮ ನಿರೂಪಿಸಿದರು, ಶಿವಾನಂದ ಬಿಂಗಿ ವಂದನಾರ್ಪಣೆಗೈದರು. ಕಾರ್ಯಕ್ರಮದಲ್ಲಿ ಗೋವಾ ಬಿಜೆಪಿ ನಾರ್ತ ಇಂಡಿಯನ್ ಸೆಲ್ ಕನ್‍ವಿನರ್ ರಾಕೇಶ್ ಅಗರವಾಲ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು.