Advertisement

ದ.ಕ.: ಕನ್ನಡದಲ್ಲಿ ರಾಜ್ಯೋತ್ಸವ ಪರೇಡ್‌ ಕಮಾಂಡ್‌

09:35 AM Nov 01, 2018 | |

ಮಂಗಳೂರು: ಸಾಮಾನ್ಯವಾಗಿ ಕವಾಯತು (ಪರೇಡ್‌) ವೇಳೆ ಆಂಗ್ಲ ಭಾಷೆಯಲ್ಲಿ ಆಜ್ಞೆ (ಕಮಾಂಡ್‌)ಗಳನ್ನು
ನೀಡಲಾಗುತ್ತದೆ. ಆದರೆ ಮಂಗಳೂರಿನಲ್ಲಿ ಮೊದಲ ಬಾರಿಗೆ ಕನ್ನಡದಲ್ಲಿ ಪರೇಡ್‌ ಕಮಾಂಡ್‌ ನೀಡುವ ಪ್ರಯತ್ನಕ್ಕೆ ಮಂಗಳೂರು ಹಾಗೂ ಜಿಲ್ಲಾ ಪೊಲೀಸರು ಮುಂದಾಗಿದ್ದಾರೆ. ಹೀಗಾಗಿ ನ. 1ರಂದು ನಗರದ ನೆಹರೂ ಮೈದಾನದಲ್ಲಿ ನಡೆಯುವ ಜಿಲ್ಲಾ ಮಟ್ಟದ ರಾಜ್ಯೋತ್ಸವದಲ್ಲಿ ಕನ್ನಡದಲ್ಲೇ ಕವಾಯತು ಆಜ್ಞೆಗಳು ಕೇಳಿ ಬರಲಿವೆ.

Advertisement

ರಾಜ್ಯದಲ್ಲಿ ಕನ್ನಡವನ್ನು ಆಡಳಿತ ಭಾಷೆಯಾಗಿ ಘೋಷಣೆ ಮಾಡಲಾಗಿತ್ತಾದರೂ ಎಲ್ಲ ಕಡೆಗೆ ಸಮರ್ಪಕವಾಗಿ ಜಾರಿ ಮಾಡುವಲ್ಲಿ ಸರಕಾರ ಹಿಂದುಳಿದಿತ್ತು. ಇದೀಗ ಪೊಲೀಸರ ಕಮಾಂಡ್‌ ಕೂಡ ಕನ್ನಡದಲ್ಲೇ ನೀಡುವ ಮೂಲಕ ಕನ್ನಡ ಭಾಷೆಯನ್ನು ಇನ್ನಷ್ಟು ಬಲಿಷ್ಠ ಗೊಳಿಸುವಲ್ಲಿ ಪೊಲೀಸರ ಸಹಕಾರವೂ ಇರಲಿದೆ. 

ರಾಜ್ಯದ ಎರಡನೇ ಜಿಲ್ಲೆ
ಕನ್ನಡದಲ್ಲಿ ಪೊಲೀಸ್‌ ಕವಾಯತು ಆಜ್ಞೆಗಳನ್ನು ನೀಡುವ ರಾಜ್ಯದ ಎರಡನೇ ಜಿಲ್ಲೆ ದ.ಕ.ವಾಗಲಿದೆ. ಮೊದಲ ಬಾರಿಗೆ ಬಳಸಿದ ಹೆಗ್ಗಳಿಕೆ ಬೆಳಗಾವಿಗೆ ಸಲ್ಲುತ್ತದೆ. ಜಿಲ್ಲೆಯ ಎಸ್‌ಪಿ ಡಾ| ರವಿಕಾಂತೇಗೌಡ ಅವರು ಬೆಳಗಾವಿಯಲ್ಲಿ ಮೊದಲ ಬಾರಿ ಪ್ರಯೋಗ ಮಾಡಿ ಪ್ರಶಂಸೆಗೆ ಪಾತ್ರರಾಗಿದ್ದರು. ಈಗ ದ.ಕ. ಜಿಲ್ಲೆಗೆ ವರ್ಗಾವಣೆಗೊಂಡ ಬಳಿಕ ಇಲ್ಲಿಯೂ ಈ ಪ್ರಯೋಗಕ್ಕೆ ಸಿದ್ಧತೆ ನಡೆಸಿದ್ದಾರೆ.

ರಾಜ್ಯೋತ್ಸವ ಕವಾಯತು ಸಂದರ್ಭ ಒಟ್ಟು 26 ಆದೇಶ (ಕಮಾಂಡ್‌) ಹಾಗೂ ನಾಲ್ಕು ವರದಿ (ರಿಪೋರ್ಟ್‌) ಇರಲಿದೆ. ಹಿಂದೆ ಇದನ್ನು ಆಂಗ್ಲಭಾಷೆಯಲ್ಲಿಯೇ ನೀಡಲಾಗುತ್ತಿತ್ತು. ಈ ಬಾರಿ ಈ ಎಲ್ಲ ಕಮಾಂಡ್‌ಗಳು ಕನ್ನಡ ಭಾಷೆಯಲ್ಲಿ ಇರಲಿವೆ. ಉದಾಹರಣೆಗೆ “ಪರೇಡ್‌ ಸಾವ ಧಾನ್‌’ ಎನ್ನುವ  ಪದಕ್ಕೆ ಬದಲಾಗಿ “ಪರೇಡ್‌ ಸಾವಧಾನ’ ಎನ್ನುವ ಪದ ಬಳಸಲಾಗಿದೆ. “ಪರೇಡ್‌ ವಿಶ್ರಾಂ’ ಬದಲಿಗೆ “ಪರೇಡ್‌ ವಿಶ್ರಾಂತಿ’, “ಕ್ವಿಕ್‌ ಮಾರ್ಚ್‌’ಗೆ ಬದಲಾಗಿ “ಶೀಘ್ರ ನಡೆ’, “ಓಪನ್‌ ಆರ್ಡರ್‌ ಮಾರ್ಚ್‌’ ಬದಲಿಗೆ ವಿರಳ ಕ್ರಮದಲ್ಲಿ ನಿಲ್ಲಿ’, ಔಟ್‌ ಆರ್ಡರ್‌ ಮಾರ್ಚ್‌ನಲ್ಲಿ’ ಎಡದವರು ಎಡಕ್ಕೆ, ಬಲದವರು ಬಲಕ್ಕೆ, ಎಡಬಲಕ್ಕೆ ತಿರುಗಿ’ ಹೀಗೆ ಪದಗಳನ್ನು ಆಯ್ಕೆ ಮಾಡಲಾಗಿದೆ. “ಪರೇಡ್‌’ ಎನ್ನುವ ಪದ ಜನರಿಗೆ ಪರಿಚಿತವಾಗಿರುವುದರಿಂದ ಅದನ್ನು ಬದಲಿಸಿಲ್ಲ.

ಬೆಳಗಾವಿ ಬಳಿಕ ದ.ಕ.
ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಪೊಲೀಸ್‌ ಕವಾಯತು ಆಜ್ಞೆಗಳನ್ನು ಕನ್ನಡ ಭಾಷೆಯಲ್ಲಿ ಸಿದ್ಧಪಡಿಸಿದ್ದೇವೆ. ಈ ಹಿಂದೆ ನಾನು ಬೆಳಗಾವಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅಲ್ಲಿ ಬಳಸಲಾಗಿತ್ತು. ಅದಕ್ಕೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕೆಲ ಪದಗಳು ಜನ ಬಳಕೆಯಲ್ಲಿ ಇರುವುದರಿಂದ ಅದನ್ನು ಹಾಗೆಯೇ ಇಡಲಾಗಿದೆ . 
ಡಾ| ಬಿ.ಆರ್‌. ರವಿಕಾಂತೇ ಗೌಡ, ಎಸ್ಪಿ

Advertisement

ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next