Advertisement
ಈ ಸಂಬಂಧ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಮತ್ತು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಅವರು ಮಾಹಿತಿ ನೀಡಿದ್ದಾರೆ. ಈ ಮೊದಲು ಇದೇ 27ಕ್ಕೆ ಬಂದ್ ಆಚರಿಸಲು ನಿರ್ಧರಿಸಲಾಗಿತ್ತು. ಆದರೆ, ಸಾಲುಸಾಲು ರಜೆಗಳಿರುವುದರಿಂದ ಎರಡು ದಿನ ಮೊದಲು ಅಂದರೆ 25ಕ್ಕೇ ಬಂದ್ ಆಚರಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ಈ ಮೊದಲು ಜ. 27ರಂದು ಬಂದ್‌ಗೆ ಕರೆ ನೀಡಲಾಗಿತ್ತು. ಆದರೆ, ಸಾಲು ಸಾಲು ರಜೆ ಇರುವುದರಿಂದ ಬಂದ್ ಪರಿಣಾಮಕಾರಿಯಾಗಿ ಆಗುವುದಿಲ್ಲವೆಂದು ಮಹದಾಯಿ ಹೋರಾಟಗಾರರು ಮನವಿ ಮಾಡಿದ ಹಿನ್ನೆಲೆಯಲ್ಲಿ 25ಕ್ಕೆ ಕರೆ ನೀಡಲಾಗಿದೆ. ಇದಕ್ಕೆ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಚಿತ್ರರಂಗ ಸೇರಿದಂತೆ ರಾಜ್ಯದ ನೂರಾರು ಕನ್ನಡಪರ ಸಂಘಟನೆಗಳು ಕೈಜೋಡಿಸಿವೆ. ಅಂದು ಬೆಳಿಗ್ಗೆ 10ಕ್ಕೆ ನಗರದ ಪುರಭವನದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹೊರಡಲಿದ್ದು, ಲಕ್ಷ ಜನ ಭಾಗಿಯಾಗುವ ನಿರೀಕ್ಷೆ ಇದೆ ಎಂದು ಹೇಳಿದರು.
Related Articles
Advertisement
ಇದಲ್ಲದೆ, ಜ. 28ರಂದು ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಅಂದು ಪ್ರಧಾನಿ ಸಭೆಯಲ್ಲಿ ಕಪ್ಪುಬಾವುಟ ಪ್ರದರ್ಶಿಸುವ ಮೂಲಕ ಪ್ರತಿಭಟಿಸಲಾಗುವುದು. ಈ ಹಿಂದೆ ಹಲವು ಬಾರಿ ಪ್ರಧಾನಿಗಳು ರಾಜ್ಯಕ್ಕೆ ಆಗಮಿಸಿದ್ದಾರೆ. ಆದರೆ, ಯಾವತ್ತೂ ಮಹದಾಯಿ ಮತ್ತು ಕಳಸಾ-ಬಂಡೂರಿ ಬಗ್ಗೆ ಚಕಾರ ಎತ್ತಿಲ್ಲ. ಈ ಬಾರಿ ತಮ್ಮ ನಿಲುವು ಸ್ಪಷ್ಟಪಡಿಸಲೇಬೇಕು ಎಂದು ಪಟ್ಟುಹಿಡಿಯಲಾಗುವುದು. ಇದಕ್ಕೆ ಎಲ್ಲ ಕನ್ನಡಪರ ಸಂಘಟನೆಗಳು ಪ್ರತಿಷ್ಠೆ ಬದಿಗೊತ್ತಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಮಹದಾಯಿ ಬಗ್ಗೆ ಮೌನವೇಕೆ?ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಮಾತನಾಡಿ, ಬರೀ ಪಕ್ಷ ಸಂಘಟನೆ ಬಗ್ಗೆ ಬಿಜೆಪಿ ನಾಯಕರು ಮಾತನಾಡುತ್ತಿದ್ದಾರೆ. ಮಹದಾಯಿ ಕುರಿತು ಯಾಕೆ ಮೌನ? ಈಗಲಾದರೂ ಪ್ರಧಾನಿಗಳು ಮೌನ ಮುರಿಯಬೇಕು. ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ಮಹದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ತಮಗೆ ಬರೆದ ಪತ್ರವನ್ನು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಬೈಬಲ್ ರೀತಿಯಲ್ಲಿ ಓದಿದರು. ಆದರೆ, ಈಗ ಪರಿಕ್ಕರ್ ನಿಲುವು ಬದಲಾಗಿದೆ. ಈ ಬಗ್ಗೆ ಯಡಿಯೂರಪ್ಪ ಉತ್ತರಿಸಬೇಕು ಎಂದು ಒತ್ತಾಯಿಸಿದ ಸಾ.ರಾ. ಗೋವಿಂದು, 25ರಂದು ಯಾವುದೇ ಚಿತ್ರೀಕರಣ ಮತ್ತು ಚಿತ್ರಪ್ರದರ್ಶನ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಶಿವರಾಮೇಗೌಡ, ಪದಾಧಿಕಾರಿಗಳಾದ ಕೆ.ಆರ್. ಕುಮಾರ್, ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು. ಸುಪ್ರೀಂಗೆ ಮೊರೆ
ಮಹದಾಯಿ ವಿಚಾರವಾಗಿ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್, ಯಡಿಯೂರಪ್ಪ ಅವರಿಗೆ ಬರೆದ ಪತ್ರವನ್ನು ಆಧರಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ವಾಟಾಳ್ ನಾಗರಾಜ್ ತಿಳಿಸಿದರು. ನೀರು ಬಿಡುವ ಸಂಬಂಧ ಪತ್ರದಲ್ಲಿ ಒಂದು ರೀತಿ ಹೇಳಿಕೆ ನೀಡಿದ್ದರೆ, ಈಗ ಮತ್ತೂಂದು ರೀತಿ ಹೇಳಿಕೆ ನೀಡುತ್ತಿದ್ದಾರೆ. ಕನ್ನಡಿಗರೊಂದಿಗೆ ಗೋವಾ ಮುಖ್ಯಮಂತ್ರಿಗಳು ಚೆಲ್ಲಾಟ ಆಡುತ್ತಿದ್ದಾರೆ. ಪತ್ರವನ್ನು ತೆಗೆದುಕೊಂಡು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆಹೋಗಬೇಕು. ಇಲ್ಲವಾದರೆ, ನಾವೇ ಕೋರ್ಟ್ ಮೊರೆಹೋಗುತ್ತೇವೆ ಎಂದು ಹೇಳಿದರು. ದಿನಕ್ಕೊಂದು ಹೇಳಿಕೆ ನೀಡುತ್ತಿರುವ ಮನೋಹರ್ ಪರಿಕ್ಕರ್ ಅವರಿಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಲೂ ಯೋಗ್ಯತೆ ಇಲ್ಲ. ಸರ್ಕಾರವನ್ನು ಪ್ರಧಾನಿ ವಜಾಗೊಳಿಸಿ, ರಾಜ್ಯಕ್ಕೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.