ಬೆಳಗಾವಿ: ರಾಜ್ಯ ಸರ್ಕಾರ ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚಿಸಿದ್ದಕ್ಕೆ, ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಹಾಗೂ ಮರಾಠಾ ಸಮುದಾಯದವರು ಅಳವಡಿಸಿದ್ದ ಮರಾಠಿ ಭಾಷೆಯ ಕೃತಜ್ಞತಾ ನಾಮಫಲಕಕ್ಕೆ ಕನ್ನಡ ಸಂಘಟನೆಯವರು ಕಪ್ಪು ಮಸಿ ಬಳಿದಿದ್ದಾರೆ.
ಕನ್ನಡ ಸಂಘಟನೆಯ ಇಬ್ಬರು ಕಾರ್ಯಕರ್ತರು ಕೈಯಲ್ಲಿ ಮಸಿ ಹಿಡಿದುಕೊಂಡು ಬಂದು ನಗರದ ಖಾನಾಪುರ ರಸ್ತೆಯ ಅನಗೋಳ ಕ್ರಾಸ್‌ನಲ್ಲಿ ಅಳವಡಿಸಿದ್ದ ನಾಮ ಫಲಕಕ್ಕೆ ಮಸಿ ಬಳಿದಿದ್ದಾರೆ. ಮರಾಠಿ ಭಾಷೆಯಲ್ಲಿದ್ದ ಈ ಫಲಕದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಶಾಸಕ ಅಭಯ ಪಾಟೀಲ, ಮರಾಠಾ ಸಮುದಾಯದ ಮುಖಂಡರ ಭಾವಚಿತ್ರಗಳಿವೆ. ಇದಕ್ಕೆ ಮಸಿ ಬಳಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕನ್ನಡ ಸಂಘಟನೆಯ ಕಾರ್ಯಕರ್ತರಿಬ್ಬರು ಹೆಗಲಿಗೆ ಕೆಂಪು-ಹಳದಿ ಶಲ್ಯಾ ಹಾಕಿಕೊಂಡು, ಕೈಯಲ್ಲಿ ಕಪ್ಪು ಮಸಿ ಹಿಡಿದುಕೊಂಡು ನಾಮಫಲಕದತ್ತ ನುಗ್ಗಿದ್ದಾರೆ. ನಂತರ ಫಲಕದ ಮೇಲೆ ಕಪ್ಪು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಸಿ ಬಳಿಯುವುದನ್ನು ಇನ್ನೊಬ್ಬ ಕಾರ್ಯಕರ್ತ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದಾನೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಜೈಶ್ ಉಗ್ರರ 26/11 ಮಾದರಿ ದಾಳಿ ಸಂಚು ವಿಫಲ: ನಗ್ರೋಟಾ ಎನ್ ಕೌಂಟರ್ ಬಗ್ಗೆ ಮೋದಿ
ಮರಾಠಾ ಸಮುದಾಯದ ಅಭಿವೃದ್ಧಿ ಪ್ರಾಧಿಕಾರ ಹಾಗೂ ಇದಕ್ಕೆ 50 ಕೋಟಿ ರೂ. ನೀಡಲು ಸರ್ಕಾರ ನಿರ್ಧರಿಸಿದೆ. ಇದಕ್ಕೆ ಕನ್ನಡ ಸಂಘಟನೆಯವರು ವಿರೋಧ ವ್ಯಕ್ತಪಡಿಸುತ್ತಿದ್ದು, ಸದ್ಯ ಮರಾಠಿ ಫಲಕಕ್ಕೆ ಮಸಿ ಬಳಿದು ಈ ಮೂಲಕ ವಿರೋಧಿಸಿದ್ದಾರೆ.
ಇದೀಗ ಪೊಲೀಸರು ಈ ವಿಡಿಯೋವನ್ನು ಯಾವಾಗ ಚಿತ್ರಿಕರಿಸಲಾಗಿದೆ ಹಾಗೂ ಮಸಿ ಬಳಿದವರಾರು ಎಂಬುದರ ಕುರಿತಾಗಿ ಮಾಹಿತಿ ಕಲೆಹಾಕುತ್ತಿದ್ದಾರೆ.
ಇದನ್ನೂ ಓದಿ: ಅಂತಾರಾಷ್ಟ್ರೀಯ ತೈಲ ಬೆಲೆಯಲ್ಲಿ ಮತ್ತೆ ಏರಿಕೆ: ಪೆಟ್ರೋಲ್, ಡಿಸೇಲ್ ದರ ಹೆಚ್ಚಳ