Advertisement

ಯಜಮಾನ ದರ್ಶನ ಭಾಗ್ಯ

12:30 AM Mar 01, 2019 | |

ಕೊನೆಗೂ ಕಾಯುವಿಕೆಗೆ ತೆರೆಬಿದ್ದಿದೆ. ಇನ್ನೇನಿದ್ದರೂ ಥಿಯೇಟರ್‌ನತ್ತ ದಾಪುಗಾಲು ಹಾಕುವ ಸಮಯ …
– ಹೌದು, ದರ್ಶನ್‌ ಅಭಿಮಾನಿಗಳಿಗೆ ಹಬ್ಬ. ಅದಕ್ಕೆ ಕಾರಣ ದರ್ಶನ್‌ ನಟಿಸಿರುವ “ಯಜಮಾನ’ ಚಿತ್ರ ಇಂದು ಬಿಡುಗಡೆಯಾಗುತ್ತಿರುವುದು. ದರ್ಶನ್‌ ಸಿನಿಮಾ ಬಿಡುಗಡೆಯಾಗದೇ ಸುಮಾರು ಒಂದೂವರೆ ವರ್ಷ ದಾಟಿತ್ತು. ಒಬ್ಬ ಸ್ಟಾರ್‌ ನಟನ ಸಿನಿಮಾ ವರ್ಷಕ್ಕೆ ಒಂದಾದರೂ ಬಿಡುಗಡೆಯಾಗದೇ ಹೋದರೆ ಸಹಜವಾಗಿಯೇ ಅಭಿಮಾನಿಗಳು ನಿರಾಸೆಗೊಳ್ಳುತ್ತಾರೆ. ತಮ್ಮ ನೆಚ್ಚಿನ ನಟನ ಸಿನಿಮಾವನ್ನು ಯಾವಾಗ ಕಣ್ತುಂಬಿಕೊಳ್ಳುವುದು ಎಂದು ಬೇಸರಿಸಿಕೊಳ್ಳುತ್ತಾರೆ. ದರ್ಶನ್‌ ವಿಷಯದಲ್ಲಿ ಇದೇ ಆಗಿತ್ತು. “ತಾರಕ್‌’ ನಂತರ ದರ್ಶನ್‌ ಅವರ ಯಾವ ಸಿನಿಮಾವೂ ಬಿಡುಗಡೆಯಾಗಿರಲಿಲ್ಲ. “ಕುರುಕ್ಷೇತ್ರ’ವನ್ನು ಕಣ್ತುಂಬಿಕೊಳ್ಳಬಹುದೆಂದು ಕಾಯುತ್ತಿದ್ದ ಪ್ರೇಕ್ಷಕರಿಗೆ ಆ ಅವಕಾಶ ಸಿಗಲೇ ಇಲ್ಲ. ಹೀಗಿರುವಾಗಲೇ ಅಭಿಮಾನಿಗಳ ಮುಖದಲ್ಲಿ ನಗು ತಂದಿದ್ದು “ಯಜಮಾನ’. ಟೀಸರ್‌, ಹಾಡು, ಟ್ರೇಲರ್‌ … ಹೀಗೆ ಚಿತ್ರದ ಒಂದೊಂದೇ ಅಂಶಗಳು ಕುತೂಹಲ ಹೆಚ್ಚಿಸುತ್ತಾ ಹೋಗಿವೆ. ಅದೇ ಕಾರಣದಿಂದ ಅಭಿಮಾನಿಗಳು ಸಿನಿಮಾವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ದರ್ಶನ್‌ ಕೂಡಾ ಈ ಚಿತ್ರ ಅಭಿಮಾನಿಗಳ ನಿರೀಕ್ಷೆಯನ್ನು ಸುಳ್ಳು ಮಾಡಲ್ಲ ಎಂಬ ಭರವಸೆ ನೀಡಿದ್ದಾರೆ. “ಯಜಮಾನ’ ಒಂದು ಅದ್ಭುತವಾದ ಕಥೆ. ಇವತ್ತಿನ ಸಂದರ್ಭಕ್ಕೆ ತುಂಬಾ ಹೊಂದಿಕೆಯಾಗುತ್ತದೆ. ಅಭಿಮಾನಿಗಳು ಈ ಚಿತ್ರದ ಮೇಲೆ ಏನು ನಿರೀಕ್ಷೆ ಇಟ್ಟಿದ್ದಾರೋ ಆ ನಿರೀಕ್ಷೆ ಸುಳ್ಳಾಗಲ್ಲ’ ಎನ್ನುತ್ತಾರೆ ದರ್ಶನ್‌. ಈ ಚಿತ್ರದ ಮತ್ತೂಂದು ವಿಶೇಷವೆಂದರೆ “ಯಜಮಾನ’ ಮೂಲಕ ಸಂಗೀತ ನಿರ್ದೇಶಕ ಹರಿಕೃಷ್ಣ ನಿರ್ದೇಶಕರಾಗಿದ್ದಾರೆ. ಪಿ.ಕುಮಾರ್‌ ಜೊತೆ ಹರಿಕೃಷ್ಣ ಅವರಿಗೆ ನಿರ್ದೇಶನದ ಕ್ರೆಡಿಟ್‌ ಸಿಕ್ಕಿದೆ. ಸಹಜವಾಗಿಯೇ ಹರಿಕೃಷ್ಣ ಅವರಿಗೆ ಯಾಕೆ ನಿರ್ದೇಶಕನ ಕ್ರೆಡಿಟ್‌ ಎಂಬ ಪ್ರಶ್ನೆ ಇದೆ. ಇದಕ್ಕೂ ದರ್ಶನ್‌ ಉತ್ತರಿಸುತ್ತಾರೆ. “ಯಜಮಾನ’ ಚಿತ್ರದ ನಿರ್ದೇಶನದಲ್ಲಿ ಹರಿಕೃಷ್ಣ ಅವರ ಹೆಸರು ಸೇರುತ್ತಿದ್ದಂತೆ ಅನೇಕರಲ್ಲಿ ಯಾಕೆ ಎಂಬ ಪ್ರಶ್ನೆ ಇದೆ. ಈ ಸಿನಿಮಾಕ್ಕೆ ಓಂಕಾರ ಹಾಕಿದ ದಿನದಿಂದಲೂ ಹರಿಕೃಷ್ಣ ಸಂಪೂರ್ಣವಾಗಿ ತೊಡಗಿಸಿ ಕೊಂಡಿದ್ದಾರೆ. ಅವರ ಬೇರೆ ಕೆಲಸಗಳನ್ನು ಬದಿಗಿಟ್ಟು, ರಾತ್ರಿ ಹಗಲು ಈ ಚಿತ್ರಕ್ಕಾಗಿ ದುಡಿದಿದ್ದಾರೆ. ಈ ಚಿತ್ರಕ್ಕೆ ಅವರ ಪ್ರಯತ್ನ ಅಗಾಧವಾದುದು, ಅಮೋಘವಾದುದು ಮತ್ತು ತುಂಬಾ ದೊಡ್ಡದು. 

Advertisement

ಹಾಗಾಗಿ, ಇಡೀ ತಂಡ ಸೇರಿ ಚರ್ಚಿಸಿ, ಅವರಿಗೆ ಕ್ರೆಡಿಟ್‌ ಕೊಟ್ಟೆವು’ ಎನ್ನುವುದು ದರ್ಶನ್‌ ಮಾತು. ಇನ್ನು ಚಿತ್ರದ ಟೈಟಲ್‌ ಬಗ್ಗೆ ಮಾತನಾಡುವ ದರ್ಶನ್‌, “ಈ ಕಥೆಗೆ ಟೈಟಲ್‌ ತುಂಬಾ ಹೊಂದಿಕೆಯಾಗುತ್ತದೆ ಎಂಬ ಕಾರಣಕ್ಕೆ ಇಟ್ಟೆವು. ಅದು ಬಿಟ್ಟು ವಿಷ್ಣುವರ್ಧನ್‌ ಅವರ “ಯಜಮಾನ’ಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಯಾವತ್ತಿದ್ದರೂ ಅವರೇ “ಯಜಮಾನ’ ಎನ್ನುತ್ತಾರೆ ದರ್ಶನ್‌. “ಯಜಮಾನ’ ಒಂದು ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾವಾಗಿದ್ದು, ಹೈವೋಲ್ಟೆàಜ್‌ ಫೈಟ್‌ಗಳಿವೆ. ಚಿತ್ರದಲ್ಲಿರುವ ಫೈಟ್‌ಗಳಲ್ಲಿ ದರ್ಶನ್‌ ಅವರಿಗೆ ಸಾಹಸ ನಿರ್ದೇಶಕ ವಿನೋದ್‌ ಮಾಡಿರುವ ಫೈಟ್‌ ತುಂಬಾ ಇಷ್ಟವಂತೆ. “ಚಿತ್ರದಲ್ಲಿರುವ ಫೈಟ್‌ಗಳಲ್ಲಿ ನನಗೆ ವೈಯಕ್ತಿಕವಾಗಿ ಸ್ಟಂಟ್‌ ಮಾಸ್ಟರ್‌ ವಿನೋದ್‌ ಮಾಡಿರುವ ಫೈಟ್‌ ತುಂಬಾ ಇಷ್ಟ. ವಿನೋದ್‌ ನಮ್ಮ ಬೆಂಗಳೂರು ಹುಡುಗ. ನಾವು ಹೊರಗಡೆಯಿಂದ ಕರೆದುಕೊಂಡು ಬಂದವರಿಗೆ ಪ್ಯಾಂಟಮ್‌ ಕ್ಯಾಮರಾ ಸೇರಿದಂತೆ ಅವರು ಕೇಳಿದ್ದನ್ನು ಕೊಡುತ್ತೇವೆ. ಹಾಗಾಗಿ, ಶೈಲಜಾ ಮೇಡಂ ಅವರಲ್ಲಿ, ಫೈಟ್‌ ಸಿಚುವೇಶನ್‌ಗೆ ವಿನೋದ್‌ ಕೇಳುವುದನ್ನು ನೀಡಿ ಎಂದಿದ್ದೆ. ತುಂಬಾ ಅದ್ಭುತವಾಗಿ ಬಂದಿದೆ ಆ ಫೈಟ್‌’ ಎನ್ನುತ್ತಾರೆ. 

ಮೀಡಿಯಾ ಹೌಸ್‌ ಬ್ಯಾನರ್‌ನಲ್ಲಿ ಶೈಲಜಾ ನಾಗ್‌ ಹಾಗೂ ಬಿ.ಸುರೇಶ್‌ ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ತಾನ್ಯಾ, ದೇವರಾಜ್‌ ಸೇರಿದಂತೆ ಅನೇಕರು ನಟಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next