ದಿಢೀರ್ ಶ್ರೀಮಂತನಾಗಬೇಕು ಎಂಬ ದುರಾಸೆಯಿಂದ ಕಳ್ಳ ತನ ಮಾಡಲು ಮುಂದಾಗುವ ಹುಡುಗರ ಗುಂಪು, ಕಳ್ಳ ತನ ಮಾಡುವ ಆತುರದಲ್ಲಿ ಕೊಲೆಯೊಂದನ್ನು ಮಾಡಿ ರಕ್ತದ ಕಲೆಯನ್ನು ಕೈಗೆ ಅಂಟಿಸಿಕೊಳ್ಳುತ್ತದೆ. ಒಂದು ಕಳ್ಳ ತನ ಮತ್ತು ಕೊಲೆಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಒಂದರ ಹಿಂದೊಂದು ಹೆಣಗಳು ಉರುಳುತ್ತಾ ಹೋಗುತ್ತದೆ. ನೋಡ ನೋಡುತ್ತಿದ್ದಂತೆ, ರಕ್ತ ಚರಿತ್ರೆಯ ಒಂದೊಂದೆ ಪುಟಗಳು ತೆರೆಮೇಲೆ ತೆರೆದುಕೊಳ್ಳುತ್ತಾ, ಬಯಲು ಸೀಮೆಯ “ರಾಮಘಡ’ಕ್ಕೆ ಬಂದು ನಿಲ್ಲುತ್ತದೆ. ಅಂತಿಮವಾಗಿ ರಕ್ತ ಪಿಪಾಸುಗಳ ನೆತ್ತರ ದಾಹಕ್ಕೆ ಹೊಡೆದಾಟ, ಹೋರಾಟಕ್ಕೆ “ರಾಮಘಡ’ದಲ್ಲಿ ತಾರ್ಕಿಕ ಅಂತ್ಯ ಸಿಗುತ್ತದೆಯಾ? ಇಲ್ಲವಾ ಎಂಬುದನ್ನ ತಿಳಿಯಬೇಕಾದರೆ, “ಥಗ್ಸ್ ಆಫ್ ರಾಮಘಡ’ ಎಂಬ ನೆತ್ತರ ಕಹಾನಿಯ “ಚಿತ್ರ’ಣವನ್ನು ತೆರೆಮೇಲೆ ನೋಡಬೇಕು.
ಆರಂಭದಲ್ಲಿಯೇ ಸಿನಿಮಾದ ಪೋಸ್ಟರ್ ಮತ್ತು ಟ್ರೇಲರ್‌ನಲ್ಲಿ ತೋರಿಸಿರುವಂತೆ “ಥಗ್ಸ್ ಆಫ್ ರಾಮಘಡ’ ಬ್ಲಿಡ್ ಶೇಡ್ ಇರುವಂಥ ಸಿನಿಮಾ. ಕರ್ಮ ಸಿದ್ಧಾಂತದ ಎಳೆಯನ್ನು ಇಟ್ಟುಕೊಂಡು ಔಟ್ ಆ್ಯಂಡ್ ಔಟ್ ಕ್ರೈಂ ಕಂ ಆ್ಯಕ್ಷನ್-ಥ್ರಿಲ್ಲರ್ ಶೈಲಿಯಲ್ಲಿ ಇಡೀ ಸಿನಿಮಾವನ್ನು ತೆರೆಮೇಲೆ ತರಲಾಗಿದೆ. ಒಂದಷ್ಟು ಕೊಲೆ, ಕೊಲೆಗಾರರ ಹುಡುಕಾಟ, ಅದರ ಹಿಂದಿನ ಕಾರಣ ಎಲ್ಲವನ್ನೂ ಕುತೂಹಲಭರಿತವಾಗಿ ಕಟ್ಟಿಕೊಡುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಬಿಗಿಯಾದ ನಿರೂಪಣೆ, ಉತ್ತರ ಕರ್ನಾಟಕದ ಖಡಕ್ ಡೈಲಾಗ್ಸ್ ಸಿನಿಮಾದ ವೇಗವನ್ನು ಹೆಚ್ಚಿಸಿ ಪ್ರೇಕ್ಷಕರನ್ನು ಹಿಡಿದು ಕೂರಿಸುವಂತೆ ಮಾಡಿದೆ.
ಇನ್ನು ಇಲ್ಲಿಯವರೆಗೆ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟ ಅಶ್ವಿನ್ ಹಾಸನ್ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕುಟುಂಬದವರನ್ನು ಕಳೆದುಕೊಂಡ ದುಃಖೀಯಾಗಿ, ಅದಕ್ಕೆ ಕಾರಣರಾದವರನ್ನು ಹುಡುಕಿ ಪ್ರತಿಕಾರ ತೀರಿಸಿಕೊಳ್ಳುವ ವ್ಯಕ್ತಿಯಾಗಿ ಡಬಲ್ ಶೇಡ್ ನಲ್ಲಿರುವ ತಮ್ಮ ಪಾತ್ರವನ್ನು ಅಶ್ವಿನ್ ಯಶಸ್ವಿಯಾಗಿ ನಿಭಾಯಿಸಿ ಫುಲ್ ಮಾರ್ಕ್ಸ್ ಪಡೆದುಕೊಳ್ಳುತ್ತಾರೆ. ನವ ಪ್ರತಿಭೆ ಚಂದನ್ ರಾಜ್, ಮಹಾಲಕ್ಷ್ಮೀ ಪಾತ್ರಗಳು ಮನಸ್ಸಿನಲ್ಲಿ ಉಳಿಯುವಂತಿದೆ.
ಉಳಿದಂತೆ ಬಹುತೇಕ ಹೊಸ ಕಲಾವಿದರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಗಮನ ಸೆಳೆಯುತ್ತಾರೆ. ತಾಂತ್ರಿಕವಾಗಿ ಛಾಯಾಗ್ರಹಣ, ಸಂಕಲನ, ಕಲರಿಂಗ್ ಮತ್ತು ಹಿನ್ನೆಲೆ ಸಂಗೀತ ಸಿನಿಮಾದ ಹೈಲೈಟ್ಸ್ ಎನ್ನಬಹುದು. ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಕಂ ಕ್ರೈಂ-ಥ್ರಿಲ್ಲರ್ ಸಿನಿಮಾಗಳನ್ನು ಇಷ್ಟಪಡುವವರು ಒಮ್ಮೆ “ಥಗ್ಸ್ ಆಫ್ ರಾಮಘಡ’ ನೋಡಿ ಬರಲು ಅಡ್ಡಿಯಿಲ್ಲ
ಜಿ.ಎಸ್.ಕೆ