“ಜೇಮ್ಸ್’ ಸಿನಿಮಾದ ನಂತರ ಮತ್ತೂಮೆ ಪವರ್ ಸ್ಟಾರ್ ಪುನೀತ್ ರಾಜ ಕುಮಾರ್ ಅವರನ್ನು ಬಿಗ್ ಸ್ಕ್ರೀನ್ ಮೇಲೆ ಕಣ್ತುಂಬಿಕೊಳ್ಳುವ ಅವಕಾಶ, ಈ ವಾರ ತೆರೆಕಂಡಿರುವ “ಲಕ್ಕಿ ಮ್ಯಾನ್’ ಸಿನಿಮಾದ ಮೂಲಕ ಬಂದಿದೆ.
ಪುನೀತ್ ರಾಜಕುಮಾರ್ ಅಭಿನಯಿಸಿರುವ ಚಿತ್ರ ಎಂಬ ಕಾರಣ ಮತ್ತು ಹೆಗ್ಗಳಿಕೆಯಿಂದಾಗಿ, ಒಂದಷ್ಟು ನಿರೀಕ್ಷೆ ಮೂಡಿಸಿದ್ದ “ಲಕ್ಕಿ ಮ್ಯಾನ್’ ಸಿನಿಮಾದಲ್ಲಿ, ಆರಂಭದಿಂದಲೂ ಚಿತ್ರತಂಡ ಹೇಳಿಕೊಂಡು ಬಂದಿರುವಂತೆಯೇ, ಪುನೀತ್ ರಾಜ್‌ಕುಮಾರ್ ದೇವರ ರೂಪದಲ್ಲಿ ಪ್ರತ್ಯಕ್ಷವಾಗುತ್ತಾರೆ.
ಅರ್ಜುನ್ ನಾಗಪ್ಪ ಎಂಬ ಯಡವಟ್ಟು ಹುಡುಗನ ಜೀವನದಲ್ಲಿ ಆತ ಮಾಡಿಕೊಳ್ಳುವ ಯಡವಟ್ಟಿನಿಂದ ಏನೇನೋ ಅನಾಹುತಗಳು ನಡೆಯುತ್ತವೆ. ಅದೆಲ್ಲವನ್ನು ಸರಿಪಡಿಸಿಕೊಳ್ಳಲು ದೇವರು ಸೆಕೆಂಡ್ ಚಾನ್ಸ್ ಕೊಟ್ಟರೆ ಹೇಗಿರುತ್ತದೆ ಎನ್ನುವುದು “ಲಕ್ಕಿಮ್ಯಾನ್’ ಸಿನಿಮಾದ ಕಥೆಯ ಒಂದು ಎಳೆ. ತಮಿಳಿನ “ಓ ಮೈ ಕಡುವುಳೆ’ ಎಂಬ ಚಿತ್ರವನ್ನು ಕನ್ನಡದ ನೇಟಿವಿಟಿಗೆ ತಕ್ಕಂತೆ ಒಂದಷ್ಟು ಬದಲಾವಣೆ ಮಾಡಿಕೊಂಡು “ಲಕ್ಕಿಮ್ಯಾನ್’ ಮಾಡಲಾಗಿದೆ.
ಇದನ್ನೂ ಓದಿ:ಹರಿಯಾಣದಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಅವಘಡ : ನೀರಿನಲ್ಲಿ ಮುಳುಗಿ 6 ಮಂದಿ ಸಾವು
ದೇವರ ಆಟ, ಯಡವಟ್ಟು ಹುಡುಗನ ಪರದಾಟದಲ್ಲಿ ಲವ್, ಸೆಂಟಿಮೆಂಟ್, ಎಮೋಶನ್ಸ್, ಫ್ರೆಂಡ್‌ಶಿಪ್, ಕಾಮಿಡಿ ಹೀಗೆ ಎಲ್ಲವೂ ಹದವಾಗಿ ಮೇಳೈಸಿದೆ. ಸಿನಿಮಾದ ಮೊದಲಾರ್ಧ ತಮಾಷೆಯಾಗಿ ಮತು ವೇಗವಾಗಿ ಸಾಗುವ ಚಿತ್ರಕಥೆ ದ್ವಿತಿಯಾರ್ಧದಲ್ಲಿ ಕೊಂಚ ಗಂಭೀರವಾಗುತ್ತ, ಮಂದವಾಗುತ್ತದೆ. ಚಿತ್ರಕಥೆ, ನಿರೂಪಣೆ ಮತ್ತು ಸಂಭಾಷಣೆಯ ಕಡೆಗೆ ಇನ್ನಷ್ಟು ಗಮನ ಕೊಟ್ಟಿದ್ದರೆ, “ಲಕ್ಕಿಮ್ಯಾನ್’ ಇನ್ನೂ ಪರಿಣಾಮಕಾರಿಯಾಗಿ ಪ್ರೇಕ್ಷಕರನ್ನು ಮುಟ್ಟುವ ಸಾಧ್ಯತೆಯಿತ್ತು.
ಇನ್ನು ಆರಂಭದಲ್ಲಿಯೇ ಹೇಳಿದಂತೆ, ಇದು ಪುನೀತ್ ರಾಜ್‌ಕುಮಾರ್ ಅವರನ್ನು ಮತ್ತೂಮ್ಮೆ ಕಣ್ತುಂಬಿಕೊಳ್ಳುವಂಥ ಸಿನಿಮಾ. ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಇರುವಷ್ಟು ಹೊತ್ತು, ತಮ್ಮ ಎನರ್ಜಿಟಿಕ್ ಮ್ಯಾನರಿಸಂ, ಸಹಜ ನಗು ಮತ್ತು ಭಾವಾಭಿನಯದ ಮೂಲಕ ನೋಡುಗರನ್ನು ಆವರಿಸಿಕೊಳ್ಳುತ್ತಾರೆ.
ಉಳಿದಂತೆ ಕೃಷ್ಣ ನಾಯಕನಾಗಿ, ಸಂಗೀತಾ ಶೃಂಗೇರಿ, ರೋಶನಿ ಪ್ರಕಾಶ್ ನಾಯಕಿಯರಾಗಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಫ್ಯಾಮಿಲಿ ಆಡಿಯನ್ಸ್ ಒಮ್ಮೆ ಈ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಅಡ್ಡಿಯಿಲ್ಲ.
ಜಿ.ಎಸ್.ಕಾರ್ತಿಕ ಸುಧನ್