ನಿರ್ದೇಶಕ ಮಹಾಂತೇಶ್ ಮದರಿಕಯವರು ಬಿಎಂಆರ್‌ಸಿಎಲ್‌ನಲ್ಲಿ ಉದ್ಯೋಗಿ. ಟೆಕ್ನಿಕಲ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ದಿನಾ ಬೆಳಗ್ಗೆ ಆರು ಗಂಟೆಗೆ ಪ್ಯಾಸೆಂಜರ್ ಮೆಟ್ರೋ ರೈಲು ಹೋಗುವ ಮುನ್ನ ಐದು ಗಂಟೆಗೆ ಒಂದು ಪೈಲಟ್ ಟ್ರೈನ್ ಹೋಗುತ್ತದೆ. ಟ್ರ್ಯಾಕ್‌ನಲ್ಲಿ ಏನಾದರೂ ಅಡೆತಡೆ ಇದೆಯಾ, ಯಾರಾದರೂ ಅಡ್ಡ ಹಾಕಿದ್ದಾರಾ ಎಂದು ಪರಿಶೀಲಿಸುವ ಸಲುವಾಗಿ ಆ ರೈಲು ಹೋಗುತ್ತದೆ. ಅದರಲ್ಲಿ ಒಂದಷ್ಟು ಮಂದಿ ಮೆಟ್ರೋ ಟೆಕ್ನಿಷಿಯನ್ಸ್ ಇರುತ್ತಾರೆ. ಆ ಬೆಳಗಿನ ಟ್ರಿಪ್‌ನಲ್ಲಿ ಕೆಲವೊಮ್ಮೆ ರೈಲು ಜರ್ಕ್ ತಗೊಂಡಂತೆ ಆಗುತ್ತಿತ್ತಂತೆ. ಆಗಲೇ ಮಹಾಂತೇಶ್‌ಗೆ “ಜರ್ಕ್’ ಟೈಟಲ್ ಸೂಕ್ತವಾಗಿದೆ ಎನಿಸಿದ್ದು. ಅದರಂತೆ ಈಗ ಮಹಾಂತೇಶ್ ತಮ್ಮ ಚೊಚ್ಚಲ ಸಿನಿಮಾಕ್ಕೆ “ಜರ್ಕ್’ ಎಂದು ಹೆಸರಿಟ್ಟು, ಮುಹೂರ್ತ ಕೂಡಾ ಮಾಡಿದ್ದಾರೆ.
ಅಂದಹಾಗೆ, ಮಹಾಂತೇಶ್ ಮದಕರಿ ಮೆಟ್ರೋ ಉದ್ಯೋಗಿ. ಈಗ “ಜರ್ಕ್’ ಎಂಬ ಸಿನಿಮಾ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಈ ಹಿಂದೆ ಕೆಲವು ಸಿನಿಮಾಗಳಿಗೆ ಡೈಲಾಗ್ ಬರೆದ ಮಹಾಂತೇಶ್ ಅವರನ್ನು ಚಿತ್ರರಂಗ ಉಚಿತವಾಗಿ ದುಡಿಸಿಕೊಳ್ಳಲು ನೋಡಿದಾಗ ಜೀವನದ ದಾರಿಗಾಗಿ ಉದ್ಯೋಗ ಹಿಡಿದಿದ್ದಾರೆ. ಈಗ ಜೀವನಕ್ಕೆ ಬೇಕಾದಷ್ಟು ಸಂಬಳ ಬರುತ್ತದೆ. ಹಾಗಾಗಿ, ಈಗ ಸಿನಿಮಾ ಮಾಡಲು ಬಂದಿದ್ದಾರೆ.
ಈ ಚಿತ್ರದಲ್ಲಿ ಜೀವನ ಅನ್ನೋ ಜರ್ನಿಯಲ್ಲಿ ಹಂಪ್‌ಗ್ಳು ಬರುತ್ತವೆ, ವೇಗದಲ್ಲಿದ್ದ ಬದುಕು ಒಮ್ಮೆಲೇ ನಿಂತಂತಾಗುತ್ತದೆ ಎಂಬ ವಿಷಯವನ್ನು ಭಿನ್ನವಾಗಿ ಹೇಳಲು ಹೊರಟಿದ್ದಾರಂತೆ. ಕೆಎಎಸ್ ಕೋಚಿಂಗ್ ಕ್ಲಾಸ್‌ಗೆಂದು ಬೆಂಗಳೂರಿಗೆ ಬರುವ ಹುಡುಗನಿಗೆ ಇಲ್ಲಿ ಆಗುವ ಅನುಭವಗಳ ಮೂಲಕ ಕಥೆ ಹೇಳುತ್ತಾ ಹೋಗಿದ್ದಾರಂತೆ. ಸಾಕಷ್ಟು ಬೀದಿ ನಾಟಕಗಳನ್ನು ಮಾಡಿದ್ದ ಮಹಾಂತೇಶ್‌ಗೆ ಸಿನಿಮಾದಲ್ಲಿ ಕಮರ್ಷಿಯಲ್ ಅಂಶಗಳ ಜೊತೆಗೆ ಸಂದೇಶ ಕೂಡಾ ಇರಬೇಕೆಂಬ ಆಸೆಯಿಂದ ಚಿತ್ರದಲ್ಲಿ ಸಾಮಾಜಿಕ ಸಂದೇಶವನ್ನೂ ಇಟ್ಟಿದ್ದಾರಂತೆ. ಇನ್ನು, ಮಹಾಂತೇಶ್, ನಿರ್ದೇಶಕ ಜಯತೀರ್ಥ ಅವರ ಫಾಲೋವರ್ ಅಂತೆ.
ಚಿತ್ರದಲ್ಲಿ ಕೃಷ್ಣ ರಾಜ್ ನಾಯಕರಾಗಿ ನಟಿಸುತ್ತಿದ್ದು, ಚಿತ್ರದುರ್ಗದಿಂದ ಬೆಂಗಳೂರಿಗೆ ಕೆಎಎಸ್ ಕೋಚಿಂಗ್‌ಗೆ ಬೆಂಗಳೂರಿಗೆ ಬರುವ ಪಾತ್ರವಂತೆ. ಈ ಪಾತ್ರದ ಮೂಲಕ ನೆಲೆನಿಲ್ಲುವ ವಿಶ್ವಾಸವೂ ಅವರಿಗಿದೆ. ಚಿತ್ರದಲ್ಲಿ ಪದ್ಮಶ್ರೀ ಹಾಗೂ ಆಶಾ ಭಂಡಾರಿ ನಾಯಕಿಯರಾಗಿ ನಟಿಸುತ್ತಿದ್ದಾರೆ. ಸಚಿನ್, ಪವನ್, ಬುಲೆಟ್ ಪ್ರಕಾಶ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಎಡ್ವರ್ಡ್ ಷಾ ಸಂಗೀತ, ಚಂದ್ರು ಸೊಂಡೆಕೊಪ್ಪ ಛಾಯಾಗ್ರಹಣವಿದೆ. ಮಯೂರ ಪ್ರೊಡಕ್ಷನ್ಸ್‌ನಡಿ ಈ ಸಿನಿಮಾ ನಿರ್ಮಾಣವಾಗುತ್ತಿದೆ.